ನನ್ನ ಮನೆಯಂಗಳದಿ

ನಾಲ್ಕಾರು ಹೂ ಕುಂಡಗಳು

ಬಿಸಿಲು ಕಂಡಿಲ್ಲ

ಮಳೆ ನೀರು ನೋಡಿಲ್ಲ

ಕಾತರಿಸಿ ಕುಳಿತಿವೆ

ನನ್ನಾಕೆ ಒಡ್ಡುವ 

ಬೊಗಸೆ ನೀರಿಗಾಗಿ!

 

ವಿದ್ಯುತ್ ದೀಪದ ಅರಿವುಂಟು

ದಿನಕರನ ಅರಿವಿಲ್ಲ

ಮಣ್ಣು ಗೊಬ್ಬರದ ಚಿಂತೆ

ಎಂದೂ ಕಾಡಿಲ್ಲ

ಆ ರೀತಿ ಬೆಳಸಿಹಳು ನನ್ನಾಕೆ!

 

ಪಂಕದ ಗಾಳಿಗೆ ಮೈಯೊಡ್ಡಿ

ಕುಣಿಯುತಿಹ ಇವಕೆ

ಹೊರಗಾಳಿ, ಬಿರಿಗಾಳಿ

ಹೇಗುಂಟೆಂದು ತಿಳಿದಿಲ್ಲ ಇವಕೆ!

 

ಹುಟ್ಟುತ್ತ ಸ್ವಾವಲಂಬಿಗಳಿವು

ಆದರೂ ಅವಲಂಬನೆಯ ಬದುಕು

ನನ್ನವಳ ಆಸರೆಯ

ನಂಬಿ ಬದುಕಬೇಕು

ಇವು ತಮ್ಮದಲ್ಲದ ತಪ್ಪಿಗೆ!

 

--ಮಂಜು ಹಿಚ್ಕಡ್