ಲಲಿತಾ ಸಹಸ್ರನಾಮ ೩೦೨ - ೩೦೬

Hrīmatī ह्रीमती (302)

೩೦೨. ಹ್ರೀಮತೀ

             ‘ಹ್ರೀ’ ಎಂದರೆ ವಿನಮ್ರತೆ. ವೇದಗಳು ದೇವಿಯನ್ನು ವಿನಮ್ರತೆ, ಮನಸ್ಸು, ತೃಪ್ತಿ, ಆಸೆ ಮತ್ತು ಪೋಷಣೆ ಮೊದಲಾದವುಗಳ ‘ವರ ಪ್ರಧಾತೆ’ ಎಂದು ವಿವರಿಸುತ್ತವೆ. ಇವೆಲ್ಲವೂ ಮಾಯೆಯನ್ನು ಸೂಚಿಸುತ್ತವೆ. ದೇವಿಯ ಮಾಯಾ ರೂಪವನ್ನು ಈ ನಾಮದಲ್ಲಿ  ವಿವರಿಸಲಾಗಿದೆ. ದೇವಿಯ ವಿನಮ್ರ ಗುಣವು ಆಕೆಯನ್ನು ಒಣ ಪ್ರತಿಷ್ಠೆ ಮತ್ತು ಆಡಂಬರಗಳಿಂದ ಕೂಡಿದ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸದಂತೆ ತಡೆಹಿಡಿಯುತ್ತದೆ. ದೇವಿಯು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಪಮಾನವೆಂದು ಭಾವಿಸುತ್ತಾಳೆ. ಶಕ್ತಿಯ ಆರಾಧನೆಯು ಯಾವಾಗಲೂ ಬಹಿರಂಗವಾಗಿರದೆ ಏಕಾಂತವಾಗಿರಬೇಕು. ದೇವಿಯು ಇಂತಹ ಆಂತರಂಗಿಕ ಅಥವಾ ಏಕಾಂತ ಪೂಜೆಗಳನ್ನು ಇಷ್ಟಪಡುತ್ತಾಳೆ. ದೇವಿಯನ್ನು ಅಂತರಂಗದಲ್ಲಿ ಪೂಜಿಸುವುದರಿಂದ ಆಕೆಯ ಸೂಕ್ಷ್ಮರೂಪಗಳಾದ ‘ಕಾಮಕಲಾ’ ಮತ್ತು ‘ಕುಂಡಲಿನೀ’ ರೂಪಗಳ ಅರಿವುಂಟಾಗುತ್ತದೆ. ಬಾಹ್ಯ ಪೂಜೆಗಳಿಗಿಂತ ಅಂತರಂಗದ ಪೂಜೆಗಳ ಮೂಲಕ ದೇವಿಯ ಸಾಕ್ಷಾತ್ಕಾರವು ಶೀಘ್ರವಾಗಿ ಆಗುತ್ತದೆ.

Hṛdyā हृद्या (303)

೩೦೩. ಹೃದ್ಯಾ

              ದೇವಿಯು ಹೃದಯದಲ್ಲಿ ನೆಲೆಸಿರುತ್ತಾಳೆ. ಆತ್ಮವು ಹೃದಯದ ಮಧ್ಯ ಭಾಗದಲ್ಲಿ ಇರತ್ತದೆಂದು ಹೇಳಲಾಗುತ್ತದೆ. ಹೃದಯವು ಕರುಣೆ ಮತ್ತು ಪ್ರೀತಿಗಳ ಸಂಕೇತವೂ ಅಗಿದೆ. ದೇವಿಯು ಜಗನ್ಮಾತೆಯಾಗಿರುವುದರಿಂದ ಈ ಗುಣಗಳು ಆಕೆಯಲ್ಲಿ ಅಂತರ್ಗತವಾಗಿವೆ ಅಥವಾ ಆಕೆಯು ಎಲ್ಲರಿಂದಲೂ ಪ್ರೀತಿಸಲ್ಪಡುತ್ತಾಳೆ ಎಂದು ಅರ್ಥೈಸಬಹುದು.

              ಕಠೋಪನಿಷತ್ತು (೨.೧.೧೨-೧೩) ಹೀಗೆ ಹೇಳುತ್ತದೆ, "ಅಂಗುಷ್ಟ ಮಾತ್ರವಿರುವ (ಹೆಬ್ಬರಳಿನ ಗಾತ್ರದಷ್ಟಿರುವ) ಪುರುಷನು (ಆತ್ಮನು) ಹೊಗೆರಹಿತ ಜ್ವಾಲೆಯಂತೆ ಕಾಣಿಸುತ್ತಾನೆ ಮತ್ತವನು ದೇಹದ ಮಧ್ಯಭಾಗದಲ್ಲಿ ವಿರಮಿಸುತ್ತಾನೆ".

Heyopādeya-varjitā हेयोपादेय-वर्जिता (304)

೩೦೪. ಹೇಯೋಪಾದೇಯ-ವರ್ಜಿತಾ

            ದೇವಿಗೆ ಸಮ್ಮತಿಯಾಗಲಿ ಅಥವಾ ಅಸಮ್ಮತಿಯಾಗಲಿ ಯಾವುದೂ ಇಲ್ಲ. ಸಮ್ಮತಿ ಮತ್ತು ಅಸಮ್ಮತಿ (ಇದನ್ನು ಮಾಡು ಮತ್ತು ಇದನ್ನು ಮಾಡಬೇಡ) ಎನ್ನುವುಗಳನ್ನು ಶಾಸ್ತ್ರಗಳು ವಿಧಿಸುತ್ತವೆ. ಈ ಶಾಸ್ತ್ರಗಳಿಗೆ ಆಧಾರವಾಗಿರುವುದು ವೇದಗಳು ಮತ್ತು ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಕೆಲವೊಂದು ಪದ್ಧತಿಗಳು. ಶಾಸ್ತ್ರಗಳೆಂದರೆ ನೀತಿ ನಿಯಮಾವಳಿ(ಧಾರ್ಮಿಕ ಕಟ್ಟುಪಾಡು)ಗಳಾಗಿದ್ದು ಅವು ಕೆಲವೊಂದು ಕಾರ್ಯಗಳನ್ನು ಸಮ್ಮತಿಸುತ್ತವೆ ಮತ್ತು ಕೆಲವೊಂದು ಕಾರ್ಯಗಳನ್ನು ಮಾಡದಂತೆ ನಿರ್ಭಂದ ಹೇರುತ್ತವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಶಾಸ್ತ್ರಗಳು ನಾವು ಅನುಸರಿಸಬೇಕಾದ ನೀತಿ ನಿಯಮಾವಳಿಗಳ ಕುರಿತಾದ ಕಟ್ಟಳೆಗಳ ಸಂಗ್ರಹ ಗ್ರಂಥಗಳೆಂದು ಹೇಳಬಹದು. ಬಹುತೇಕ ಶಾಸ್ತ್ರಗಳು ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪದ್ಧತಿಗಳ ಮೇಲೆ ಆಧಾರಿತವಾಗಿವೆ. ಶತಮಾನಗಳ ಹಿಂದೆ ಅನುಸರಿಸುತ್ತಿದ್ದ ಮಾರ್ಗದರ್ಶಕಗಳು ಇಂದಿಗೂ ಪ್ರಸ್ತುತವಾಗಿವೆ ಅಥವಾ ಅನ್ವಯವಾಗುತ್ತವೆಂದು ಹೇಳಲಾಗದು. ಆದ್ದರಿಂದ ಶಾಸ್ತ್ರಗಳ ಮರ್ಮವನ್ನು ಅರಿಯದೇ ಅವುಗಳನ್ನು ಅನುಸರಿಸುವುದು ಅರ್ಥರಹಿತವೆನಿಸುತ್ತದೆ. ಇಂದಿನ ಪರಿಸ್ಥಿತಿಗಳಿಗನುಗುಣವಾಗಿ ಹೊಂದಿಕೊಂಡು ಹೋಗುವುದು ಪಾಪಕಾರ್ಯವೆನಿಸುವುದಿಲ್ಲ. ಆದರೆ ಈ ರೀತಿಯ ಸಮ್ಮತಿ-ಅಸಮ್ಮತಿಗಳು ಮಾನವರಿಗೆ ಅನ್ವಯವಾಗುತ್ತವೆಯೇ ಹೊರತು ಪರಬ್ರಹಕ್ಕಲ್ಲ.

Rājarājārcitā राजराजार्चिता (305)

೩೦೫. ರಾಜರಾಜಾರ್ಚಿತಾ

            ದೇವಿಯು ರಾಜಾಧಿರಾಜರುಗಳಿಂದ ಮತ್ತು ಚಕ್ರವರ್ತಿಗಳಿಂದ ಪೂಜಿಸಲ್ಪಡುತ್ತಾಳೆ. ಈ ನಾಮವನ್ನು ಮುಂದಿನ ನಾಮದೊಂದಿಗೆ ಓದಿಕೊಳ್ಳಬೇಕು. ರಾಜರಾಜ ಎಂದರೆ ಇಲ್ಲಿ ಅದು ಶಿವನನ್ನು ಪ್ರತಿನಿಧಿಸುತ್ತದೆ. ಆಕೆಯು ಶಿವನ ಪ್ರಿಯ ಪತ್ನಿಯಾಗಿರುವುದರಿಂದ, ಶಿವನು ಆಕೆಯನ್ನು ಪೂಜಿಸುತ್ತಾನೆ (ಆರಾಧಿಸುತ್ತಾನೆ) ಎನ್ನುವುದು ಸಮಂಜಸವಾದ ವಿಶ್ಲೇಷಣೆ ಎನ್ನಬಹುದು. ಸ್ತ್ರೀಯರನ್ನು ಅವರ ಮಾತೃತ್ವದ ಗುಣಕ್ಕಾಗಿ ಪೂಜಿಸಲಾಗುತ್ತದೆ ಮತ್ತು ಶಿವನು ವಿಶ್ವಗುರುವಾಗಿರುವುದರಿಂದ ಅವನು ತಾನು ಭೋದಿಸಿದ್ದನ್ನು ಅನುಸರಿಸುತ್ತಾನೆ.

            ಈ ನಾಮಕ್ಕೆ ಇನ್ನೊಂದು ವಿಶ್ಲೇಷಣೆಯೂ ಇದೆ. ರಾಜರಾಜನೆಂದರೆ ಕುಬೇರ, ಮನು ಮತ್ತು ಇತರೇ ಹತ್ತು ಜನ ಸೇರಿ ಒಟ್ಟು ಹನ್ನೆರಡು ರಾಜರಾಜರಿದ್ದಾರೆ. ಇವರ ಬಗೆಗಿನ ಹೆಚ್ಚಿನ ವಿವರಗಳಿಗೆ ೨೩೮ನೇ ನಾಮದ ಚರ್ಚೆಯನ್ನು ನೋಡಿ. ಈ ಪ್ರತಿಯೊಬ್ಬರೂ ದೇವಿಯನ್ನು ತಮ್ಮದೇ ಆದ ರೀತಿಯಲ್ಲಿ ಪೂಜಿಸುತ್ತಾರೆ ಮತ್ತು ಅವರಿಗೆ ತಮ್ಮದೇ ಆದ ಪ್ರತ್ಯೇಕ ಪಂಚದಶೀ ಮಂತ್ರವಿದ್ದು ಅದು ೧೫ ಬೀಜಾಕ್ಷರಗಳಿರುವ ಮಂತ್ರದ ಮೂಲಸ್ವರೂಪವನ್ನು ಬದಲಾಯಿಸದೇ ಮಾರ್ಪಾಡಾಗುತ್ತಾ ಹೋಗುತ್ತದೆ. ಈ ಎಲ್ಲಾ ಹನ್ನೆರಡು ರಾಜರಾಜರುಗಳ ಹೆಸರುಗಳೂ ಸಹ ಈ ಸಹಸ್ರನಾಮದಲ್ಲಿ ಸ್ಥಾನವನ್ನು ಪಡೆದುಕೊಂಡಿವೆ. ಆದ್ದರಿಂದ ದೇವಿಯು ಈ ಹನ್ನೆರಡು ರಾಜರಾಜರುಗಳಿಂದ ಪೂಜಿಸಲ್ಪಡುತ್ತಾಳೆಂದು ಹೇಳಲಾಗುತ್ತದೆ. ಅವರುಗಳು ದೇವಿಯನ್ನು ಪ್ರಾಮಾಣಿಕ ಭಕ್ತಿಯಿಂದ ಪೂಜಿಸಿದ್ದರಿಂದ ಅವರುಗಳನ್ನು ರಾಜರಾಜರೆಂದು ಕರೆಯಲಾಗಿದೆ ಮತ್ತು ಅವರಿಗೆ ಆ ಮಾನ್ಯತೆಯನ್ನು ದೇವಿಯು ಕೊಡಮಾಡಿದ್ದಾಳೆ.

Rājñī राज्ञी (306)

೩೦೬. ರಾಜ್ಞೀ

          ರಾಜ್ಞೀ ಎಂದರೆ ರಾಣಿ ಎಂದರ್ಥ. ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ರಾಜರಾಜನಾಗಿರುವ ಶಿವನ ಹೆಂಡತಿಯಾಗಿರುವುದರಿಂದ, ದೇವಿಯು ಈ ಸಮಸ್ತ ಪ್ರಪಂಚದ ರಾಣಿಯಾಗಿದ್ದಾಳೆ. ಈ ವಿಶ್ವವು ಶಿವ ಮತ್ತು ಶಕ್ತಿಯರಿಂದ ಪರಿಪಾಲಿಸಲ್ಪಡುತ್ತಿದೆ. ಬಹುಶಃ ಈ ಕಾರಣದಿಂದಾಗಿಯೇ ದೇವಿಯನ್ನು ಮಾತೆಯೆಂದು ಸಂಭೋದಿಸಲಾಗುತ್ತದೆ ಅಥವಾ ಸಂಕ್ಷಿಪ್ತವಾಗಿ ಮಾ ಎಂದು ಕರೆಯುತ್ತಾರೆ. ಯಾವಾಗ ಒಬ್ಬರು ಮಾ ಎಂದು ದೇವಿಯನ್ನು ಕರೆಯುತ್ತಾನೆಯೋ ಆಗ ಅವನಲ್ಲಿ ದೇವಿಯು ತನಗೆ ಸಂಭಂದಿಸದವಳೆನ್ನುವ ಭಾವನೆ ಉಂಟಾಗಿ ಆಕೆಯು ನಮಗೆ ಮತ್ತಷ್ಟು ಹತ್ತಿರದವಳೆನಿಸುತ್ತಾಳೆ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 302-306 http://www.manblunde...  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.