ಬೆಕ್ಕಿನ ನಡಿಗೆಯ ಮುದ್ದಿನ ಬೆಡಗಿ
ಸಿಂಹದ ಕಟಿಯನು ಕುಲುಕುತ ಬಳುಕಿಸಿ
ಕುಂಭದ ಎದೆಯನು ಚೆಲ್ಲುವ ಜಂಭದಿ
ಹಂಡೆಯ ಜಘನದ ಗದಗದ ನಡಿಗೆಯ
ತುಂಬು ನಿತಂಬದ ಜಂಭದ ಚೆಲುವೆ
ಮದಗಜ ನಡಿಗೆಯ ಬೆಡಗಿನ ಹುಡುಗಿ
ಬಾಳೆಯ ಕಂಬದ ನುಣುಪಿನ ತೊಡೆಗಳ
ತೊಂಡೆಯ ಹಣ್ಣಿನ ಬಣ್ಣದ ತುಟಿಗಳ
ಚುಂಬನ ಚೋದಕ ಕೆಂದುಟಿ ಚೆಲುವೆ
ದಾಳಿಂಬೆ ದಂತದ ಸಾಲನು ಫಳಕಿಸಿ
ಹೂನಗೆ ಸೂಸುವ ಸುಂದರ ವದನೆ
ನವಿಲಿನ ನಡಿಗೆಯ ಅಂದದ ಬೆಡಗಿ
ಜಡೆಯಲಿ ಮುಡಿದಿಹ ಮಲ್ಲಿಗೆ ಮಾಲೆ
ಕಿವಿಯಲಿ ಹೊಳೆಯುವ ಹರಳಿನ ಓಲೆ
ಝಣಝಣ ಗೆಜ್ಜೆಯ ಹೆಜ್ಜೆಯ ಸದ್ದಲಿ
ಬಿಸಿಲಿನ ಝಳದಲು ತಂಪನೆ ಸೂಸುವ
ಹರಿಷಿಣ ಕೆನ್ನೆಯ ಕನಸಿನ ಬಾಲೆ
ಖನಿಜದ ನಾಡಿನ ಪ್ರೇಮದ ಲೀಲೆ
ಕೆರಳಿದ ನಾಗಿಣಿಯಾಟದ ಕುರುಳನು
ಬೆರಳಲಿ ಸರಿಸುವ ನೆಪದಲಿ ತರಳೆಯೆ
ಪಂಚಮ ರಾಗದಿ ಹಾಡನು ಗುನುಗುತ
ಮನದಲಿ ಪ್ರೇಮದ ಭಾವವ ಸುರಿಸುವ
ಗಲಿಬಿಲಿಗೊಳಿಸುವ ಕಣ್ಣಿನ ಸಂಚಲಿ
ಗಮನವ ಸೆಳೆಯುವ ಸುಂದರ ಗಮನೆ
ಕಬ್ಬಿನ ಜಲ್ಲೆಯ ಬಿಲ್ಲನು ಹಿಡಿದಿಹ
ಹೂವಿನ ಬಾಣವ ಹೂಡುವ ಮದನನ
ಕಾಡಿಸಿ ಬೇಡಿಸಿ ಕಣ್ಣಲೆ ಕೊಲ್ಲುವ
ಕೋಗಿಲೆ ಕಂಠದ ಇಂಪಲಿ ಉಲಿಯುವ
ವಸಂತ ಮಾಸದ ಪ್ರೇಮದ ಚಿಲುಮೆಯ
ಬಿಸಿಲಿನ ಬಯಲಲು ತಣ್ಣಗೆ ಉಕ್ಕಿಸೊ
ಹಂಸದ ನಡಿಗೆಯ ಬಿಂಕದ ರಮಣಿ
ಸಂಪಿಗೆ ಎಸಳಿನ ನೀಳದ ನಾಸಿಕ
ಕಪ್ಪಲಿ ತೀಡಿದ ಬಾಗಿದ ಹುಬ್ಬನು
ಬಿಡದೆ ಹಿಗ್ಗಿಸಿ ಬಗ್ಗಿಸಿ ಕುಣಿಸುವ
ಬಯಕೆಯ ಬಲೆಯನು ಒಲವಲೆ ಹೆಣೆಯುವ
ಜಿಂಕೆಯ ಕಣ್ಣಿನ ಪ್ರೀತಿಯ ಅರಗಿಣಿ
ಬಿಸಿಲಲಿ ಬೆವರಿನ ಮುತ್ತಿನ ಮಣಿಗಳು
ಮುಖದಲಿ ಮೆತ್ತಿಹ ಮತ್ತಿನ ಹನಿಗಳ
ತೆಳುವಿನ ಬೆರಳಲಿ ಹೊರಳಿಸಿ ಬೀಳಿಸಿ
ಓರೆಯ ಕಣ್ಣಲಿ ನೋಟವ ಬೀರುವ
ಮಾದಕ ಕಂಗಳ ಗುಂಗನು ಹಿಡಿಸುವ
ಸಂಚನು ಹೊಸೆಯುವ ಬಿಂಕದ ನಡಿಗೆಯ
ರಣಭಣ ಬಿಸಿಲಿನ ನಮ್ಮೂರ ಚಲುವೆ
ಮಿಂಚಿನ ಮಾಟದ ಚುಂಬಕ ನೋಟದ
ನಿದ್ದೆಯ ಕೆಡಿಸುವ ಬಳುಕುವ ಸೊಂಟದ
ಕಂಚಿನ ಕಂಠದಿ ಕನ್ನಡ ನುಡಿಯುವ
ಮಾತಿನ ಗುಡುಗಲೆ ಕೀಟಲೆ ಹುಡುಗರ
ನರಗಳ ಸಡಿಲಿಸಿ ಗಂಟಲ ಒಣಗಿಸಿ
ಮಾತನು ಉಡುಗಿಸಿ ಥರಥರ ನಡುಗಿಸೊ
ಸುಡುಸುಡು ಬಿಸಿಲಿನ ಬಿಸಿಲೂರ ಸಬಲೆ
ಪ್ರತಿಕ್ರಿಯೆ (1)