( ಕಷ್ಟದ ಸುಳಿಯಲ್ಲಿ ನಲುಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವ ಯುವ ಮನಸುಗಳಿಗೆ...)
ಚಿಗುರು ನೀನು ಕರಟಬೇಡ
ವಾಸ್ತವತೆಯ ಬಿಸಿಲಿಗೆ
ಮುಂಜಾನೆಯ ಎಳೆಹೂವೇ
ಕೊರಗಬೇಡ ಸೋಲಿಗೆ
ಮಾಮರದ ನೆಲೆಯಿದೆ...ಹೂವು ಹಣ್ಣು ಒಲವಿದೆ
ಮೌನವೇಕೆ ಹಾಡು ಒಮ್ಮೆ, ಗಾನ ಮರೆತ ಕೋಗಿಲೆ...
ಒಂಟಿ ಎಂಬ ಭಯವು ಬೇಡ
ಪ್ರೀತಿ ಸ್ಪರ್ಶ ನಿನಗಿದೆ
ಕಾರ್ಮುಗಿಲ ಒಡಲಿನಲ್ಲೂ
ಸೂರ್ಯ ರಶ್ಮಿ ಹರಡಿದೆ
ಸ್ವರ್ಣ ತೇರು ಸಾಗುತಿರಲು, ನಲುಮೆ ಮನದಿ ತುಂಬಿ ಬರಲು
ಹರಿಯಬಿಡು ಜೀವ ಸೆಲೆಯ ನಬಿರಿದು ಹೋದ ಎದೆಯಲಿ ...
ಸ್ವಚ್ಛ ಶುಭ್ರ ಮುತ್ತು ನೀನು
ನೀಲ ಶರಧಿ ನಿನ್ನದೇ
ಸುಖವು ಎಂದೂ ಮೊದಲು ಬರದು
ನೋವು ದುಃಖ ಕಾಣದೆ
ಆಶಾದರ್ಪಣ ಒಡೆಯದಿರಲಿ, ಕಣ್ಣ ಕನಸು ಕರಗದಿರಲಿ
ದಿಗಂತದಾಚೆ ಮೂಡಿಬರಲಿ,ಆ ಹೊನ್ನ ನೇಸರ ...
ತಮವ ತಟ್ಟಿ ಬಡಿದು ಅಟ್ಟಿಸಿ
ಉಷೆಯು ಇಲ್ಲಿ ಬೆಳಗಿದೆ
ಬಿರುಗಾಳಿಯ ರಾತ್ರಿ ಕಳೆದು
ಸಮುದ್ರ ಶಾಂತವಾಗಿದೆ
ಬೇಡ ಗೆಳತಿ ಕತ್ತಲಾಟ, ಕ್ಷಣಕ್ಷಣದಿ ಭಯದ ಕೂಟ
ಹಚ್ಚಿಬಿಡು ಪುಟ್ಟ ಹಣತೆ,ನಿನ್ನ ಮನದ ಗುಡಿಯಲಿ...
ರಾಗ ನಿನದು, ತಾಳ ನಿನದು
ಶ್ರುತಿಯಾಗಲಿ ಜೀವನ
ಗುಪ್ತಗಾಮಿನಿ ಭಾವವೆಲ್ಲಾ
ದನಿಯಾಗಲಿ ಸರಿಗಮ
ಸಪ್ತಸ್ವರದಿ ವೀಣೆ ನುಡಿಸುವೆ, ನಿನ್ನ ಚರಕೆ ಕಾದು ಕೂರುವೆ
ಹಾಡಿಬಿಡು ಒಮ್ಮೆ ನೀನು, ಮಧುರ ಕಂಠದಿ ಕೋಗಿಲೆ...
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!