‘ಎಡಗೈಯಲ್ಲಿ ರಾಟೆ, ಬಲಗೈಯಲ್ಲಿ ಗೀತೆ ಹಿಡಿದವರಾರು ಗೊತ್ತೆ? ಅವರೇ ನಮ್ಮ ಮಹಾತ್ಮ ಗಾಂಧೀಜಿ’. ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಇದನ್ನು ಅಭಿನಯಿಸಿ ಹಾಡಿದವರು. ಮಹಾನುಭಾವರಾದ ಬಾಪೂಜಿಯವರ ಜನ್ಮ ದಿನವನ್ನು ನಾವೆಲ್ಲ ಸೇರಿ ಆಚರಿಸೋಣ.
೧೮೬೯ ಒಕ್ಟೋಬರ್ ೨ರಂದು ನಾವು ಗಾಂಧೀಜಿಯವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಅದೇ ದಿನ ಭಾರತದ ಶ್ರೇಷ್ಠ ದಾರ್ಶನಿಕ, ಮುತ್ಸದ್ದಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನೂ ಒಟ್ಟಿಗೆ ಸೇರಿ ಆಚರಿಸುತ್ತೇವೆ.
೧೮೬೯ ಒಕ್ಟೋಬರ ೨ರಂದು ಗುಜರಾತ್ ನ ಪೋರಬಂದರಿನಲ್ಲಿ ಕರಮಚಂದ್ ಗಾಂಧಿ, ಪುತಲೀಬಾಯಿ ದಂಪತಿಗಳಿಗೆ ಬಾಲಕ ಮೋಹನ್ ದಾಸನ ಜನನವಾಯಿತು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸತ್ಯದ ಪ್ರತಿಪಾದಕರಾದರು. ಸತ್ಯ ಹರಿಶ್ಚಂದ್ರ, ಶ್ರವಣನ ಪಿತೃಭಕ್ತಿ ಗಾಂಧೀಜಿಯವರ ಮೇಲೆ ಅತ್ಯಂತ ಪ್ರಭಾವ ಬೀರಿದ ಪುಸ್ತಕಗಳು. ತಾವೇ ಆ ಪುಸ್ತಕದ ಪಾತ್ರಧಾರಿಗಳಾಗಿ ನಟಿಸಿ ಸಂತೋಷ ಪಡುತ್ತಿದ್ದರಂತೆ.
ಬಾಲ್ಯದಲ್ಲಿ ಕಲಿಯುತ್ತಿದ್ದಾಗ ತಂದೆಯವರನ್ನು ಎದುರಿಸಲು ಧೈರ್ಯ ಸಾಲದೆ ಪತ್ರ ಬರೆದಿದ್ದರಂತೆ. ಅಪ್ಪಟ ಸಸ್ಯಾಹಾರಿ ಕುಟುಂಬದವರಾದ ಬಾಪು ಗೆಳೆಯರ ಜೊತೆ ಸೇರಿ ಮಾಂಸಾಹಾರ ಸೇವಿಸಿದ್ದರಂತೆ. ತಪ್ಪು ಮಾಡಿದ್ದೇನೆಂದು ಅವರ ಆತ್ಮ ಚುಚ್ಚುತ್ತಿತ್ತಂತೆ. ತಂದೆಯವರಿಗೆ ತನ್ನ ಮಗನ ಸತ್ಯ ನೋಡಿ ಸಂತೋಷದ ಕಣ್ಣೀರು ಧಾರಕಾರವಾಗಿ ಸುರಿಯಿತಂತೆ. ಅದೇ ಕೊನೆ ನಂತರ ಎಂದೂ ಮಾಂಸಹಾರ ಸೇವಿಸಿಲ್ಲ ಅವರು.
ವಿದೇಶಕ್ಕೆ(ಲಂಡನಿಗೆ) ಓದಲು ಹೋಗುವಾಗ, ಅವರ ತಾಯಿಯವರು ಮಾಂಸ, ಮಧ್ಯ, ಕಾಮದಾಹಗಳನ್ನು ತ್ಯಜಿಸಿ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುತ್ತೇನೆಂದು ಪ್ರಮಾಣ ಮಾಡಿಸಿದ್ದರಂತೆ. ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಬಾಪೂರವರ ಆತ್ಮಚರಿತ್ರೆಯಲ್ಲಿ ಎಲ್ಲವನ್ನು ಬರೆದಿದ್ದಾರೆ. ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ಸಣ್ಣ ವಯಸ್ಸಿನಲ್ಲಿಯೇ ಧುಮುಕಿದವರು. ಸತ್ಯ, ಪ್ರೇಮ, ನ್ಯಾಯ, ನಿಷ್ಠೆ, ತ್ಯಾಗ, ಬಲಿದಾನ, ಅಹಿಂಸೆ ಇವರ ಅಸ್ತ್ರಗಳಾಗಿದ್ದವು.
ಭಾರತದ ಸರ್ವೋತ್ಕ್ರೃಷ್ಟ ವ್ಯಕ್ತಿ, ಧಾರ್ಮಿಕ ಚಿಂತಕ. ಲಂಡನಿನಲ್ಲಿ ಭಗವದ್ಗೀತೆಯ ಅನುವಾದ ಜವಾಬ್ದಾರಿ ನಿಭಾಯಿಸಿದರು. ಹಿಂದೂ ಧರ್ಮದ ಸಾರವನ್ನು, ಕ್ರ್ಯೆಸ್ತ ಧರ್ಮದ ಬಗ್ಗೆ ಆಳವಾದ ಅಧ್ಯಯನ ಕೈಗೊಂಡರು. ೧೮೭೫ರಲ್ಲಿ ಥಿಯೋಫಿಕಲ್ ಸೊಸೈಟಿ ಸೇರಿ ವಿಶ್ವವೇ ನನ್ನ ಮನೆ, ಎಲ್ಲರೂ ಒಂದೇ, ಸಹೋದರರಂತೆ ಪರಸ್ಪರ ಜೀವಿಸೋಣ ಎಂಬ ಕರೆಯಿತ್ತರು. ಎಲ್ಲಾ ಧರ್ಮಗಳ ಸಾರವನ್ನು ಅರಿಯುವ ನಿಟ್ಟಿನಲ್ಲಿ ಅಧ್ಯಯನ ಮಾಡಿ, ಒಳತಿರುಳನ್ನು ಕರಗತ ಮಾಡಿಕೊಂಡರು.
೧೮೯೧ರಲ್ಲಿ ವಕೀಲಿ ವೃತ್ತಿಗಿಳಿದರೂ ಸಮಾಧಾನವಿರಲಿಲ್ಲ. ದಬ್ಬಾಳಿಕೆ, ಹಿಂಸೆ, ಲಂಚ, ಭೃಷ್ಟಾಚಾರ ಅವರಿಗೆ ಹಿಡಿಸುತ್ತಿರಲಿಲ್ಲ. ದ.ಆಫ್ರಿಕಾದ ಕರಿಯ ಜನಾಂಗದವರ ನಾಗರಿಕ ಹಕ್ಕುಗಳಿಗಾಗಿ ಸತತ ಹೋರಾಡಿ ಗೆದ್ದ ಧೀಮಂತರು. ಆಫ್ರಿಕಾದಲ್ಲಿನ ವರ್ಣಭೇಧ ನೀತಿ ಅವರ ಮನಸ್ಸನ್ನು ಕಲಕಿತು. ಮಾನವರೆಲ್ಲ ಒಂದೇ ಎಂಬ ವಿಶ್ವ ಮಾನವತೆಯ ಸಂದೇಶ ಸಾರಿದರು.
ಬಹಳ ಸರಳ ವ್ಯಕ್ತಿತ್ವ, ನಡೆನುಡಿ, ಸತತ ಪರಿಶ್ರಮ, ನಮ್ಮ ಕೆಲಸವನ್ನು ನಾವೇ ಮಾಡಬೇಕು,’ಕಾಯಕದಲ್ಲಿ ದೇವನ ಕಾಣು’ ತತ್ವ, ಉಪವಾಸ, ತನ್ನ ತಪ್ಪಿಗೆ ತನಗೆ ತಾನೇ ಶಿಕ್ಷೆ ವಿಧಿಸಿಕೊಳ್ಳುವುದು, ಇತರರಿಗಲ್ಲ ತ್ಯಾಗಿ, ಭೋಗ ವರ್ಜ್ಯ, ಶಾಂತಿಯಲ್ಲಿ ಎಲ್ಲವೂ ಅಡಗಿದೆ ಎಂದು ಸಾರಿದವರು ಈ ಎಲ್ಲಾ ಗುಣಗಳಿಂದ ಮಹಾತ್ಮಾ, ಬಾಪೂ, ಮಕ್ಕಳ ತಾತ, ರಾಷ್ಟ್ರಪಿತ ಅನಿಸಿಕೊಂಡ ಮಹಾಚೇತನ. ಉಪ್ಪು ಎನ್ನುವುದು ಅವಶ್ಯವಸ್ತು, ಅದಕ್ಕೂ ಕರ ವಿಧಿಸಿದಾಗ ಸತ್ಯಾಗ್ರಹ ವನ್ನೇ ಮಾಡಿದವರು. ಬ್ರಿಟಿಷರ ದಬ್ಬಾಳಿಕೆ, ಅರಸೊತ್ತಿಗೆ ವಿರುದ್ಧ ಮೌನ ಪ್ರತಿಭಟನೆ, ಯಾರು ಏನೇ ಹೇಳಿದರೂ ಹಿಂಸೆ ಬೇಡ, ಪ್ರೀತಿ ವಿಶ್ವಾಸದಿಂದಲೇ ಜನಮಾನಸದಲ್ಲಿ ನೆಲೆ ನಿಂತ ರಾಷ್ಟ್ರಸೇವಕರೆಂದರೂ ತಪ್ಪಾಗಲಾರದು. ನಿರ್ಭೀತಿಯಿಂದ ದುಡಿಯಬೇಕು, ತನ್ನೊಂದಿಗೆ ಪರಹಿತ ಸಾಧಿಸಬೇಕು. ಸಮಾಜಕ್ಕೆ ಹಿತವಾದುದನ್ನು ನೀಡಬೇಕು. ಹಗೆತನ, ದ್ವೇಷ, ಅಸೂಯೆ ಬೇಡ, ಇದು ಮನುಷ್ಯನ ನಾಶಕ್ಕೆ ಕಾರಣವೆಂದರು. ಯಾರಲ್ಲಿ ಹಗೆತನವಿಲ್ಲವೋ, ಮನಶುದ್ಧಿ ಇದೆಯೋ, ಮತ್ಸರವಿಲ್ಲವೋ ಅವರೇ ನಿಜವಾದ ಶ್ರೀಮಂತರೆಂದರು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವ ಕೆಲಸ ಇಂದಿನ ನಮ್ಮ ಕೈಯಲ್ಲಿದೆ.
‘ತೃಪ್ತಿ ಎನ್ನುವುದು ಪ್ರಯತ್ನದಲ್ಲಿದೆ, ದೊಡ್ಡ ದೊಡ್ಡ ಸಾಧನೆಯಲ್ಲಿ ಅಲ್ಲ’ ಎಂದರು. ಅದಮ್ಯ ಇಚ್ಛೆ ಎಲ್ಲಿದೆಯೋ ಅಲ್ಲಿ ಸಾಧನೆ ತನ್ನಿಂದ ತಾನೆ ಬರುತ್ತದೆ. ಆರೋಗ್ಯ ಚರ್ಚೆಗಳು ಪ್ರಗತಿಯ ಸಂಕೇತ. ಭಗವಂತನಿಗೆ ಯಾವುದೇ ಕಟ್ಟುಪಾಡುಗಳಿಲ್ಲ, ನಮಗ್ಯಾಕೆ ಅದೆಲ್ಲ ಎಂದು ಹೇಳಿದ ಮಹಾನುಭಾವರ ಜನ್ಮದಿನದಂದು ಅವರನ್ನು ನೆನಪಿಸಿ ಕೊಳ್ಳೋಣ, ಗಾಂಧೀಜಿಯವರ ಧ್ವನಿಗೆ ನಾವು ಧ್ವನಿ ಗೂಡಿಸೋಣ.
ಲಾಲ್ ಬಹಾದ್ದೂರ್ ಶಾಸ್ತ್ರಿ: ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಧೀಮಂತರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಮುಖರು. ಪ್ರಾಮಾಣಿಕ, ಸ್ವಾಭಿಮಾನಿ, ದೇಶಾಭಿಮಾನಿ, ಬಡತನದ ಜೀವನ ಇವೆಲ್ಲವೂ ಶಾಸ್ತ್ರಿಯವರನ್ನು ಉನ್ನತ ಸ್ಥಾನಕ್ಕೇರಿಸಿತು. ಶ್ರೇಷ್ಠ ಮುತ್ಸದ್ದಿ, ಸಜ್ಜನ ರಾಜಕಾರಿಣಿ, ಅಪ್ರತಿಮನಾಯಕ, ಪಾಕಿಸ್ತಾನ ಯುದ್ಧ ನಿಭಾಯಿಸಿ ಜಯಶಾಲಿಯಾದ, ಆಹಾರ ಕೊರತೆಗಾಗಿ ರೈತಪರ ಹೋರಾಟ ಆ ನಿಟ್ಟಿನಲ್ಲಿ ದುಡಿದ ಸಾಹಸಿಗ.
ಭಾರತಿಯ ಸಂಸ್ಕೃತಿಯನ್ನು ಪ್ರತಿಪಾದಿಸಿದ ರಾಷ್ಟ್ರ ನಾಯಕ. ಶಾಸ್ತ್ರೀಜಿಯವರ ಜನ್ಮದಿನವನ್ನು ಜೊತೆಗೆ ಆಚರಿಸೋಣ. ಇಬ್ಬರೂ ಮಹಾ ನಾಯಕರುಗಳೂ ದೇಶಕ್ಕಾಗಿ ಹೋರಾಡಿದ ರಾಷ್ಟ್ರಕಂಡ ಮಹಾ ಚೇತನಗಳು, ಇದೋ ನನ್ನ ನಮನಗಳು
-ರತ್ನಾ ಕೆ ಭಟ್ ತಲಂಜೇರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!