ನಿನ್ನೆದೆಯ ಹಾಳೆಯಲಿ ನನ್ನ ಕವನವ ಗೀಚುವಾಸೆ

ನಿನ ಕಣ್ಣ ಕ್ಯಾನ್ವಾಸಿನಲಿ ಚಿತ್ತಾರವಾಗಿ ಚಿರಕಾಲವಿರುವಾಸೆ

ತೂಕಡಿಕೆಯಲಿ ನಿನ ತುಟಿಯ ತೊದಲಿಕೆಯು ನಾನಾಗುವಾಸೆ

ಆ ತುಟಿಯಂಚಲರಳುವ ನಗುವು ನನದಾಗುವಾಸೆ

 

ನಿನ ಹೃದಯ ನಾಡಿಯಲಿ ನನ ನೆನಪು ಹರಿದಾಗ

ಕಣ್ಣಂಚಲಿ, ನಮ್ಮ ನಲಿವಿನ ನೋಟ ಮೂಡಬೇಕು

ತುಟಿಗಳೆರಡು ನನ ಹೆಸರ ತೊದಲಿಸಲು,

ನವಿರಾದ ನಗುವರಳಿ ಕೆನ್ನೆ ಕೆಂಪಾಗಿಸಬೇಕು

 

ನಿನ್ನೆದೆಯ ಹಾಳೆಯಲಿ ನನ್ನ ಕವನವ ಗೀಚುವಾಸೆ

 

ಕಲ್ಪನೆಯ ಲೇಖನಿಗೆ ಶಾಯಿ, ನಿನ ಕಣ್ಗಳ ಅಮಲು

ಕವನದ ತುಂಬೆಲ್ಲ ಮಾತು ಬಾರದ ಭಾವನೆಗಳ ಸಾಲು

ಭಾವನೆಗಳ ಬೆಳಕಿನಲಿ ಆಸೆಗಳ ನೆರಳು

ಈ ನೆರಳು‍-ಬೆಳಕಿನಾಟಕೆ ಪ್ರೀತಿಯೇ ತಿರುಳು

ನಿನಗೂ ಅನಿಸದೇ ಹೀಗೆಲ್ಲ, ನೀ ಹೇಳು

 

ನಿನ್ನೆದೆಯ ಹಾಳೆಯಲಿ ಗೀಚುವಾಸೆ ನನ್ನೆದೆಯ ಕವನವ