ಅಗಾಧ ವಿಶ್ವದ ರಂಗಮಂಚದೊಳು
ಅವನಿರುವುದು ನೇಪಥ್ಯದಲ್ಲಿ ಕಾಣದಂತೆ
ಬರಿಗಣ್ಣಿನ ಹರವಿಗೆ ನಿಲುಕುವುದೆಲ್ಲಾ
ಮಾಯೆ , ಕಾಣದ್ದೆಲ್ಲಾ ನಿಜವಂತೆ
ಇದ್ದರೇನು? ಇರದಿದ್ದರೇನು? ಬದುಕು
ಉರುಳುತ್ತಿದೆ ಕಟ್ಟಿದ ಕಾಲಚಕ್ರಕೆ
ಹಲವು ಸೂತ್ರಗಳು ಬಂಧಿಸಿದೆ
ಸಂಧಿಸಿದ ಪ್ರತಿ ಆತ್ಮವನ್ನು
ನೀ ನಕ್ಕರೆ ಯಾರೊ ನಗುವರು
ಇನ್ಯಾರೋ ಅತ್ತರೆ ನಿನಗೆ ದುಃಖ
ಜೀವರಾಶಿಯಲ್ಲಿ ಎಲ್ಲರೂ ಸಂಬಂಧಿಕರೆ
ಕಾಣದೇ ? ಮನಸಿನ ನೂರು ಮುಖ
ನೋವು, ನಲಿವೆಂಬ ರಸಗಳು
ತುಂಬಿರುವ ಜೀವನ ನಾಟಕದಲ್ಲಿ
ಭಾವದೆಳೆಯು ಕಾಯುತ್ತಿದೆ ಸಾಮರಸ್ಯ
ಎಲ್ಲರನ್ನು ಒಂದು ದಾರದಲ್ಲಿ ಬಂಧಿಸುತ್ತಾ
ಕಡಿಯಲಾಗದ ಕಗ್ಗಂಟಿದು, ಕೆಲವೊಮ್ಮೆ
ಕಟ್ಟಿಹಾಕಿದ ಬೇಡಿ, ಆದರೂ
ತಪ್ಪಿದ ರಸ್ತೆಯಲ್ಲಿ, ಬಿದ್ದ ಬದುಕಿನಲಿ
ಎಬ್ಬಿಸಿ ಮತ್ತೆ ನಡೆಸುವುದು ಸೂತ್ರಧಾರನಂತೆ
ಪ್ರತಿಕ್ರಿಯೆ (2)
ಮಾಯೆ , ಕಾಣದ್ದೆಲ್ಲಾ ನಿಜವಂತೆ... ....... ಜೀವರಾಶಿಯಲ್ಲಿ ಎಲ್ಲರೂ ಸಂಬಂಧಿಕರೆ
ಕಾಣದೇ ? ಮನಸಿನ ನೂರು ಮುಖ.. ....... ಭಾವದೆಳೆಯು ಕಾಯುತ್ತಿದೆ ಸಾಮರಸ್ಯ
ಎಲ್ಲರನ್ನು ಒಂದು ದಾರದಲ್ಲಿ ಬಂಧಿಸುತ್ತಾ... ......... ತಪ್ಪಿದ ರಸ್ತೆಯಲ್ಲಿ, ಬಿದ್ದ ಬದುಕಿನಲಿ
ಎಬ್ಬಿಸಿ ಮತ್ತೆ ನಡೆಸುವುದು ಸೂತ್ರಧಾರನಂತೆ
ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||