ಅಮ್ಮ ಎಂಬುದ ನಾ ಮರೆತರೆ
ನನ್ನೇ ಮರೆತಂತೆ
ಅಮ್ಮ ನಿನ್ನ ನಾ ತೊರೆದರೆ
ನನ್ನುಸಿರೇ ಹೋದಂತೆ ||
ಅಮ್ಮ ನಿನ್ನ ಮಡಿಲಲ್ಲಿ
ಮಲಗಿದ್ದ ಕೂಸು ನಾನಮ್ಮ
ನಿನ್ನ ಬಿಟ್ಟು ಬೇರೆ ಜಗವ
ಅರಿಯದಿದ್ದ ಕೂಸು ನಾನಮ್ಮ ||
ಅಮ್ಮ ನಿನ್ನ ತೆಕ್ಕೆಯಲಿ
ಪುಟ್ಟ ಕಂದನು ನಾನಮ್ಮ
ಅಮ್ಮ ನಿನ್ನ ಅಕ್ಕರೆಯಲ್ಲಿ
ಬೆಲ್ಲ ಸಕ್ಕರೆ ನಾನಮ್ಮ ||
ಅಮ್ಮ ನಿನ್ನ ಕೈಯತುತ್ತು
ಬೆಳದಿಂಗಳ ಇರುಳ ನೆನೆಸುತಿತ್ತು
ಅಮ್ಮ ನಿನ್ನ ಒಂದೆ ಮುತ್ತು
ಸಗ್ಗವನ್ನೇ ತೋರುತಿತ್ತು ||
ದೂರದ ಬಾನಿನ ಚುಕ್ಕಿಗಳ
ತೋರಿಸಿ ನನ್ನ ನಗಿಸಿದ್ದೆ
ಹಾರುವ ಹಕ್ಕಿಯ ಗುಂಪನ್ನು
ಕರೆದು ನನ್ನೊಡನಾಡಿಸಿದ್ದೆ ||
ಅಮ್ಮ ನನ್ನ ನಗುವಿಗಾಗಿ
ನೀನೆಷ್ಟು ಅತ್ತೆ ಎಂಬುದ
ಎಲ್ಲಾದರೂ ಲೆಕ್ಕದಲ್ಲಿ
ಇಡಲಾಗುವುದೆ ಹೇಳಮ್ಮ ||
ಅಮ್ಮ ನೀನೀಗ ಅತ್ತರೆ
ನನ್ನ ಕಣ್ಣು ತುಂಬುವುದು
ಅಮ್ಮ ನೀನು ನಕ್ಕರೆ
ನನ್ನ ಕಣ್ಣು ಹೊಳೆಯುವುದು ||
ದೇವರೆ ಬಂದು ಇಲ್ಲೀಗೆ
ವರಗಳ ಕೊಡುವೇನೆಂದಾರು..
ನೀನೇ ಜೊತೆಯಲ್ಲಿರುವಾಗ
ಬೇರೇನ ಕೇಳಾಲಿ....||
ಅಮ್ಮ ನನ್ನ ಬದುಕಿನಲಿ
ನೀನೆ ದೊಡ್ಡ ದೇವರು
ನಿನ್ನ ಬಿಟ್ಟು ಅಲ್ಲಿಯಾರೂ
ಸು ಳಿ ದಾ ಡ ಲಾ ರಾ ರು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!