'ಕಳಬೇಡ, ಕೊಲಬೇಡ'ದ ಅಡುಗೆ
- ಲಕ್ಷ್ಮೀಕಾಂತ ಇಟ್ನಾಳ
‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ……’
ಏನಿದು! ಈ ಅಂತರಂಗದ ಅಡುಗೆ
ಇನ್ನೂ ಬಿಸಿಯಾಗಿದೆಯಲ್ಲಾ, ಈ ಬೆಂಕಿ ಉಂಡೆ!
ಉಂಡಿಲ್ಲವೇ ಯಾರೂ, ಕಡೆಗೆ
ಮನುಜ, ಈ ನಿನ್ನ, ಕೈ, ಕಾಲು, ಬಾಯಿ, ಕಣ್ಣು
ಮಿದುಳು, ಮನಸ್ಸು ಎಲ್ಲವೂ ಭ್ರಷ್ಟ,
ತುಟಿ, ಕಿವಿ, ತಲೆಯೆಲ್ಲಾ ಭ್ರಷ್ಟ,
ನಾಲಿಗೆಯಂತೂ ಹೇಳುವುದೇ ಬೇಡ,
ಪರಮಭ್ರಷ್ಟ.
ನೀನಾದರೂ ಹಾಗೆಯೇ ಇರಬಾರದೇ
ಹೃದಯವೇ,
ಹೇಗಿರುವೆಯೋ ಹಾಗೆ!
ನಕ್ಕಾಗ ಅರಳುತ್ತ, ಅಳುವಾಗ ಮುದುಡತ್ತ,
ಸಂಭ್ರಮಗಳಿಗೆ ರೋಮಾಂಚನಗೊಳ್ಳುತ್ತ,
ಭಾವಗಳ ನರನರಗಳಿಗೆ ಹರಡುತ್ತ,
ಮೈಜುಮ್ಮೆನ್ನಿಸುತ್ತ,
ದಣಿವಾರದ ನಿನ್ನ ಈ ಪ್ರೀತಿಯ ಸೆಲೆ,
ನಿರಂತರ ಬದುಕಿನ ಝರಿಗೆ ಏನೆನ್ನಲಿ?
ಒಲುಮೆಗಳ ಚಿಲುಮೆ ಚಿಮ್ಮುತ,
ಗಾಳಿ ರೆಕ್ಕೆಯ ಸಖ್ಯದ ಗೆಳೆಯ,
ನಿರಂತರ ಚಲನೆಯ ಜೀವ ರಥ,
ಕಾಂತಿಯ ನಾಲಗೆಯ ದೀಪ ನೀನು!
ಹೃದಯವೇ, ನೀನೊಮ್ಮೆ ಬದಲಾದರೆ,
ನಗು, ಅಳುಗಳ ಗತಿಯೇನು?
ವಿದಾಯ, ವಿಷಾದಗಳಲ್ಲಿ
ಸತ್ತವರ ಮನೆಯಲ್ಲಿ
ಅಳವುದು ಹೇಗೊ, ಕರೆವುದು ಹೇಗೋ!
ಏನುತ್ತರ ಕೊಡುವುದು,
ಭಾವ ಸತ್ತ ಪೀಳಿಗೆಗೆ!
ಅವ್ವ, ಅಪ್ಪ, ಕೂಸುಗಳ ಮುದ್ದಿಸುತ್ತ
ಮನುಷ್ಯರನ್ನಾಗಿಸುವುದು ನಿನ್ನಿಂದಲೇ ತಾನೇ!
ಬದಲಾದರೆ ನೀನು, ಇದನೆಲ್ಲಾ ಮಾಡುವವರಾರು,
ಜಗದ ಕೈ ಹಿಡಿದು ನಡೆ ಕಲಿಸುವವರಾರು?
ನೀನಾದರೂ ಹಾಗೆಯೇ ಇರಬಾರದೇ
ಹೃದಯವೇ,
ಹೇಗಿರುವೆಯೋ ಹಾಗೆ!
ಪ್ರತಿಕ್ರಿಯೆ (3)
ಕವನ ಚೆನ್ನಾಗಿದೆ ಇತ್ನಾಳರೆ.