ತುಂತುರು ಹನಿಯಲಿ ದಿನವಿಡಿ ಸುರಿಯುತ
ನಭದಲಿ ಬೆಳಕಿನ ವಿಸ್ಮಯ ರಂಗಿನ
ಬಾನಿಗೆ ಬಣ್ನದ ಮೆರುಗನು ನೀಡುವ
ಮಕ್ಕಳ ಮೋಹದ ಕಾಮನ ಬಿಲ್ಲನು
ದಿನಕರ ಕಿರಣವ ವಿಭಜಿಸಿ ಸೃಜಿಸುವೆ
ಆಲಿಯ ಕಲ್ಲಿನ ಮಳೆಯನು ಸುರಿಸುತ
ಭೂಮಿಗೆ ಬೆಳ್ಳಿಯ ಹೊದಿಕೆಯ ನಿರ್ಮಿಸಿ
ಬಾನಿನ ಬಯಲಲಿ ಬೆಳಕನು ಹಬ್ಬಿಸಿ
ಮಿಂಚಿನ ಬಳ್ಳಿಯ ಸುರುಳಿಯ ಸೃಷ್ಟಿಸಿ
ಚಿಣ್ಣರ ಮನದಲಿ ಸಂತಸ ತುಂಬುವೆ
ಹನಿಹನಿ ಜಿನುಗಲಿ ದಿನವಿಡಿ ಸುರಿಯಲು
ರಜವನು ಕೊಡಿಸುವೆ ಮಕ್ಕಳ ಮೋಜಿಗೆ
ಹಾದಿಯ ಬದಿಯಲಿ ಹರಿಯುವ ನೀರನು
ಕಾಲಲಿ ಚಿಮ್ಮುತ ಬಟ್ಟೆಯ ನೆನೆಸುವ
ಹಾಳೆಯ ಹಾಯಿಯ ದೋಣಿಯ ನಿರ್ಮಿಸಿ
ತೇಲುತ ವಾಲುತ ಓಡುವ ದೋಣಿಯ
ನೋಡುತ ಕೇಕೆಯ ಹಾಕುವ ಮಕ್ಕಳ
ನಲಿವನು ನೋಡುವ ಭಾಗ್ಯವ ನೀಡುವೆ
ಮಳೆಯಲಿ ಓಡುವ ಮಕ್ಕಳ ನಿಲ್ಲಿಸಿ
ಎಳೆದರು ಬಾರದೆ ಕೈಯನು ಕೊಸರುತ
ದೋಣಿಯ ನೋಡಲು ಓಡುವ ಮಕ್ಕಳ
ಹಿಡಿಯುವ ಸಾಹಸ ತಾಯಿಯ ಕಳವಳ
ತಾಳದೆ ಗುಡುಗುವೆ ಭಾರೀ ಸದ್ದಲಿ
ಧಡಭಡ ಗುಡುಗಿನ ಗುಡುಗುಡು ಮಲ್ಲನ
ಗುಡುಗಿನ ಸದ್ದಿಗೆ ಹೆದರಿದ ಮಕ್ಕಳು
ಧಾವಿಸಿ ಅಡಗರೆ ಅಮ್ಮನ ಮಡಿಲಲಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!