ಹನಿಯೊಂದು  ಜಾರಿದೆ  ಕಣ್ಗೊಳದಿಂದ  ನೂರು ನೋವುಗಳ ಭಾರ ಹೊತ್ತು 

ಕೋಟಿ ಭಾವನೆಗಳನು ಅದರ ಬೆನ್ನಿಗೆ ಬಿಟ್ಟು ಹನಿಯೊಂದು ಜಾರಿದೆ. 

 

ಅದರ ರಭಸಕೆ ಎಷ್ಟು ಬಿರುಸು! ತಾಕಿದಲ್ಲೆಲ್ಲಾ  ಸುಡು- ಸುಡು, ಉರಿ -ಉರಿ 

ಹುಟ್ಟಿಸಿದ ಕಣ್ಗೊಳವ ಒಂಟಿಯಾಗಿ ಬಿಟ್ಟು, ಸಂಬಂಧವೇ ಇಲ್ಲವೇನೋ ಎಂಬಂತೆ

ಬೆನ್ನು ತೋರಿಸುತ್ತಿದೆ ಹನಿಯೊಂದು ಜಾರಿದೆ. 

 

ಆ ಹನಿಗೆ ಬಣ್ಣವಿದೆಯೇ? ಹೌದು. ಅದು ಕಡುಗೆಂಪು ಮಧ್ಯೆ ಮಡುಗಟ್ಟಿದ ಕಪ್ಪು 

ನೂರು ಆಕ್ರಂದನಗಳ ಭಾವ- ವರ್ಣ ತೀವ್ರತೆಯನು ತನ್ನಲ್ಲಿ ಹುದುಗಿಸಿದಂತಿದೆ 

ಹನಿಯೊಂದು ಜಾರಿದೆ. 

 

ಸಾಲದ್ದಕ್ಕೆ ಕೋಟಿ ಹನಿಗಳ ತನ್ನೊಡನೆ ಕರೆದಿದೆ. ಒಂದಾದಮೇಲೊಂದು ಏನು ಶಿಸ್ತು!

 ಜೀವ ತೆತ್ತುವ ಮುನ್ನ ಕಣ್ಣು ಬತ್ತುವ ಮುನ್ನ ಮಮ್ಮಲಿಸಿದೆ. 

ಹನಿಯೊಂದು ಜಾರಿದೆ. 

 

ರೈಲಿಗೆ ಬಲಿಯಾದ ತನ್ನ ಪುಟ್ಟ ಕರುವನ್ನು ಮತ್ತೊಮ್ಮೆ ನೆನೆಸಿದೆ.

 ಕೊನೆಗೆ ಹಾಲುಣಿಸಿದ ಆ ಕ್ಷಣಗಳನ್ನು ಮಗದೊಮ್ಮೆ ಮೆಲುಕಿದೆ 

ಹನಿಯೊಂದು ಜಾರಿದೆ ಕೊನೆಯ ಹನಿಯೊಂದು ಜಾರಿದೆ ಕಣ್ಗೊಳದಿಂದ.