ಲಲಿತಾ ಸಹಸ್ರನಾಮ ೩೧೧-೩೧೬
Rasyā रस्या (311)
೩೧೧. ರಸ್ಯಾ
ದೇವಿಯು ಆತ್ಮದ ಸಾರ ರೂಪದಲ್ಲಿದ್ದಾಳೆ. ರಸ (ಸಾರ) ಎನ್ನುವುದರ ಅರ್ಥವನ್ನು ತೈತ್ತರೀಯ ಉಪನಿಷತ್ತಿನ (೨.೭) ಮೂಲಕ ತಿಳಿದುಕೊಳ್ಳಬಹುದು, ಅದು ’ರಸೋ ವೈ ಸಹಃ’ ಎಂದು ಹೇಳುತ್ತದೆ. ಇದರರ್ಥ, "ಅದನ್ನು ಮಧರುತೆಯೊಂದಿಗೆ (ಸಿಹಿಯೊಂದಿಗೆ) ಗುರುತಿಸಬೇಕು". ಅದು ಮುಂದುವೆರೆಯುತ್ತಾ ಹೇಳುತ್ತದೆ, "ಯಾರಾದರೂ ಈ ಮಧುರತೆಯನ್ನು ಹೊಂದಿದ್ದರೆ ಅವರು ಸಂತೋಷವಾಗಿರುತ್ತಾರೆ" ಮತ್ತು ಈ ಮಧುರತೆಯ ಮೂಲವು ಅತ್ಮದಿಂದ ಹೊರಹೊಮ್ಮುತ್ತದೆ. ಸಂತೋಷವೇ ಪರಮಾನಂದವಾಗಿದ್ದು ಮತ್ತು ಆ ಪರಮಾನಂದವನ್ನು ವ್ಯಕ್ತಿಯೊಬ್ಬನು ಆತ್ಮಸಾಕ್ಷಾತ್ಕರವನ್ನು ಹೊಂದಿದಾಗ ಮಾತ್ರ ಅನುಭವಿಸಬಹುದು. "ಅದನ್ನು ಮಧರುತೆಯೊಂದಿಗೆ (ಸಿಹಿಯೊಂದಿಗೆ) ಗುರುತಿಸಬೇಕು" ಎನ್ನುವಲ್ಲಿನ ‘ಅದು’ ಶಬ್ದವು ಪರಮ ಆತ್ಮವನ್ನು ಸೂಚಿಸುತ್ತದೆ. ಈ ನಾಮವು ದೇವಿಯು ಪರಮ ಆತ್ಮದ ರೂಪದಲ್ಲಿದ್ದಾಳೆಂದು ಪ್ರಚುರಪಡಿಸುತ್ತದೆ. ಆ ಪರಮ ಆತ್ಮದ ಸಂಕುಚಿತ ಬ್ರಹ್ಮಾಂಡದ ರೂಪವನ್ನೇ ತೋರಿಕೆಯ ಆತ್ಮದ ಮೂಲಕ ಸಾಕ್ಷಾತ್ಕರಿಸಿಕೊಳ್ಳಬೇಕು.
Raṇatkiṅkiṇi-mekhalā रणत्किङ्किणि-मेखला (312)
೩೧೨. ರಣತ್ಕಿಂಕಿಣಿ-ಮೇಖಲಾ
ದೇವಿಯು ಸೊಂಟದ ಪಟ್ಟಿಯನ್ನು ಧರಿಸಿದ್ದು ಅದರಲ್ಲಿ ಕಿರು ಘಂಟೆಗಳು ನೇತಾಡುತ್ತಿವೆ. ಇದೇ ವಿಧವಾದ ವರ್ಣನೆಯು ಸೌಂದರ್ಯಲಹರಿಯಲ್ಲಿಯೂ (ಸ್ತೋತ್ರ ೭) ಸ್ಥಾನ ಪಡೆಯುತ್ತದೆ ಮತ್ತದು ಹೇಳುತ್ತದೆ, "ನಿನ್ನ ಸಪೂರವಾದ (ನಾಜೂಕಾದ) ಸೊಂಟವು ಝಣಝಣ ಸದ್ದುಮಾಡುವ ಸಣ್ಣ ಘಂಟೆಗಳಿರುವ ಎಳೆಗಳಿಂದ ಕೂಡಿದ ಬಂಗಾರದ ಒಡ್ಯಾಣದಿಂದ ಅಲಂಕರಿಸಲ್ಪಟ್ಟಿದೆ. ಯಾವಾಗ ದೇವಿಯು ನಡೆಯುತ್ತಾಳೆಯೋ ಆಗ ಈ ಕಿರು ಘಂಟೆಗಳು ಕಿಣಿಕಿಣಿ ಸದ್ದು ಮಾಡುತ್ತಾ ಅದರ ಮೂಲಕ ನಾದದ (ಶಬ್ದದ) ಉಗಮವಾಗುತ್ತದೆ. ಶಬ್ದವು ಮಣಿಪೂರಕ ಅಥವಾ ನಾಭಿ ಚಕ್ರದಿಂದ ಉತ್ಪನ್ನವಾಗುತ್ತದೆ; ಎಲ್ಲಿ ಒಡ್ಯಾಣವು ಧರಿಸಲ್ಪಡುವುದೋ ಅಲ್ಲಿ. ಶಿವನ ಡಮರುಗದಿಂದಲೂ ಶಬ್ದವು ಉತ್ಪನ್ನವಾಗುತ್ತದೆಂದು ಹೇಳಲಾಗುತ್ತದೆ. ಇದೇ ವಿಧವಾಗಿ ದೇವಿಯ ಒಡ್ಯಾಣದಿಂದ (ಸೊಂಟದ ಪಟ್ಟಿ/ ಡಾಬುವಿನಿಂದ) ಶಬ್ದದ ಉಗಮವಾಗುತ್ತದೆ ಎಂದು ಹೇಳಬಹುದು.
ಈ ವಿಧವಾದ ವಿವರಣೆಗಳು ಪ್ರಾರಂಭಿಕ ಹಂತದಲ್ಲಿರುವ ಸಾಧಕರಿಗೆ ದೇವಿಯ ಸ್ಥೂಲ ರೂಪವನ್ನು ಅರಿಯಲು ಸಹಾಯಕವಾಗುತ್ತವೆ ಎಂದು ಹೇಳಲಾಗುತ್ತದೆ. ದೇವಿಗೆ ನಾಲ್ಕು ರೂಪಗಳಿವೆ, ಅವುಗಳು ಹೀಗಿವೆ - ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ ಅಥವಾ ಕಾಮಕಲಾ ರೂಪ ಮತ್ತು ಸೂಕ್ಷ್ಮಾತೀಸೂಕ್ಷ್ಮ ರೂಪವಾದ ಕುಂಡಲಿನೀ ರೂಪ. ದೇವಿಯ ಸ್ಥೂಲರೂಪದ ವರ್ಣನೆಯು ನಮಗೆ ಹನ್ನೆರಡನೇ ನಾಮದಿಂದ ಐವತ್ತೊಂದರವರೆಗೆ ಸಿಗುತ್ತದೆ. ಆಕೆಯ ಸೂಕ್ಷ್ಮರೂಪದ ಅಂದರೆ ಮಂತ್ರರೂಪದ ವರ್ಣನೆಯು ನಮಗೆ ೮೫ನೇ ನಾಮದಿಂದ ೮೯ನೇ ನಾಮದವರೆಗೆ ಸಿಗುತ್ತದೆ. ದೇವಿಯ ಕಾಮಕಲಾ ರೂಪದ (ಸೂಕ್ಷ್ಮತರ ರೂಪದ) ವರ್ಣನೆಯು ನಮಗೆ ೮೮ ಮತ್ತು ೮೯ರಲ್ಲಿ ಸಿಗುತ್ತದೆ (ನಾಮ ೩೨೨ ಕಾಮಕಲಾ ರೂಪಾ ಆಗಿದೆ). ಅಂತಿಮವಾಗಿ, ದೇವಿಯ ಸೂಕ್ಷ್ಮಾತೀಸೂಕ್ಷ್ಮ ರೂಪದ ವರ್ಣನೆಯು ೯೦ನೇ ನಾಮದಿಂದ ಪ್ರಾರಂಭವಾಗಿ ೧೧೧ನೇ ನಾಮದವರೆಗೆ ಇರುತ್ತದೆ. (ನಾಮ ೪೭೫ರಿಂದ ೫೩೪ರವರೆಗೆ ಮಾನಸಿಕ ಚಕ್ರಗಳ ಕುರಿತಾದ ಚರ್ಚೆಯು ಕಂಡು ಬರುತ್ತದೆ.)
Ramā रमा (313)
೩೧೩. ರಮಾ
ರಮಾ ಎಂದರೆ ವಿಷ್ಣುವಿನ ಸಂಗಾತಿಯಾದ ಐಶ್ವರ್ಯಕ್ಕೆ ಅಧಿದೇವತೆಯಾದ ಲಕ್ಷ್ಮೀ. ದೇವಿಯು ಲಕ್ಷ್ಮೀ ರೂಪದಲ್ಲಿದ್ದಾಳೆ ಮತ್ತು ತನ್ನ ಭಕ್ತರಿಗೆ ಅವಳು ಐಶ್ವರ್ಯಗಳನ್ನು ದಯಪಾಲಿಸುತ್ತಾಳೆ. ಇಲ್ಲಿ ಐಶ್ವರ್ಯವೆಂದರೆ ಐಹಿಕ ಸುಖಭೋಗಗಳು ಮತ್ತು ಪಾರಮಾರ್ಥಿಕ ಸಂಪದಗಳು ಅಥವಾ ಭುಕ್ತಿ ಮತ್ತು ಮುಕ್ತಿ ಸಾಧಕಗಳು. ೩೧೩, ೩೧೪ ಮತ್ತು ೩೧೫ನೇ ನಾಮಗಳು ಒಟ್ಟಾಗಿ ಕಾಮಕಲಾ ಬೀಜವಾದ ’ಈಂ’ (ईँ) ರೂಪವಾಗುತ್ತದೆ. ಈ ನಾಮವು ’ಈ’ ಅಕ್ಷರವನ್ನು ಕೊಡುತ್ತದೆ (ಲಕ್ಷ್ಮೀ ಎನ್ನುವ ಶಬ್ದದಲ್ಲಿನ ಕಡೆಯ ಅಕ್ಷರವು ‘ಈ’ ಎನ್ನುವುದನ್ನು ಗಮನಿಸಿ).
Rākenduvadanā राकेन्दुवदना (314)
೩೧೪. ರಾಕೇಂದು ವದನಾ
ದೇವಿಯು ಮುಖವನ್ನು ಪೂರ್ಣ ಚಂದ್ರನಿಗೆ ಹೋಲಿಸಲಾಗಿದೆ, ಏಕೆಂದರೆ ಪೂರ್ಣಚಂದ್ರನು ಕಲೆಗಳಿಂದ ಮುಕ್ತನಾಗಿರುತ್ತಾನೆ. ಪೂರ್ಣಚಂದ್ರನು ಈ ಅಕ್ಷರದ ಮೇಲಿನ ಬಿಂದುವನ್ನು ಪ್ರತಿನಿಧಿಸುತ್ತದೆ; ಮತ್ತದು ಬೀಜಾಕ್ಷರವಾದ ’ಈಂ’ (ईं) ಆಗಿ ರೂಪಿತವಾಗುತ್ತದೆ. ಈ ಹಂತದಲ್ಲಿ ಈ (ई) ಅಕ್ಷರವು ಕೇವಲ ಬಿಂದುವೊಂದನ್ನು ಮಾತ್ರವೇ ತನ್ನ ಮೇಲಿರಿಸಿಕೊಂಡು ’ಈಂ’ (ईं) ಆಗಿದೆ ಆದರೆ ಅದಿನ್ನೂ ಕಾಮಕಲಾ ರೂಪವಾಗಿ ಪರಿವರ್ತನೆಯಾಗಬೇಕಾಗಿದೆ.
Ratirūpā रतिरूपा (315)
೩೧೫. ರತಿರೂಪಾ
ದೇವಿಯು ಮನ್ಮಥ ಅಥವಾ ಕಾಮನ ಹೆಂಡತಿಯಾದ ರತಿಯ ರೂಪದಲ್ಲಿದ್ದಾಳೆ. ಮೊದಲಿನೆರಡು ನಾಮಗಳಲ್ಲಿ, ’ಈಂ’ ಬೀಜದ (ಬೀಜಾಕ್ಷರದ) ಉಗಮವಾದರೆ ಅದು ಈ ನಾಮದಲ್ಲಿ ಸಂಪೂರ್ಣ ಬೀಜವಾಗಿ (ಬೀಜಾಕ್ಷರವಾಗಿ) ಹೊರಹೊಮ್ಮುತ್ತದೆ. ರತಿ ಮತ್ತು ಆಕೆಯ ಸಂಗಾತಿ ಮನ್ಮಥ ಇವರಿಬ್ಬರೂ ತಮ್ಮ ಕಾಮುಕತೆಗೆ ಹೆಸರಾಗಿದ್ದಾರೆ. ಕಾಮಕಲಾವು ಸಂಪೂರ್ಣ ಶುಭಪ್ರದವಾಗಿದ್ದು ಅದು ಸೂಕ್ಷ್ಮವಾಗಿ ಸೃಷ್ಟಿಕ್ರಿಯೆಯನ್ನು ಸೂಚಿಸುತ್ತದೆ. ಹಿಂದಿನ ನಾಮದಲ್ಲಿ ರೂಪಗೊಂಡ ’ಈಂ’ ಬೀಜಾಕ್ಷರವು ಈ ನಾಮದಲ್ಲಿ ’ಕಾಮಕಲಾ’ ಆಗಿ ಪರಿವರ್ತಿತಗೊಳ್ಳುತ್ತದೆ. ईं ಎನ್ನುವುದು ಮೇಲಿನ ಅರ್ಧಚಂದ್ರದ ವೃತ್ತವು ಹೆಚ್ಚಾದ ईं ಆಗುತ್ತದೆ ಅಥವಾ ಕಾಮಕಲಾದಲ್ಲಿ ईंನ ಮೇಲ್ಭಾಗದಲ್ಲಿರುವ ಭಾಗಶಃ c ಅಕ್ಷರದ ರೂಪದಲ್ಲಿದ್ದ ಅರ್ಧಚಂದ್ರವು ಅಗಲವಾದ U ಆಕಾರದ ಅರ್ಧಚಂದ್ರವಾಗಿ ಬದಲಾಗುತ್ತದೆ. ಕಾಮಕಲಾವನ್ನು ೩೨೨ನೇ ನಾಮವಾದ ಕಾಮಕಲಾ ರೂಪದಲ್ಲಿ ವಿಶದವಾಗಿ ಚರ್ಚಿಸಲಾಗಿದೆ.
Ratipriyā रतिप्रिया (316)
೩೧೬. ರತಿಪ್ರಿಯಾ
ದೇವಿಗೆ ಮನ್ಮಥನ ಹೆಂಡತಿಯಾದ ರತಿಯೆಂದರೆ ಬಹಳಷ್ಟು ಅಕ್ಕರೆ. ಉಪದೇವತೆಗಳಾದ ಯಕ್ಷಿಣಿಯೊಬ್ಬಳ ಹೆಸರೂ ಸಹ ರತಿಪ್ರಿಯಾ ಆಗಿದ್ದು ಅವಳು ಐಶ್ವರ್ಯವನ್ನು ಕರುಣಿಸುವವಳಾಗಿದ್ದಾಳೆ. ಆಕೆಯನ್ನು ಕುಬೇರನ ಹೆಂಡತಿ ಎಂದು ಹೇಳಲಾಗುತ್ತದೆ. ಕುಬೇರನು ಯಕ್ಷರ ಮುಖ್ಯಸ್ಥನಾಗಿದ್ದಾನೆ. ರತಿಪ್ರಿಯಾ ದೇವಿಯ ಮಂತ್ರವು ಬಹಳ ಸಂಕ್ಷಿಪ್ತವಾಗಿದ್ದು ವ್ಯಕ್ತಿಯೊಬ್ಬನು ಈ ಮಂತ್ರವನ್ನು ರಾತ್ರಿ ವೇಳೆಯಲ್ಲಿ ಆಲದ ಮರದ ಮೇಲೆ ಕುಳಿತು ಪಠಿಸಬೇಕು. ಆಕೆಯು ಆ ವ್ಯಕ್ತಿಯ ಎದುರಿಗೆ ಸ್ವತಃ ಪ್ರಕಟಗೊಂಡು ಅವರಿಗೆ ಐಶ್ವರ್ಯವನ್ನು ಕೊಡುತ್ತಾಳೆಂದು ಹೇಳಲಾಗಿದೆ. ಆಕೆಯ ಮಂತ್ರವು
ॐ रं श्रीं ह्रीं धं धनते रतिप्रिये स्वाहा
ಓಂ ರಂ ಶ್ರೀಂ ಹ್ರೀಂ ಧಂ ಧನತೇ ರತಿಪ್ರಿಯೇ ಸ್ವಾಹಾ.
ಈ ಮಂತ್ರವನ್ನು ಒಂದು ಲಕ್ಷಬಾರಿ ಜಪಿಸಿದ ನಂತರ ಪುರಶ್ಚರಣವನ್ನು ಕೈಗೊಳ್ಳಬೇಕು.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 311-316 http://www.manblunde... ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
ಪ್ರತಿಕ್ರಿಯೆ (1)