ನಲ್ಲೆ ಬರುವ ಸಮಯ

--------------------

ಕಡುಗೆಂಪಿನ ಹೂವು ತಿಳಿಹಸಿರ ರಾಶಿಯಲಿ

ಮೆಲ್ಲನೆ ಅರಳುವ ಸಮಯ.

ಸಿರಿಗಂಪು ಚೆಲ್ಲುತ್ತ ಕಾದಿಹುದು ತುದಿಯಲ್ಲಿ

ನಲ್ಲೆ ಮರಳುವ ಸಮಯ.

ಅಂಬರದ ತುದಿಯಲ್ಲಿ ಮುಂಜಾವು ನಿಧಿಯಲ್ಲಿ

ಸೂರ್ಯನುದಿಸುವ ಸಮಯ.

ಕೆಮ್ಮುಗಿಲ ಚಿತ್ತಾರದುಡುಗೊರೆಯ ತಂದಿಹನು

ನಲ್ಲೆ ಮರಳುವ ಸಮಯ.

ಹಸಿರಿನರಗಿಣಿಗಳು ಗಗನದಾಯಾಮದಲಿ

ಸಾಲಾಗಿ ಹಾರುವ ಸಮಯ.

ಉಲ್ಲಾಸ ವಿಭ್ರಮದಿ ಹಕ್ಕಿಗಳು ಕಾಯುತಿವೆ

ನಲ್ಲೆ ಮರಳುವ ಸಮಯ.

ಮೊದಲ ಮಳೆಹನಿಯೊಂದು ಮೋಡದ ತುದಿಯಲ್ಲಿ

ಭುವಿಯೆಡಗೆ ಹೊರಡುವ ಸಮಯ.

ಭುವಿಯ ಚುಂಬಿಸುವ ತವಕದಲಿ ಕಾಯುತಿದೆ

ನಲ್ಲೆ ಮರಳುವ ಸಮಯ.

ವಿರಹ ಶೃಂಖಲೆಯ ತುಂಡರಿಸಿ ನುಗ್ಗಿಹುದು

ಒಲವಿನಾವೇಶದಲಿ ಹೃದಯ.

ಕಾಲವನೆ ಬಂಧಿಸುವ ಹುನ್ನಾರ ಹೂಡಿಹುದು

ನಲ್ಲೆ ಮರಳುವ ಸಮಯ.

            ಚಂದ್ರಹಾಸ ( ೧೦ - ೫ - ೨೦೧೪ )