ಆವತಿ ವೇದೆಯರು ಹರಸಿ ಹರಿಯುವ ನಾಡು

ವೇದವತಿ ಪರಮಸಖಿ ಸುವರ್ಣಮುಖಿ ಸಂಗಮಿಸಿ

ಬರದುರಿಗೆ ಬಸವಳಿದು ಬರಿದಾದ ಒಡಲುಗಳ

ಬೆಂಗಾಡ ಬಯಲಿನಲಿ ಕಂಗೆಟ್ಟ ಜನಪದಕೆ

ಸಂಭ್ರಮದ ಹಸಿರುಡಿಗೆ ಕಲ್ಪವೃಕ್ಷದ ಕೊಡುಗೆ

ಪೊಡಮಡುವೆ ಅಡಿಗಡಿಗೆ ನಿನ್ನ ಸಡಗರಕೆ ತಾಯೆ

ನಿನ್ನೊಡಲು ತುಂಬಿರಲು ಮೈದುಂಬಿ ಹರಿದಿರಲು

ಕಂಗು ತೆಂಗಿನ ತೇರು  ಬಾಳೆ ವೀಳೆಯ ಜೋರು

ನವಧಾನ್ಯ ಫಲಪುಷ್ಪ ನಳನಳಿಸಿ ಬೆಳೆ ಬೆಳೆದು 

ಭೂ ದೇವಿ ಮಡಿಲಿನಲಿ ಹಸಿರಸಿರಿ ಮುತ್ತುಗಳ

ಉಡಿದುಂಬಿ ಹರಸುವೆಯ ಅನುಗಾಲ ಮೈದುಂಬಿ

ಮಾರಿಕಣಿವೆಯ ರಣ ಮೌನ ಮುರಿದಿಹ ವಾಣಿ

ಜನರ ಬವಣೆಯ ನೀಗು ಅಮರ ಜಾನ್ಹವಿಯಾಗಿ

ಬರಿದಾದ ಬಯಲಿನಲಿ ಮಲೆನಾಡ ಸೆರಗಿನಲಿ

ನೆಲೆನಿಂತು ನಲಿದಾಡು ವಾಣಿವಿಲಾಸಿನಿಯಾಗಿ

ತುಂಬುತ್ತ ತುಳುಕುತ್ತ ಹೊರಚೆಲ್ಲಿ ಧುಮ್ಮಿಕ್ಕಿ

ಶತಮಾನದಿತಿಹಾಸ ಭವ್ಯತೆಯ ನೆನಪಿನಲಿ

ಮತ್ತೊಮ್ಮೆ ಹರಿಯುವೆಯ ಜೀವವಾಹಿನಿಯಾಗಿ

ರಾಯರಾ ಸೀಮೆಯಲಿ ಉರಿಬಿಸಿಲ ನಾಡಿನಲಿ

ಕಾತರದಿ ಕಾದಿಹರು ಸಂತಸದ ಸಿಂಚನಕೆ

ಮನದುಂಬಿ ಹರಸುತಲಿ ಮೈದುಂಬಿ ಹರಿದು ಬಾ

ತುಂಗಭಧ್ರೆಯ ಮಡಿಲ ಮಹಾ ಸಂಗಮಕೆ