ಅಮೇರಿಕಾ ಕಾರುಗಳ ರಾಷ್ಟ್ರ ಎಂಬುದನ್ನು ನಾವೆಲ್ಲಾ ಬಲ್ಲೆವು. ಅಮೇರಿಕಾದ ಕಾರುಗಳ ಜನಕ ಎಂದೇ ಪ್ರಸಿದ್ಧನಾದವನು ಹೆನ್ರಿ ಫೋರ್ಡ್. ಈತನೇ ಅಮೇರಿಕಾದ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕ. ಈತನ ಬಹು ಮುಖ್ಯ ಸಂಶೋಧನೆ ಮಾಡೆಲ್-ಟಿ ಕಾರು. ಇದು ಅಂದಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಓಡುವ ಕಾರಾಗಿತ್ತು! ಹೆನ್ರಿ ಫೋರ್ಡ್ ನ ಮೊಟ್ಟ ಮೊದಲ ಕಾರು ಫೋರ್ಡ್ ಎಂಬ ನಾಲ್ಕು ಗಾಲಿಗಳ ಸೈಕಲ್ ಕಾರು!

ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಈತನ ಆತ್ಮೀಯ ಸ್ನೇಹಿತನಾಗಿದ್ದ. ಈತ ಅಮೇರಿಕಾದ ಪ್ರಮುಖ ಬಿಸ್ನೆಸ್ ಮ್ಯಾನ್ ಆಗಿದ್ದು ಅಂದು ಈತನ ಗಳಿಕೆ ೧೮೮.೧ ಬಿಲಿಯನ್ ಗೆ ಏರಿತ್ತು. ಈತ ತನ್ನ ಮಗನೊಂದಿಗೆ ಸೇರಿ ಮಾಡೆಲ್-ಎ ಕಾರನ್ನು ಕಂಡುಹಿಡಿದಿದ್ದ. ಈತ ಭಾರೀ ಉದ್ಯಮಿ ಕೂಡಾ. ಈತ ಆ ಕಾಲದಲ್ಲೇ ಒಂದು ವಿಮಾನ ಕಂಪನಿಯನ್ನೇ ಕೊಂಡಿದ್ದ! ಅಮೇರಿಕಾದ ಡೆಟ್ರಾಯಿಟ್ ನಗರದಲ್ಲಿರುವ ಹೆನ್ರಿ ಫೋರ್ಡ್ ಮ್ಯೂಸಿಯಂ ಅಮೇರಿಕಾ ಅತ್ಯಂತ ದೊಡ್ಡ ಒಳಾಂಗಣ ಮ್ಯೂಸಿಯಂ ಎನ್ನಿಸಿದೆ. ಅಮೇರಿಕಾ ಜನತೆಗೆ ಅಂದು ಕಡಿಮೆ ಖರ್ಚಿನ ಕಾರುಗಳನ್ನು ಒದಗಿಸಿದ ಕೀರ್ತಿ ಫೋರ್ಡ್ ಗೆ ಸಲ್ಲುತ್ತೆ.

ಹೆನ್ರಿ ಫೋರ್ಡ್ ಒಬ್ಬ ಪ್ರಶಾಂತ ಮನುಷ್ಯನಾಗಿದ್ದು ಯಾರ ಗೋಜಿಗೂ ಹೋಗುತ್ತಿದ್ದಿಲ್ಲ. ನಿಜಕ್ಕೂ ಈತನಿಗೆ ಅಮೇರಿಕಾ, ಒಂದನೇ ಹಾಗೂ ಎರಡನೇ ಮಹಾ ಯುದ್ಧಗಳಲ್ಲಿ ಭಾಗವಹಿಸಿದ್ದು ಇಷ್ಟವಿರಲಿಲ್ಲ. ಆದರೆ ಒಂದನೇ ಮಹಾಯುದ್ಧದಲ್ಲಿ ಈತ ಕಾರುಗಳ ತಯಾರಿಕೆ ನಿಲ್ಲಿಸಿ, ಸೈನ್ಯಕ್ಕೆ ಯುದ್ಧೋಪರಣಗಳನ್ನು ಸರಬರಾಜು ಮಾಡಬೇಕಾದದ್ದು ಇವನ ದುರ್ದೈವವಾಗಿತ್ತು.

ಈತನಿಗೆ ಧೂಮಪಾನದ ದುರಭ್ಯಾಸವೂ ಇರಲಿಲ್ಲ. ಈತ 'ಕೆಟ್ಟ ಕೊಡುಗೆಗಳು' ಎಂಬ ಪುಸ್ತಕವನ್ನೂ ಬರೆದಿದ್ದಾನೆ. ಫೋರ್ಡ್ ನಿಜಕ್ಕೂ ಮೊದಲಿಗೆ ಒಬ್ಬ ಗಡಿಯಾರ ರಿಪೇರಿ ಮಾಡುವ ಮೆಕ್ಯಾನಿಕ್ ಆಗಿ ಹಣ ಗಳಿಸುತ್ತಿದ್ದ! ಈತ ತನ್ನ ೨೦ನೇ ವಯಸ್ಸಿನಲ್ಲಿ ಥಾಮಸ್ ಎಡಿಸನ್ ಇಲ್ಲ್ಯೂಮಿನೇಷನ್ ಕಂಪನಿಯಲ್ಲಿ  ಮುಖ್ಯ ಎಂಜಿನಿ ಯರ್ ಆಗಿ ಕೆಲಸಕ್ಕೆ ಸೇರಿದ್ದ! ತನ್ನ ಕಂಪನಿಯಲ್ಲಿ ಶೇಕಡಾ ೨೦ ರಷ್ಟು ವಿಕಲ ಚೇತನರಿಗೆ ಕೆಲಸ ನೀಡಿ ಅವರಿಗೆ ಸ್ಪೂರ್ತಿ ನೀಡಿದ್ದ ಕೀರ್ತಿ ಹೆನ್ರಿ ಫೋರ್ಡ್ ಗೆ ಸಲ್ಲಬೇಕು. ಹೆನ್ರಿ ಫೋರ್ಡ್ ಹುಟ್ಟಿದ್ದು ೩೦, ಜುಲೈ ೧೮೬೩ ರಲ್ಲಿ ಮಿಚಿಗನ್ ನ ಸ್ಪ್ರಿಂಗ್ ವೆಲ್ ಟೌನ್ ಶಿಪ್ ನಲ್ಲಿ. ಕಾರುಗಳ ಇತಿಹಾಸದಲ್ಲಿ ಮರೆಯಲಾಗದ ಹೆಸರು ಹೆನ್ರಿ ಫೋರ್ಡ್, ತನ್ನ ೮೩ ನೇ ವಯಸ್ಸಿನಲ್ಲಿ, ಅಂದರೆ ೭, ಏಪ್ರಿಲ್ ೧೯೪೭ರಂದು ಮರಣಿಸುತ್ತಾನೆ.

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ