ಬೆಳಕು ಮುಪ್ಪಾಯಿತು

ಹೊತ್ತು ಕಳೆಯುತಿದಂಗೆ

ಹೊರಹೋದ ಯಜಮಾನ

ಇನ್ನೂ ಬರಲಿಲ್ಲ

ಗಂಟಪೂರ ಕುಡಿದು

ಯಾವ ಬೇಲಿಯ ಬುಡ ಸೇರ್‍ಯಾನೋ?

ಹೊಟ್ಟೆ ಚುರ್‍ ಎನ್ನುತಿದೆ

ಹಸಿವು ತಾಳಲಾಗದೆ

ಮನೆಯಲಿ ಒಂದಿಡಿ ಕಾಳಿಲ್ಲ

ತಿನ್ನೂಣವೆಂದರೆ ಹಲಸಿದ ಅನ್ನವೂ ಇಲ್ಲ

ನನಗಿಲ್ಲವಾದರೆ ಹೋಗಲಿ

ಮಗು ಚಂಡಿ ಹಿಡಿದಿದೆ

ಹಾಲು ಬಿಸ್ಕತ್ತಿಗಾಗಿ

ಏನು ಮಾಡುವುದೋ ತೋಚುತಿಲ್ಲ

ಮನೆಯ ಹೊರ ಬಂದು ನಿಂತೆ

ಎಣಹದ್ದುಗಳೇಕೊ ನನ್ನನ್ನೆ ದುರುದುರು ನೋಡುತ್ತಿವೆ

ಮೈಮೇಲ ಸೆರಗು ಜಾರುತಿದೆ

ಸರಿಮಾಡಿಕೊಂಡು ಒಳಬಂದೆ

ಹಿಂದೆಯಿಂದ ಹಾರಿಬಂದ ಹದ್ದು ಹಿಡಿಯಿತು

ನನ್ನ ಸೊಂಟವ

ನನಗೆ ಹಣಬೇಕು

ಅವನಿಗೆ ಸುಖಬೇಕು

ಸುಮ್ಮನಾದೆ

ಮನೆಯ ಹಜಾರದಲ್ಲಿ

ಮಲಗಿಕೊಂಡೆ

ಕ್ಷಣಾರ್ಧದಲ್ಲಿ ವಿವಸ್ತ್ರ ಮಾಡಿಬಿಟ್ಟ

ಮುಜುಗರವಾಯಿತು

ಇಡೀ ಪ್ರಕೃತಿಯೆ ಬೆತ್ತಲಾಗಿ ಮಲಗಿರುವಾಗ

ನಂದೇನು ತಕರಾರು

ನಡೆಯುವ ಕ್ರಿಯೆಯ ನಡುವೆ

ಮೊಲೆಗಳೆರಡನ್ನು ಹಿಸುಕಿ

ತೊಟ್ಟುಗಳನ್ನು ಕಚ್ಚುವ

ಉರಿಯುತ್ತಿವೆ

ನನ್ನ ಗಂಡ ಕುಡಿದ ಅಮಲಿನಲ್ಲಿ

ಸಿಗರೇಟಿನಿಂದ ಸುಡುತ್ತಿದ್ದಾನೆ

ಎಂದುಕೊಂಡೆ

ಯೋನಿಯೊಳಗಿಂದ ಜೊಲ್ಲುರಸದಂತೆ

ಜಿನುಗ ತೊಡಗಿದೆ

ನನ್ನ ಗಂಡ ಕುಡಿದ ಮತ್ತಲ್ಲಿ

ಗೋಡೆಗೆ ಉಗಿದ ಎಂಜಲು

ಎಂದುಕೊಂಡೆ

ಎಲ್ಲವೂ ಮುಗಿದ ನಂತರ

ಮೇಜಿನ ಮೇಲೊಂದು ನೋಟಿಟ್ಟು ಹೋದ

ನನಗೆ ಇದೊಂದು ಕ್ರೀಡೆ ಎಂದು ಅನಿಸಲಿಲ್ಲ

ಅವನಿಗೇನನಿಸಿತೋ ನಾ ಕೇಳಲಿಲ್ಲ

ನನಗೆ ಬೇಕಿದ್ದು ಕಾಸಷ್ಟೆ

ಕೈಗೆತ್ತಿಕೊಂಡೆ

ಕಣ್ಣೀರು ಬಂತು

ದಯವಿಟ್ಟು ಕ್ಷಮಿಸಿ ನಾನು ಸೂಳೆಯಲ್ಲ

- ಹಾರೋಹಳ್ಳಿ ರವೀಂದ್ರ