ಮಡಿಲೊಳು ಸಾಸಿರ ಸಿಡಿಲುಗಳಾರ್ಭಟ
ಒಡಲಲಿ ಗರಗರ ತಿರುಗುವ ತಿರುಗಣೆ
ಸಾಗರ ಜಲವನು ರಭಸದಿ ಹೀರುತ
ಸುಳಿಯೊಳು ಸೇರಿಸಿ ಸರಬರ ತಿರುಗಿಸಿ
ತಿರುಗಣೆ ಪರಿಧಿಯ ಗಾಳಿಯ ಸೆಳೆಯುತ
ಸುತ್ತಲು ಮೋಡದ ದಟ್ಟಣೆ ಹೆಣೆಯುತ
ನಭದೊಳು ವಾಯುಪ್ರಕೋಪದ ಕೂಪ
ಜಲಧಿಗೆ ರಕ್ಕಸ ತರಂಗದ ಲೇಪ
ಮಾನವ ದುರಾಸೆಯ ಸಂಚಿತ ಪಾಪ
ಧರಣಿಗೆ ಪ್ರಳಯದ ಪಿಡುಗಿನ ತಾಪ
ಸಹಸ್ರ ಸಿಡಿಲಿನ ಹೊಡೆತದ ಮೊರೆತದಿ
ರಕ್ಕಸ ನಳಿಕೆಯ ಲಾಳಿಕೆ ರೂಪದಿ
ಕರಾಳ ಮೋಡದ ಸಿಡಿಲಿನ ಭುಗಿಲಲಿ
ಮೇಘಸ್ಫೋಟದ ಮುಗಿಲಿನ ದಿಗಿಲಲಿ
ನಾಗಾಲೋಟದಿ ಭೂಮಿಯ ತಾಡಿಸಿ
ಕುಂಭದ್ರೋಣದಿ ಮಳೆಯನು ಸೋರಿಸಿ
ಅಡೆತಡೆಯೊಡ್ಡುವ ಗಿರಿಗಳ ಕರಗಿಸಿ
ಮರಗಳ ಬೇರಿನ ಬುಡಗಳ ಸಡಿಲಿಸಿ
ಮನುಜನ ಜೀವನ ಧಾರೆಯ ಕೊಚ್ಚುತ
ಸೆಳೆಯುವ ನೀರಿನ ಪ್ರಳಯ ನರ್ತನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!