ಒಂದೇ ರೂಪ ಎರಡು ಗುಣ

ಪುಟ್ಟ ಮಗು

ಕೇಳಿತು-

'ಅಪ್ಪಾ..ಅಮ್ಮನ

ಜೊತೆ ಜಗಳವೇಕೆ?'

ತಂದೆ ಹೇಳಿದ-

'ಮಗು,ಅವಳು

ನನಗೆ ಹೆಂಡತಿ'

ಮಗು ಪುನಃ

ಕೇಳಿತು-

'ಮತ್ತೆ ನನ್ನ ಜೊತೆ

 ಏಕಿಲ್ಲ......?'

'ಅವಳು ನಿನಗೆ

ತಾಯಿ...!'

ಮಗು ನಲಿಯುತ್ತಾ

ಓಡಿ ಹೋಯಿತು;

ತಂದೆ ಪೆಚ್ಚು

ಮೋರೆಯಲಿ

ವಿಷಾದದ 

ನಗೆ ನಕ್ಕ!

***

ಸೋಜಿಗ!

ಮನೆಯಲಿರುವ

ತಂದೆ-ತಾಯಿಗಳಿಗೇ

ನಮಸ್ಕರಿಸಿ

ಆಶೀರ್ವಾದ

ಪಡೆಯದ 

ರಾಜಕಾರಣಿಗಳು...

 

ಎಲೆಕ್ಷನ್ ಹತ್ತಿರ ಬಂದಾಗ

ಜನ ಸಾಮಾನ್ಯರಿಗೂ

ನಮಸ್ಕರಿಸಿ

ಓಟನು 

ಬೇಡುವುದೇ

ಪ್ರಜಾಪ್ರಭುತ್ವದ ಸೋಜಿಗ!

***

ಸರಸ್ವತಿ ಮತ್ತು ಲಕ್ಷ್ಮೀ ಪುತ್ರರು...

ತನ್ನ ಭಾವಚಿತ್ರಕೆ

ಇಂಚಿಂಚೂ

ಜಾಗಕಾಗಿ

ಪತ್ರಿಕೆಯಲಿ

ತಡಕಾಡುವ

ಸರಸ್ವತೀ ಪುತ್ರ

ಸಾಹಿತಿಯನು ಕಂಡು-

ಇಡೀ ಪುಟದ

ಜಾಹೀರಾತಿನ

ಲಕ್ಷ್ಮೀ ವರಪುತ್ರ

ರಾಜಕಾರಣಿಯ

ಫೋಟೋವದು

ಅಟ್ಟಹಾಸದಲಿ

ಕೇಕೆ ಹಾಕಿ

ನಗುತಲಿತ್ತು

!*** 

ದೂರ ಮತ್ತು ಹತ್ತಿರ

ಬೆಟ್ಟವನ್ನು

ದೂರದಿಂದಲೇ

ನೋಡಬೇಕು...

 

ಪ್ರೀತಿ ಪಾತ್ರರನ್ನು

ಹತ್ತಿರದಿಂದಲೇ

ಆದರಿಸಬೇಕು!

***

ಸಂಸಾರ ನೌಕೆ

ಋಷಿ ಮುನಿಗಳು

ದಾಸವರೇಣ್ಯರಿಗಿಂತ

ನಾವೇ ಶ್ರೇಷ್ಠರು ಗೆಳೆಯಾ...

ಅವರೋ ಈ

ಸಂಸಾರ ನೌಕೆಯನು

ಅರ್ಧದಲೇ ಬಿಟ್ಟು

ದಾಟಲಾರದೆ ತೆರಳಿದವರು...

ನಾವೋ ಗೆಲ್ಲದಿದ್ದರೂ

ಅಲ್ಲಲ್ಲಿ ನಿಂತು ನಿಂತು

ತೇಲಿ ತೇಲಿ ತೆರಳುವವರು;

ಇಲ್ಲಾ ಮುಳುಗಿ

ಪಳೆಯುಳಿಕೆಗಳಾಗುವವರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ