ಅದೊಂದು ಸುಂದರ ಕಡಲತೀರ

ದಣಿದ ಸೂರ್ಯ ನಿಶೆಯ ತೆಕ್ಕೆಗೆ ಜಾರುತ್ತಿದ್ದಾನೆ

ಆಕಾಶವನಾವರಿಸಿದೆ ಹೊಂಬಣ್ಣದ ಛಾಯೆ

ತುಸು ದೂರದಲೊಂದು ಯುವಜೊಡಿ

ಜಗದ ಪರಿವೆಯಿಲ್ಲದೆ ಸಲ್ಲಾಪದಲಿ ಮಗ್ನ

ನಲ್ಲೆಯ ಅಂಗೈಗೆ ಅಂಗೈ ಬೆಸೆದ ಪ್ರಿಯಕರ

ಪ್ರಿಯೆಗೆ ಪ್ರೇಮ ನಿವೇದಿಸುತಿರಬಹುದೆ?

ಬಟ್ಟಲಗಂಗಳ ಚೆಲುವೆಯದು ನೆಟ್ಟನೋಟ!

ನಿವೇದನೆಯ ತವಕದಲಿ ಆತ

ಕೇಳುವ ಕುತೂಹಲದಲಾಕೆ  ಮುಮ್ಮಡಿಗೊಂಡ

ಮಾರ್ದವಭಾವ ಮಾತುಗಳು ಮೌನ

ಕಣ್ಸನ್ನೆಯಲೆ ಮಾತು ಸ್ಪರ್ಶ ಆಲಿಂಗನದ ವ್ಸಸ್ತ

ಜೋಡಿ ಸರ್ಪಗಳು ಸಂತಸದ ಲೋಕದಲಿ

ಹಕ್ಕಿಗಳ ವಿಹಾರ ಮಾತು ಮೌನ ಬರಿ ಕೇಳಿ

ಅನತಿ ದೂರದಲಿ ವೃದ್ಧನೊಬ್ಬನದು ದೂರದಲಿ

ನೆಟ್ಟ ನೋಟ ಸುತ್ತಲಿನ ಪರಿವೆಯಿಲ್ಲದೆ

ಮೌನ ಮಾತಿನ ಅರ್ಥ ವರ್ಷಗಳ ಸಾಂಗತ್ಯ

ಕಾಲ ಸರಿದಂತೆ ಸಿಡಿಮಿಡಿ ರತಿ ಸ್ಪರ್ಶದ

ಬಿಸುಪು ಹೊಳಪು ರೋಮಾಂಚನಗಳೆಲ್ಲ

ಕಳೆದ ಸುಂದರ ಬದುಕು ಮುಂದೇನು?

ಬರಿ ತಾತ್ಸಾರ ತವಕ ತಲ್ಲಣಗಳೆಲ್ಲ ಅರಳುಗಂಳಲೀಗ

ಬರಿ ನಿರುತ್ಸಾಹ ಉಳಿದದ್ದು ಬರಿ ಮೌನದ ದಾರಿ

ಮುದಿ ದಾಂಪತ್ಯದ ನಿರರ್ಥಕ ನಿದರ್ಶನ

ದಶಕಗಳ ಕಾಲದ ಅನುಭವ ಮುಪ್ಪುರಿಗೊಂಡ

ಮಸುಕು ಕಣ್ಣೋಟದ ನಿಶ್ಯಕ್ತ ದೇಹ ಅಭ್ಯಾಸ

ಬಲದ ಗುರುತು ದೈನಂದಿನ ಚಟುವಟಿಕೆ

ಕಾಮ ಹಿಮ್ಮೆಟ್ಟಿ ವರುಷಗಳೆ ಸಂದಿವೆ

ಬದುಕಿನ ಧಾವಂತದಲಿ ಮಾತಿಲ್ಲದ ಮೌನ

ವೃದ್ಧಾಪ್ಯವೊಂದು ಬಿಡಿಸಿದ ಸುಕ್ಕಾದ ಹಾಸು

ವಾಸನಾಯುಕ್ತ ಜೀವನದ ಕಮಟು ದಿಂಬು

ಗತ ಬದುಕಿನ ನೆನಪುಗಳ ದಾಂಗುಡಿ ಬಿಗುವು

ಬಿಸುಪುಗಳು ಕಳೆದ ತನು ಮನ ಕಾಲಕ್ಕೆ

ತಕ್ಕಂತೆ ಸಾಗುತಿದೆ ಬದುಕು ವೃದ್ಧಾಪ್ಯದಂಚು

ಮಾತಿಲ್ಲ ಕಥೆಯಿಲ್ಲ ಬರಿ ಮೌನದ್ದೆ ರಾಜ್ಯಭಾರ

ಸದ್ದು ಗದ್ದಲವಿಲ್ಲ ಭಾಷೆಯ ಹಂಗಿಲ್ಲ

ಹಾವವಿಲ್ಲದ ಬರಿ ಭಾವದ ಬದುಕಿಉ ಗಾಢ

ಮೌನದಲೆ ವೃದ್ಧ ಜೀವಗಳ ಪಿಸುಮಾತು

ವರುಷಗಳೆ ಸಂದರೂ ಭಾವುಕತೆಗೆ ಬರವಿಲ್ಲ

ನೀರವ ಮೌನದ ಸರಿಯದ ರಾತ್ರಿಗಳು

ಕಿವಿಯಲಿ ಸದಾ ಗುಂಯ್ಗುಡುವ ಸೈಗಲ್ ಬರುವಾ

ತಲತ ಮೆಹಮ್ಮೂದ ರಫಿ ಮನ್ನಾಡೆ ಮುಖೇಶ

ಪಿಬಿಯವರ ವಿರಹ ಗೀತೆಗಳು ಗತ ಸುಂದರ ಕ್ಷಣಗಳ

ಕೆದಕಿ ಘಾಸಿ ಮಾಡುತಿವೆ ಎಲ್ಲಿಯೋ ಸುರಿದ ಮಳೆಯ

ತಂಪು ಕಂಪುಗಳ ಹೊತ್ತು ತರುತಿಹ ಮಂದಾನಿಲ

ಹಬ್ಬಿ ಹರಡುತಿವೆ ಗತ ಬದುಕಿನ ವಿಷಾದ ಭಾವಗಳು

ಅದೊಂದು ಕಳೆದ ಮಧುರ ಪ್ರೇಮದ ನೆನಪು

ಸುಂದರ ಗತ ಕಾಲದ ನಿಧಾನ ಚಲನೆ ಹೊಂಗೆ

ಎಣ್ಣೆಯ ಮಂದ ದೀಪದ ಬೆಳಕು ಗಟ್ಟಿಮುಟ್ಟಾದ ಕರಿಯ

ಜಾಲಿಯ ಮಂಚ ಬಿಳಿಯ ಧೋತರ ನಿಲುವಂಗಿ

ರುಮಾಲು ಧರಿಸಿದ ಚಿಗುರು ಮೀಸೆಯ ಗಂಧರ್ವ

ಕುಳಿತಿದ್ದಾನೆ ರತಿ ಸತಿ ಪ್ರೇಯಸಿಯ ನಿರೀಕ್ಷೆಯಲಿ

ಸರಿಯದ ಕ್ಷಣ ಸ್ಥಗಿತ ಕಾಲ ಮುಚ್ಚಿದ ಬಾಗಿಲೆಡೆ

ಚಡಪಡಿಕೆಯ ನೋಟ! ಸಗ್ಗದ ನಿರೀಕ್ಷೆ

ಮೆಲ್ಲಗೆ ತೆರೆದು ಮುಚ್ಚಿದ ಬಾಗಿಲು ರಂಭೆಯೋ

ಊರ್ವಸಿಯೋ ಮೇನಕೆಯೋ ತಿಲೋತ್ತಮೆಯೋ

ಸಾಕ್ಷಾತ ಮೈದಳೆದು ನಿಂತಿದ್ದಳಲ್ಲಿ ಹೊಂಬಣ್ಣದ

ಪ್ರತಿಮೆ ಜೀವದಳೆದಿತ್ತಲ್ಲಿ ವಿಶಾಲ ನೊಸಲು

ಮಧ್ಯೆ ಕುಂಕುಮದ ಬೊಟ್ಟು ಮಲ್ಲಿಗೆಯ ಹೂ

ಮುಡಿದ ತುಂಬುಗೂದಲ ಹೆರಳು ಎದೆಯ ಮೇಲೆ

ತೊನೆಯುವ ನಾಗರ ನಿಶ್ಶಬ್ದದಲಿ ಸಾಗಿ ಬಂದಳು

ಶಯ್ಯೆಯೆಡೆಗೆ ನಿಶ್ಚಲ ರಾತ್ರಿ ನೀರವ ಮೌನ

ಕಳೆದಿತ್ತು ಸುಮಧುರ ರಾತ್ರಿ ಹೃದಯಗಳೊಂದಾಗಿ

ಸಾಗರದ ತೀರದಲಿ ಕತ್ತಲಾವರಿಸುತಿದೆ

ಗಗನದಲಿ ಮಿಣುಕು ಚುಕ್ಕಿಗಳ ಮೆರವಣಿಗೆ

ಯುವ ಜೊಡಿ ಮೈಮರೆತಿದೆ ಕೇಳಿಯಲಿ

ವೃದ್ಧ ಜೀವದ ಕಳೆದ ಬದುಕಿನ ಅವಲೋಕನ

ಗತ ಸುಂದರ ನೆನಪುಗಳ ಬಾಗಿಲು ಮುಚ್ಚಿದೆ

ಕಾಮನೆಗಳು ಆವೆಯಾಗಿ ಗಗನಮುಖಿ

ಮುರುಟಿದ ಪ್ರೇಮದ ಸಂಜೆ ಬದುಕು ಪ್ರೀತಿ

ಪ್ರೇಮ ವಿರಹ ಕೋಪ ತಾಪ ಯಾವುದೂ

ಪ್ರಕಟಗೊಳ್ಳದ ನಿಶ್ಚಲ ‘ನಿರ್ಲಿಪ್ತ ಬದುಕು’

ಮನೆಗೆ ಮರಳಿದ ವೃದ್ಧ ಹೊತ್ತಿಸಿದ ಲಾಟೀನು

ಹೊತ್ತಿ ಉರಿಯಿತು ಬತ್ತಿ ಹಳದಿಯಾಗಿ ಬೀಸಿದ

ಮೆಲುಗಾಳಿ ದೀಪದ ಕುಡಿಯ ಹೊಯ್ದಾಟ ಲಾಂದ್ರದ

ಪಾವು ಕಪ್ಪಾಗಿ ದೀಪದ ಕುಡಿ ಕೆಂಪು

ಉರಿವ ದೀಪದ ಸೊಡರು ಜೋರು ಗಾಳಿಗೂ

ಆರಬಹುದು ಉರಿದರೆ ಉರಿದೀತು ಎಣ್ಣೆ ತೀರುವವರೆಗೆ

ಎಲ್ಲರ ಬದುಕೂ ಅಷ್ಟೆ ಬಾಲ್ಯ ಯೌವನ ವಾರ್ಧಕ್ಯ

ಕೊನೆಗೆ ಅವಸಾನ ಅಲ್ಲಿಗೆ ಬದುಕಿನ ‘ಪರಿಸಮಾಪ್ತಿ’

                *

ಚಿತ್ರ ಕೃಪೆ- ಅಂತರ್ಜಾಲ