ತಿರುವು ಮುರುವು
ಈ ಬೆಟ್ಟ, ಪರ್ವತ, ಮುಗಿಲು, ಮೋಡಗಳು
ಮಳೆ, ಝರಿ, ತೊರೆ, ಸಾಗರ, ಹೊಲ, ಊರು, ಕೇರಿಗಳ
ಸಜೀವ ಸೂತ್ರದ ಸುಂದರ ತೋಟ,
ಕ್ಷಣ ಕ್ಷಣವೂ ಅರಳುವ ಜಗದ ನೋಟ
ಅಗಣಿತ ರೂಪ, ಪರಿಮಳದ ಈ ಸುಮಧುರ ಹೂ ಜಲ್ಲೆ
ಕುಸುರಿ ಜರಿಬಣ್ಣಗಳ ಕಾಮನಬಿಲ್ಲು,
ಚಿತ್ರ ಚಿತ್ತಾರಗಳು ಸಂಜೆಗೆಂಪಿನಲ್ಲೂ
ನೀಲಿಬಾನಿನಲ್ಲಿ ಸೂರ್ಯ ರಶ್ಮಿಗಳ ಪ್ರಣತಿ
ಚುಕ್ಕಿ ಚಂದ್ರಮಗಳ ನಾಡಿನ ಗಗನ ಭರತಿ
ಅದರಡಿಯಲ್ಲೆ ಸಡಗರದ ಬದುಕಿನ ಜನ, ಜಾನುವಾರು,
ವನ ಕಾಡು ಮೇಡು,ಗಾಳಿ, ಹಕ್ಕಿ, ಜಲಚರ ತರಹೇವಾರು
ನನ್ನ ಲೋಕವೇ ಬೇರೆ!
ಬೆವರು, ದುರ್ಗಂಧಗಳ, ಏಕತಾನತೆಯ ಶೂದ್ರ ಬದುಕು,
ತೊಟ್ಟುಕೊಂಡವರ ಮಾನ ಕಾಯುವುದು,
ಬದುಕೇ ಹೀಗೇನೋ ಎಂದು ಬಗೆದಿದ್ದೆ!
ತಿರುವು ಮುರುವು ಹಾಕಿಕೊಂಡ ಅಂಗಿಯೊಂದು
ಬೆರಗಿನಿಂದ ಮೊದಲ ಬಾರಿ
ಹೊರಜಗವನ್ನು ಕಂಡು ದಂಗಾಗಿತ್ತು!
ಹೊಲಮನೆಯಿಂದ ನಗರಕ್ಕೊಮ್ಮೆ ಕರೆದೊಯ್ದಾಗ
ಗರಬಡಿದಿದ್ದಳು ಅವ್ವ,
ತಾಸುಗಟ್ಟಲೆ ಸಾಲು ಸಾಲು ಮನೆ, ಅಂತಸ್ತುಗಳು,
ಬಾಯಿಂದ ಹೊರಟ ಒಂದೇ ಮಾತು,
'ಎಲ್ಲಾ ಪರಮಾತ್ಮನ ಆಟ'!
ಹೊಲಗಳೆಲ್ಲ ಮಾಯ,
ಕೇಳಿದ್ದಳು,
''ಹೌದು, ಇವರೆಲ್ಲಾ, ಹೊಟ್ಟೀಗೆ ಏನ್ ತಿಂತಾರ''!
ತನ್ನದೇ ಮರದ ಹಸಿರೆಲೆ, ಹೂವು, ಹಣ್ಣು, ಗಂಧಗಳ
ಭಾಗ್ಯ ಇಲ್ಲದಿರುವ
ಬೆವರಿನ ಬೇರುಗಳು!
ತಿರುವಿ ಹಾಕದ ಮುಖಗಳು ಇನ್ನೆಷ್ಟೋ!
ಪ್ರತಿಕ್ರಿಯೆ (4)
ಸುಂದರ,ಅರ್ಥಗರ್ಭಿತ ವಾದ ಕವನ ಇಟ್ನಾಳರೆ . .......ರಮೇಶ ಕಾಮತ್
' ತಿರುವು ಮುರುವು ' ಬಹಳ ಮಾರ್ಮಿಕವಾದ ಕವನ, ಸುಂದರ ಪ್ರಕೃತಿಯ ಅನಾವರಣಗೊಳಿಸುತ್ತ ಸಾಗುವ ಕವನ ನಂತರ ಶೂದ್ರ ಬದುಕಿನ ಕಟು ವಾಸ್ತವದ ದರ್ಶನ ಮಾಡಿಸುತ್ತ ಕವನ ಗರಿಗಟ್ಟುತ್ತ ಸಾಗುವ ಪರಿ ಅದ್ಭುತ. ಕವನದ ಅಂತ್ಯ ಬಹಳ ಅರ್ಥಪೂರ್ಣ. ಬಹಳ ದಿನಗಳ ನಂತರ ಸಂಪದಕ್ಕೆ ಬಂದಿದ್ದೀರಿ ನಮಗೆಲ್ಲ ಸಂತಸವಾಗಿದೆ. ಈಗೊಂದು ತಿಂಗಳ ಹಿಂದೆ ನಾನು ಹುಬ್ಬಳ್ಳಿಗೆ ಚಿಕಿತ್ಸೆ ನಿಮಿತ್ತ ಬಂದವನು 15 ದಿನಗಳ ಕಾಲ ಅಲ್ಲಿದ್ದೆ. ತಮ್ಮನ್ನು ಒಮ್ಮೆ ಭೇಟಿಯಾಗಬೇಕೆಂದಿದ್ದೆ ಆದರೆ ತಮ್ಮ ಖಚಿತ ವಿಳಾಸ ನನ್ನಲ್ಲಿ ಇರದ ಕಾರಣ ತಮ್ಮನ್ನು ಭೇಟಿಯಾಗಲಾಗಲಿಲ್ಲ. ಸುಮ್ಮನೆ ತಮ್ಮನ್ನು ಕಾಣಬೇಕೆಂಬ ಅಭೀಪ್ಸೆ ಮತ್ತೇನಿಲ್ಲ.ತಮ್ಮ ಮೊಬೈಲ್ ನಂಬರನ್ನು ನನ್ನ ಈ ಮೇಲ್ ವಿಳಾಸ [email protected] ಗೆ ತಿಳಿಸಿ ಇನ್ನೊಮ್ಮೆ ಅಲ್ಲಿಗೆ ಬಂದಾಗ ಮುಕ್ತ ಭೇಟಿಯಾಗಲು ಅವಕಾಶವಾಗುತ್ತದೆ, ಧನ್ಯವಾದಗಳು.
ತಮ್ಮ ಮನ ತುಂಬಿದ ಪ್ರತಿಕ್ರಿಯೆ ಓದಿ ಬಹಳ ಸಂತಸವಾಯಿತು, ತಮ್ಮ ಅನಿಸಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ತಮ್ಮ ಬರಹಗಳು ಸಂಪದದಲ್ಲಿ ನಿರಂತರವಾಗಿ ಬರುವಂತೆ ಆಗಲಿ. ಧನ್ಯವಾದಗಳು.
ಅವ್ವನ ಮಾತು ಇಂದು ಎಲ್ಲರ ಎದೆಯಾಳದ ಮಾತು !
ಆದರೂ ಕಾಣುತ್ತಿಲ್ಲ ಇದಕ್ಕೆಲ್ಲ ಒಂದು ಪರಿಹಾರ!
ನಿಮ್ಮ ಮಾತು ನಿಜ ಸಂಪದದಲ್ಲಿ ಸಾಹಿತ್ಯ ಮುಖವಾದ ರಚನೆಗಳು ಕಡಿಮೆಯಾಗಿತ್ತು , ನಿಮ್ಮಂತಹವರು ಅದನ್ನು ತುಂಬಬಲ್ಲಿರಿ