ಬೆಣ್ಣೆಯ ಕದಿಯಲು ಮನಸೇ ಬಾರದು
ಕದ್ದರು ಯಾರೂ ದೂರನು ನೀಡರು
ಕದಿಯುವ ಸಮಯದಿ ಸಿಕ್ಕಿದ ಕೂಡಲೆ
ತಾವೇ ಗಡಿಗೆಯ ಕೈಯಲೆ ಕೊಡುವರು
ಕದಿಯದೆ ತಿಂದರೆ ರುಚಿಯೇ ಬಾರದು
ಸುಮ್ಮನೆ ಕುಳಿತರೆ ಹೊತ್ತೇ ಹೋಗದು
ಕಾಡಿನ ಕತೆಗಳ ನೆನೆದರು ಬಾಲರು
ಕಾಡಲಿ ಆಡುವ ಯೋಜನೆ ಹೆಣೆದರು
ಹೇಳದೆ ಕೇಳದೆ ಸುಳಿವನು ನೀಡದೆ
ಗೋಕುಲ ಬಾಲರು ಹೊರಟರು ಕಾಡಿಗೆ
ಪೊದೆಗಳ ಕೊಡವುತ ಮರಗಳ ಏರುತ
ಜೇನನು ಹುಡುಕುತ ಹಣ್ಗಳ ಕೀಳುತ
ಪಿಕಗಳ ಕೆಣಕುತ ಕಪಿಗಳ ಅಣಕಿಸಿ
ನವಿಲಿನ ಗರಿಗಳ ಮುಡಿಗಳಿಗೇರಿಸಿ
ಕೊಳಲನು ಊದುತ ತಮಟೆಯ ಬಾರಿಸಿ
ಹಾಡುತ ಕುಣಿಯುತ ಹಾರುತ ಓಡುತ
ಆಡುತ ನೆಗೆಯುತ ಕೂಗುತ ನಲಿಯುತ
ಸಮಯದ ಪರಿವೆಯ ಮರೆತರು ಗೋಪರು
ಯಾವುದೆ ಪ್ರಾಣಿಗು ಹೆದರದ ಭೂಪರು
ತೀರದ ದಾಹವ ತಣಿಸುವ ಯಮುನಾ
ತೀರದಿ ಮಡುವನು ನೋಡಿದ ಕೃಷ್ಣನು
ಹಾರಿದ ರಭಸದಿ ಮಡುವಿನ ಮಧ್ಯಕೆ
ಚೀರಿದರೆಲ್ಲಾ ಮಿತ್ರರು ಭಯದಲಿ
ಸಾರಿದ ಕೃಷ್ಣನು ಜೋರಿನ ದನಿಯಲಿ
ಕಾರಿದ ವಿಷವನು ಕಾಳಿಯೆ ನಿಮಿಷದಿ
ಹೀರದೆ ಹೋದರೆ ಮುರಿಯುವೆ ಕೊರಳನು
ಕೆರಳಿದ ಕಾಳಿಯು ಹೆಡೆಗಳನರಳಿಸಿ
ಗರಳವನುಗುಳುತಲೆದ್ದನುಕ್ರೋಧದಿ
ಅಳುಕುವರೆಲ್ಲರುಮಡುವಿನೊಳಿಳಿಯಲು
ತರಳನು ನೀನೆನ್ನಳವನು ತಿಳಿಯದೆ
ನರಳುತ ಬೀಳುವೆ ರಕ್ತವ ಕಾರುತ
ಮುಳಿಯುತ ಕೃಷ್ಣನು ಮೆಟ್ಟಿದ ಕಾಳಿಯ
ತುಳಿಯುತ ಪಾದದಿ ಕಾಳಿಯ ಹೆಡೆಯನು
ಎಳೆಯುತ ಬಾಲವ ಕುಣಿದನು ಗಿರಿಧರ
ಗೆಜ್ಜೆಯ ಕಾಲಿನ ಹೆಜ್ಜೆಯನೊತ್ತುತ
ಜಜ್ಜಿದ ಹೆಡೆಗಳ ತಾಂಡವ ನಾಟ್ಯದಿ
ತುಳಿತದ ಹೊಡೆತವ ತಾಳದ ಕಾಳಿಯು
ಅಳುಕಿದ ಕಾರುತ ರಕುತವ ಹೆಡೆಯೊಳು
ಕಾಳಿಯ ಸತಿಯರು ದೈನ್ಯದಿ ಬೇಡಲು
ಕೃಷ್ಣನು ಕರುಣಿಸೆ ಜೀವದ ದಾನವ
ಮಡುವನು ತ್ಯಜಿಸಿ ಹೊರಟನು ಕಾಳಿಯು
ಗೋಕುಲವೆಲ್ಲಾ ನೆರೆಯಿತು ದಡದಲಿ
ಮಡುವಿನ ನೀರಲಿ ಮಿಂದರು ಗೋಪರು
ಹೊಗಳಿದರೆಲ್ಲರು ಕೃಷ್ಣನ ಕಾರ್ಯಕೆ
ದೇವಕಿ ನಂದನ ಜಯ ಗೋವರ್ಧನ
ಗೋಕುಲ ನಂದನ ಕಾಳಿಂಗ ಮರ್ಧನ
ಯಶೋದ ನಂದನ ಆನಂದವರ್ಧನ .
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!