ನಾನೊಂದು ಕಾಗದದ ಗುಲಾಬಿಯ ಮಾಡಿ
ಅದಕ್ಕೆ ಮುಳ್ಳಿಲ್ಲವೆಂದು ನನ್ನೊಳಗೇ ಬೀಗುತ್ತಿದ್ದೆ…
ಯಾರಿಗೂ ಕಾಣದಂತೆ ಅದ ನನ್ನಲ್ಲೇ ಬಚ್ಚಿಟ್ಟು
ನನ್ನವಳಿಗೆ ಕೊಡುವ ಕನಸನ್ನು ನಾ ಕಾಣುತ್ತಿದ್ದೆ…
ಅವಳು ಮುಡಿದ ನಿಜವಾದ ಹೂವನ್ನು ನೋಡಿ
ನನ್ನ ಗುಲಾಬಿಯೇಕೋ ಕೈಯಲ್ಲಿಯೇ ಬಾಡಿತ್ತು…
ಮುದುಡಿ ನೆಲಕ್ಕೆಬಿದ್ದ ಗುಲಾಬಿಯ ಅವಳು ನೋಡಿ
'ಆ ಕಾಗದ ನಿನ್ನದೆಂದು' ನಸುನಕ್ಕಳು ನನ್ನಕೈಗಿತ್ತು..
ಹೂವನ್ನು ಮುದುಡಿಸಿದ ಕೈಗೆ ಶಪಿಸಲೂ ಆಗದೇ
ನಿಂತಿದ್ದೆ ನಾನಲ್ಲಿ ಒಬ್ಬ ಮೂಕ ಪ್ರೇಕ್ಷಕನಂತೆ…
ಕಾಗದ ಹಿಡಿದ ಕೈಯಲ್ಲೇನೋ ನೋವಾದಂತಾಗಿ
ಇಲ್ಲದ ಮುಳ್ಳಿಂದಾದ ಗಾಯ ಭಾಸವಾದಂತೆ…
ಕಾಗದದ (ಗುಲಾಬಿಯ) ಮೇಲೆ ಈ ಸಾಲು ಮೂಡಿತ್ತು
ಗುಲಾಬಿಯ ಪ್ರೀತಿಯಲ್ಲದಿದ್ದರೂ, ಕಾಗದದ ಸ್ನೇಹ ಬೇಕಿತ್ತು..
ಆದರೆ ಗೆಳತಿಗೆ ಗೆಳೆತನವೂ ಇಷ್ಟವಿರಲಿಲ್ಲವೇನೋ
ಈ ವಾಸ್ತವವ ಒಪ್ಪಲು ನನಗೂ ಮನಸ್ಸಿಲ್ಲವೇನೋ…
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!