ದೃಷ್ಟಿಯಂತೆ ಸೃಷ್ಟಿ



ನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು

ನಮ್ಮ ದೃಷ್ಟಿ ಬದಲಾದರೆ ಸೃಷ್ಟಿಯು ಬದಲಾಗುವುದು

ಕಲ್ಲನ್ನು ಕಲ್ಲು ಎಂಬಂತೆ ಕಂಡರೆ ಕಲ್ಲು ಕಲ್ಲಾಗಿಯೇ ಉಳಿಯುತ್ತದೆ, ಕಲ್ಲಿಗೊಂದು ರೂಪವನ್ನು ನೀಡಿ ದೇವರೆಂದು ಕಂಡರೆ ಕಲ್ಲು ಸಹ ದೇವರಾಗುತ್ತದೆ. ಅದೇ ರೀತಿಯಲ್ಲಿ ನಾವು ಪ್ರಪಂಚವನ್ನು ಒಳ್ಳೆಯ ದೃಷ್ಟಿಯಿಂದ ಕಾಣಬೇಕು, ಪ್ರಪಂಚವನ್ನು ಅಷ್ಟೇ ಅಲ್ಲ ಪ್ರತಿಯೊಂದು ವಸ್ತು, ವ್ಯಕ್ತಿ, ವಿಷಯ, ವಿಚಾರಗಳ ಜೊತೆಗೆ ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಸಹ ನಾವೆಲ್ಲರೂ ಒಳ್ಳೆಯ ದೃಷ್ಟಿಯಿಂದಲೇ ಕಾಣಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಒಳಿತು ಕೆಡುಕುಗಳು, ಕಷ್ಟ ಸುಖಗಳು, ನೋವು ನಲಿವುಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಬಂದು ಹೋಗುತ್ತಿರುತ್ತವೇ, ಇವುಗಳನ್ನು ನಾವು ಬಯಸದೆ ಬರುವ ಅತಿಥಿಗಳಂತೆ ಕಾಣಬೇಕು.

ಒಂದು ವಸ್ತುವನ್ನು ಕೊಳ್ಳುವ ಮುಂಚೆಯೇ, ಅದರ ಬಳಕೆಯ ಬಗ್ಗೆ ಕನಸನ್ನು ಕಾಣುತ್ತೇವೆ ಇಲ್ಲವೇ ಕಲ್ಪನೆ ಮಾಡಿಕೊಳ್ಳುತ್ತೇವೇ. ಆ ವಸ್ತುವನ್ನು ಕೊಂಡುಕೊಂಡ ನಂತರ ಪ್ರಾರಂಭದಲ್ಲಿ ಅತಿಯಾಗಿ ಬಳಕೆ ಸಹ ಮಾಡುತ್ತೇವೆ. ಕೆಲ ಕಾಲದ ನಂತರ ಆ ವಸ್ತುವಿನ ಬಗೆಗಿನ ಆಸಕ್ತಿ ಕಡಿಮೆಯಾಗುತ್ತದೆ, ಅದೇ ರೀತಿಯಲ್ಲಿ ನಾವು ಒಬ್ಬ ವ್ಯಕ್ತಿಯನ್ನು ಪ್ರಾರಂಭದಲ್ಲಿ ಬಹಳವಾಗಿ ನಂಬುತ್ತೇವೆ ನಂತರ ಆ ವ್ಯಕ್ತಿಯ ವ್ಯಕ್ತಿತ್ವದ ಪರಿಚಯವಾಗಿ ಆ ವ್ಯಕ್ತಿಯ ಮೇಲಿನ ನಂಬಿಕೆ ಸಹ ಕಡಿಮೆಯಾಗುತ್ತದೆ. ಹೊಸ ಹೊಸ ವಿಷಯ ವಿಚಾರಗಳನ್ನು ತಿಳಿಯುವಲ್ಲಿಯೂ, ಸಹ ನಾವು ಇದೆ ರೀತಿಯಲ್ಲಿ ವರ್ತಿಸುವ ಮನಸ್ಥಿತಿಯನ್ನು ಹೊಂದಿದ್ದೇವೆ.

ಪರಿಸ್ಥಿತಿಯು ವಸ್ತು, ವ್ಯಕ್ತಿ, ವಿಷಯ, ವಿಚಾರಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಏಕೆಂದರೆ ನಮ್ಮಂತೆ ಅವುಗಳು ಸಹ ಪರಿಸ್ಥಿತಿಯ ಕೈಗೊಂಬೆಗಳಾಗಿರುತ್ತವೆ. ನಾವು ಸಮಯ ಸಂದರ್ಭಗಳಿಗೆ ಅನುಸಾರವಾಗಿ ನಮ್ಮ ದೃಷ್ಟಿಯನ್ನು ಬದಲಾಯಿಸುತ್ತಾ ಸಾಗಬೇಕು. ಕಷ್ಟದ ಪರಿಸ್ಥಿತಿ ಬಂದಾಗ ಕುಗ್ಗದೆ ಈ ಪರಿಸ್ಥಿತಿ ಶಾಶ್ವತವಾಗಿ ಇರುವುದಿಲ್ಲ ಎಂಬ ದೃಷ್ಟಿಯಿಂದ ಕಷ್ಟಗಳನ್ನು ಎದುರಿಸಲು ಸಿದ್ದರಾಗಿರಬೇಕು, ಅದನ್ನು ಬಿಟ್ಟು ಅಯ್ಯೋ ನನಗೆ ಕಷ್ಟ ಬಂದಿದೆ ಎಂದು ಇದೆ ಪರಿಸ್ಥಿತಿ ಶಾಶ್ವತವಾಗಿ ಇರುತ್ತದೆ, ಎಂಬ ದೃಷ್ಟಿಯಿಂದ ನೋಡಿದರೆ ಮುಂದೆ ಬರುವ ಸುಖದ ಸಮಯವನ್ನು ಸವಿಯಲು ಆಗುವುದಿಲ್ಲ. ಅದೇ ರೀತಿಯಲ್ಲಿ ಸುಖವು ಬಂದಾಗ ಹಿಗ್ಗಬಾರದು ಏಕೆಂದರೆ ಕಷ್ಟದ ರೀತಿಯಲ್ಲಿ ಸುಖದ ಸಮಯವು ಸಹ ಬದಲಾಗುತ್ತದೆ, ಈ ಜಗತ್ತಿನಲ್ಲಿ ಯಾವುದು ಶಾಶ್ವತವಾಗಿ ಇರುವುದಿಲ್ಲ ಎಂಬ ನೈಜತೆಯನ್ನು ಅರಿತು ಬಾಳುವವರಿಗೆ ಯಾವುದೇ ಪರಿಸ್ಥಿತಿ ಆಗಲಿ ಪರಿಣಾಮವನ್ನು ಬೀರಲು ಸಾಧ್ಯವಿಲ್ಲ. 



ರಚನೆ:-ತುಂಬೇನಹಳ್ಳಿ ಕಿರಣ್ ರಾಜು ಎನ್