ಹೆಣ್ಣು-ಮರಳು
ಮರಳಿನಂಥಾ ಮಣ್ಣು,
ಮಣ್ಣಿನಂಥಾ ಮರಳು,
ಹೆಣ್ಣಿನಂಥಾ ನೆರಳು,
ನೆರಳಿನಂಥಾ ಹೆಣ್ಣು,
ಅಷ್ಟು ಸೊಗಸಾಗಿ, ಹದವಾಗಿ
ಒಣದಾಗಿ
ಗರಿಗರಿಯಾಗಿ ಕೈಗೆ ಸಿಗುವ
ಮರಳು,
ದಂಡೆಯ
ಮರಳಿನಲ್ಲಿ ಮನೆಕಟ್ಟಿದ ನೆನಪು,
ಮನೆ ಮುಂದಿನ ಮರಳ ದಿಬ್ಬದಲಿ,
ಕಪ್ಪೆಗೂಡಿನೊಳಗೆ ಕಪ್ಪೆ ಕೂಡಿಟ್ಟು,
ಬೆಳೆಗಾಗೆದ್ದು ಓಡೋಗಿ ನೋಡಿದ ಹಾಗೆ,
ಒದ್ದೆ ಮರಳು…
ಮರಳಿನಂಥಾ ಮರಳು,
ರಸ್ತೆಗೆ ಬಿದ್ದು, ಜರ್ರನೆ ನಾನು ನನ್ನ ಸ್ವಂತ ದ್ವಿಚಕ್ರಗಳ ಗಾಡಿ ಮೇಲಿಂದ ಜಾರಿ ಬಿದ್ದು,
ಇನ್ನೇನು ಆಯತಪ್ಪಿದೆ ಎನ್ನುವ
ಹಾಗೆ…
ರಸ್ತೆಯ ಮೇಲೆ ಓಡುವಾಗಲೆಲ್ಲಾ ಮೈಮೇಲೆ
ಭಯದ ನೆರಳು ಮೂಡಿಸುವ ಮರಳು.
ಹೆಣ್ಣಿನಂಥಾ ನೆರಳು,
ನೆರಳಿನಂಥಾ ಹೆಣ್ಣು
ಒಳಗೊಳಗೆ ಸರಿದು ದೂರದಲ್ಲೆಲ್ಲೋ ಮಾಯವಾದಂತೆ,
ಮತ್ತೆ ಬೆಳದಿಂಗಳಲ್ಲಿ ಹಾಗೆ
ಮುಂದೆ ಸರಿದು ಹೋದಂತೆ,
ಅವಳ, ಇವಳಾ, ಯಾವಳೋ,
ಅಂದಿನ ಹಾಗೆಯೇ ಎಂದೋ ಇದ್ದಂತವಳು
ಹೀಗೇಕೆ ಕಾಡಿ ನೆನಪಾದವಳು
ಆ ದೂರದೂರಿನಲ್ಲಿ ಮಳೆಯ ರಭಸಕ್ಕೆ ಅಂಜಿ,
ಮರದ ಕೆಳಗೆ ನಿಂತಾಗ
ಜೊತೆಯಲ್ಲಿ ಕೈಹಿಡಿದು,
ಎದೆಗಪ್ಪಿ ಬಿಸಿ ಮುತ್ತನಿಟ್ಟು ತುಟಿಯ
ರಮಿಸಿ, ಹೃದಯ ಮಿಡಿಸಿದವಳು,
ಇದೇ ಮಳೆ ಸುರಿದಾಗಲೆಲ್ಲಾ
ನೆರಳಾಗಿ, ನೂಲಿನ ಎಳೆಯಾಗಿ
ಕಾಡಹತ್ತುವಳು..
ನಳಿನ ಡಿ. ಕನ್ನಡ ಲೇಖಕಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!