ನೀರಜಳಾ?
ನೀನು ನೀರಜಳಾ?
ಕೊಳೆತ ನೀರಿನಲ್ಲಿ ಎಂಥಾ ಸೌಂಧರ್ಯ
ಕಮಲಜಳಾ?
ನೀನು ಕಮಲಜಳಾ?
ಎದೆಯ ಗೋಡೆಯಲ್ಲಿ ಬಿರಿದ ಮಾಧುರ್ಯ
ಮೌನವಿದೋ?
ನಿನ್ನೊಳಗಿನ ಧ್ಯಾನವಿದೋ?
ಧರೆಯೊಳಗೆ ನನಗರಿಯದ ಭಾಷೆಯಿದೋ
ಭಾಷಾಂತರ ಮಾಡಿಕೊಡುವೆಯ ನೀನಿಗ
ರೂಪಾಂತರ ಮಾಡಿಕೊಳ್ಳುವೆ ನಾನೀಗ
ಚಿಗುರೋ ಎಲೆಯಾಗಿ, ಹಸಿರು ಬನವಾಗಿ
ನೀ ನನ್ನ ತಾಕಿದೆ ಸೊಂಪಾದ ನೆರಳಾಗಿ
ಕೋಗಿಲೆ ಧನಿಯಾಗಿ, ಧನಿಯೆ ಹಾಡಾಗಿ
ತಲೆದೂಗಿಸಿದೆ ಇಂದು ನೀನೆ ಸ್ವರವಾಗಿ
ತಾಣವಿದೋ?
ಗಂಧರ್ವ ಗಾನವಿದೋ?
ಮನದೊಳಗೆ ಮೈನೆರದ ಮೋಹವಿದೋ?
ಭಾಷಾಂತರ ಮಾಡಿಕೊಡುವೆಯ ನೀನಿಗ
ರೂಪಾಂತರ ಮಾಡಿಕೊಳ್ಳುವೆ ನಾನೀಗ
ಹರಿವ ಝರಿಯಾಗಿ, ಘಲ್ಲೆನ್ನೊ ಹೆಜ್ಜೆಯಾಗಿ
ನರ್ತಿಸಿದೆ ನನ್ನೊಳಗೆ ಗೆಜ್ಜೆರಂಗವಾಗಿ
ಬೀಸೋ ಗಾಳಿಯಾಗಿ, ನುಡಿಸೊ ನಾದವಾಗಿ
ಸುರಿಯುತಿದೆ ರಸವೊಂದು ಏನೋ ಅರಿಯದಾಗಿ
ನಾದವಿದೋ?
ಸಂಗೀತ ವಾದ್ಯವಿದೋ?
ಶೃಂಗಾರ ಸೆಣಸಾಟದ ತುಡಿತವಿದೊ
ಭಾಷಾಂತರ ಮಾಡಿಕೊಡುವೆಯ ನೀನಿಗ
ರೂಪಾಂತರ ಮಾಡಿಕೊಳ್ಳುವೆ ನಾನೀಗ
ಬೇಲಿ ಲತೆಯಾಗಿ, ತಾಕುತ್ತ ಕಂಪಾಗಿ
ತೇಯ್ದ ಗಂಧದಂತೆ ಬಂದೆ ಜೊತೆಯಾಗಿ
ಮರದ ಬೇರಾಗಿ, ನಿಂತೆ ಬಲವಾಗಿ
ಮೈಯೆಲ್ಲ ಏರಿಬಂದೆ ಹಿಂಚಿಂಚು ತಾಪವಾಗಿ
ಸ್ವಪ್ನವಿದೋ?
ಸುರಲೋಕದ ಪಾನವಿದೋ?
ದುಂಬಿಗಳು ಸಂಧಿಸುವ ಪ್ರಣಯವಿದೊ
ಭಾಷಾಂತರ ಮಾಡಿಕೊಡುವೆಯ ನೀನಿಗ
ರೂಪಾಂತರ ಮಾಡಿಕೊಳ್ಳುವೆ ನಾನೀಗ
- ಹಾರೋಹಳ್ಳಿ ರವೀಂದ್ರ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!