ಸಣ್ಣವನಿದ್ದಾಗ ನಮ್ಮಮ್ಮನ ಒಂದು ನಿಯಮವಿತ್ತು- ಸಕುಟುಂಬ ಮನೆಯಡಿಗೆ ತಿಂದರೇನೇ ಊಟ. ಹೊರಗೆ ಏನೇ ತಿಂದು ಬಂದರೂ, ರಾತ್ರಿಯೂಟ ಒಡಹುಟ್ಟಿದವರೊಂದಿಗೆ ಅಮ್ಮನ ಕೈತುತ್ತಿಂದಲೇ ಮುಗಿಯಬೇಕು. "ಸ್ವಲ್ಪ ತಿನ್ನು, ಮನೆಯ ಅಡಿಗೆ ಬೇರೆ" ಎನ್ನುತ್ತಿದ್ದರು. ಆಗ ಅದು ಕೇವಲ ಅಮ್ಮನ ಹಠ ಅನ್ನಿಸಿತ್ತು. ಇಂದು ಅದರ ಅರ್ಥವಾಗುವುದು- ಅದು ಹಠವಲ್ಲ, ತಿಳಿವು. ಅದೇ ಅಕ್ಕಿ, ಅದೇ ತರಕಾರಿ, ಅದೇ ಕೈ- ಆದರೆ ಮನೆಯಡಿಗೆಯಲ್ಲಿ ಪ್ರೀತಿ, ತೃಪ್ತಿ ಇದೆ. ಆ ವ್ಯತ್ಯಾಸ ನಾಲಗೆಗೆ ಮಾತ್ರವಲ್ಲ, ಹೃದಯಕ್ಕೂ ತಿಳಿಯುವುದು. ಹಾಗಾಗಿ ಅಮ್ಮನ ಕೈತುತ್ತು ತಿಂದಂದು ಸುಖನಿದ್ರೆ, ಇಲ್ಲದಂದು ಚಡಪಡಿಕೆ. ಆಹಾರ ಎನ್ನುವ ಪದವನ್ನು ಕೇವಲ ‘ತಿನ್ನುವ ವಸ್ತು’ ಎಂಬ ಅರ್ಥಕ್ಕೆ ಸೀಮಿತಗೊಳಿಸಲಾಗದು. ಅದು ಸ್ವೀಕರಿಸುವ ಕ್ರಿಯೆ; ಪ್ರೀತಿಯ ಮೂಲಕ ನಡೆಯುವ ಪೋಷಣೆ. ಈ ವಿಭಾಗದಲ್ಲಿ ಆಹಾರ ಎನ್ನುವ ಪದದ ಹೊಸ ಪದರ ತೆರೆಯೋಣ.
ಆಹಾರ ಕೇವಲ ಹೊಟ್ಟೆ ತುಂಬಿಸುವ ವಸ್ತುವೆಂದು ತಿಳಿದರೆ, ಪ್ರಾಣಿ ಸ್ವರೂಪಿ ಮಾನವರು ಏನಾದರೂ, ಯಾವಾಗಾದರೂ, ಹೇಗಾದರೂ ತಿನ್ನಬಹುದು. ‘ಆಹಾರ’ ಪದದ ಅರ್ಥ- ಆರೋಗ್ಯಕ್ಕಾಗಿ, ಪೋಷಣೆಗಾಗಿ, ಮನಸಾರೆ, ಸಂಪೂರ್ಣವಾಗಿ ಸ್ವೀಕರಿಸುವ ಪದಾರ್ಥ. ಈ ಭಾವನೆ ಬಂದಾಗ, ಪ್ರಾಣ ಸ್ವರೂಪಿ ಮಾನವನ ಆಹಾರದ ಆಯ್ಕೆಗಳು ವಿರಳ. ಅಂತಹ ಆಹಾರ ಹೊಟ್ಟೆಗೆ ಭಾರವಾಗದೆ, ಪಂಚ ಪ್ರಾಣಗಳಿಗೂ ಆಧಾರ ಶಕ್ತಿಯಾಗುವುದು. ಹಾಗೆ ನೋಡಿದರೆ, ಈ ಜೀವದ ದಶ ದ್ವಾರಗಳಾದ- ಗುದ, ಮೂತ್ರದ್ವಾರ ಇಲ್ಲಾ ಜನನಾಂಗ, ಬಾಯಿ, ಎರಡು ಕಣ್ಣು, ಕಿವಿ, ಮೂಗು, ಮತ್ತು ಮನಸ್ಸಿಗೆ ಸಲ್ಲುವ ಎಲ್ಲವೂ ಆಹಾರವೇ. ಹಾಗಾದರೆ, ಒಂದು ದಿನದ ನನ್ನ ‘ಆಹಾರ’, ಬರೀ ತಿನ್ನುವ ಸ್ಥೂಲ ಆಹಾರ ಮಾತ್ರ ಅಲ್ಲ; ನೋಡಿದ ಸುದ್ದಿ, ಕೇಳಿದ ಮಾತು, ಹೇಳಿದ ಶ್ಲಾಘನೆ, ಸಿಕ್ಕ ಪ್ರೀತಿ, ಪಡೆದ ಸಂತೋಷ, ಎಲ್ಲ ಸೂಕ್ಷ್ಮ ಆಹಾರವೂ ಸೇರಿ ನನ್ನ ಒಟ್ಟು ಆಹಾರವಾಗುವುದು. ಈದಿನ ನನಗೆ ಜಡ ಹಿಡಿದರೆ, ಕಾರಣ ತಾಮಸಿಕ ಆಹಾರದಿಂದ; ಅಥವಾ ಮನಸ್ಸು ಚಂಚಲವಾದರೆ, ಅದು ರಾಜಸಿಕ ಆಹಾರದ ಪರಿಣಾಮ. ದೇಹ ಹಗುರವಾಗಿ ಮನಸ್ಸು ತಿಳಿಯಾದರೆ, ದೇಹ ಮತ್ತು ಮನಸ್ಸಿನ ಉಪವಾಸದ ಪರಿಣಾಮ. ಹಾಗಾಗಿ, ಒಟ್ಟು ಆಹಾರದ ಗುಣ ನನ್ನ ದೇಹ ಹಾಗೂ ಮನದ ಸ್ವಾಸ್ಥ್ಯ ನಿರ್ಧರಿಸುವುದೆಂದು ಅರಿವಾದಾಗ, ಮನಸ್ಸಿನ ಗುಣವನ್ನು ರೂಪಿಸುವ ನಿಜವಾದ ‘ಅಡಿಗೆಮನೆ’ ಎಲ್ಲಿದೆ?, ಯಾವ ರೀತಿಯ ಆಹಾರವನ್ನು ನಾನು ಸ್ವೀಕರಿಸಬೇಕೆನ್ನುವ ಪ್ರಶ್ನೆ ಮೂಡುವುದು.
ಆಹಾರವು ಶಕ್ತಿಯ ಸ್ವರೂಪ. ವಿಜ್ಞಾನವು "ಶಕ್ತಿಯ ಸೃಷ್ಟಿ ಮತ್ತು ನಾಶ ಅಸಾಧ್ಯ, ಶಕ್ತಿಯ ರೂಪ ಮಾತ್ರ ಮಾರ್ಪಡಿಸಬಹುದು" ಎಂದು ಹೇಳುವುದು. ಆಳವಾಗಿ ನೋಡಿದರೆ ವಿಜ್ಞಾನದ ಈ ಹೇಳಿಕೆ ಶಿವಶಕ್ತಿಯ ಸ್ವಭಾವ. ಒಂದು ಜೀವಿಯ ಆಹಾರದ ಶಕ್ತಿ, ಜೀವಿಯ ಚೇತನ ಶಕ್ತಿಯಾಗಿ ಬದಲಾಗುವುದು. ಆ ಚೇತನ ಶಕ್ತಿಯು, ಇನ್ನೊಂದು ಜೀವಿಯ ಆಹಾರವಾಗುವುದು. ಈ ಅವಲಂಬನೆಯನ್ನು ಆಹಾರದ ಸರಪಣಿಗೆ ಹೋಲಿಸಿದಾಗ ಜಗತ್ತಿನ ಜೀವರಾಶಿಗಳಲ್ಲಿ, ಒಂದು ಅಖಂಡ ಶಕ್ತಿ ನಿರಂತರವಾಗಿ ಹರಿಯುವ ಹಂದರದ ಅನುಭವ ಆಗುವುದು. ಆ ಅನಂತ ವಿಸ್ತಾರವುಳ್ಳ ಶಕ್ತಿ-ಹಂದರದ ಒಂದು ಸಣ್ಣ ಕುಣಿಕೆ ನಾನು, ಆ ಶಕ್ತಿಯ ಸಣ್ಣ ಪಾಲುದಾರ ನಾನು. ಆ ಶಕ್ತಿಯೇ ನಾನು!
ಹಾಗಾದರೆ, ಈ ಶಕ್ತಿ-ಹಂದರದಲ್ಲಿರುವ ಜೀವಿಗಳ ನಡುವೆ ಗಡಿ ಇಲ್ಲವೇ? ನಾವು ಆಹಾರವನ್ನು ‘ಹೊರಗಿಂದ ನಮ್ಮ ಜೀವ ಸೇರುವ ವಸ್ತು’ ಎನ್ನುವೆವು. ಆದರೆ ಒಂದು ಸರಳ ಪ್ರಶ್ನೆ ಕೇಳಿಕೊಳ್ಳಿ- ಒಂದು ತುತ್ತು ಅನ್ನ ನನ್ನ ಜೀವವಾಗುವ ನಿಖರ ಕ್ಷಣ ಯಾವುದು? ತುತ್ತು ಬಾಯಿಗೆ ಇಟ್ಟಾಗಲೇ? ನುಂಗಿದಾಗಲೇ? ಜೀರ್ಣವಾದಾಗಲೇ? ರಕ್ತ ಸೇರಿದಾಗಲೇ? ಜೀವಕೋಶ ಸೇರಿದಾಗಲೇ? ಪ್ರಾಣವಾದಾಗಲೇ? ಎಷ್ಟು ಆಳಕ್ಕೆ ಹೋದರೂ, ಒಂದು ಸ್ಪಷ್ಟ ಗಡಿ- "ಇಲ್ಲಿಂದ ಇದು ಹೊರಗಿನದಲ್ಲ, ಇದು ನಾನೇ" ಎಂದು ಹೇಳಲಾಗದು. ಜೀರ್ಣಕ್ರಿಯೆ ಕೂಡಾ ಒಂದು ನಿಧಾನವಾಗಿ, ಹಂತಗಳಲ್ಲಿ ನಡೆವ ವ್ಯವಹಾರ, ಒಂದು ಕ್ಷಣದ ಘಟನೆ ಅಲ್ಲ. ಅಂದರೆ, ‘ಹೊರಗಿನ’ ಮತ್ತು ‘ನನ್ನ’ ನಡುವೆ ಯಾವ ಗಡಿಯೂ ಇಲ್ಲ. ಇರುವುದು ಒಂದು ಪರಿವರ್ತನೆ ಮಾತ್ರ. ಪ್ರತಿ ದಿನ ಮೂರು ಬಾರಿ, ನನ್ನ ದೇಹ ಹೊರಗಿನ ಜಗತ್ತನ್ನು ನಿಧಾನವಾಗಿ ತನ್ನೊಳಗೆ ಎಳೆದುಕೊಳ್ಳುತ್ತಿದೆ, ಮತ್ತು ಅದೇ ರೀತಿ ಹಳೆಯ ‘ನನ್ನ’ನ್ನು ಹೊರಗೆ (ಉಸಿರು, ಬೆವರು, ಮಲ ರೂಪದಲ್ಲಿ) ಬಿಡುತ್ತಿದೆ. ಇಂದಿನ ‘ನಾನು’ ಎಂಬ ದೇಹದ ಪ್ರತಿ ಅಣುವೂ, ಕೆಲವು ವರ್ಷಗಳ ಹಿಂದೆ ‘ಹೊರಗಿನ’ ಆಹಾರವಾಗಿತ್ತು. ಎಲ್ಲೋ ಓದಿದ ನೆನಪು, ಪ್ರತೀ ಏಳು ವರ್ಷದಲ್ಲಿ ಈ ದೇಹದ ಪ್ರತೀ ಜೀವಕೋಶವೂ ಬದಲಾಗುವುದು. ಹಾಗಾಗಿ ಈ ದೇಹದಲ್ಲಿ ಗಡಿ ಇದೆ ಎಂಬ ಭಾವನೆಯೇ ಒಂದು ಭ್ರಮೆ. ವಾಸ್ತವದಲ್ಲಿ ಅದೊಂದು ನಿರಂತರ, ಎಂದೂ ನಿಲ್ಲದ ಶಕ್ತಿಯ ವಿನಿಮಯ ಕೇಂದ್ರ. ಹಾಗೇನೇ, ನಮ್ಮ ಮನಸ್ಸು ಕೂಡಾ ಇನ್ನೂ ಸೂಕ್ಷ್ಮವಾದ ವಿಶ್ವ ಶಕ್ತಿಯ ವಿನಿಮಯ ಕೇಂದ್ರ.
ನಾವು ತಿನ್ನುವ ಆಹಾರ, ಭೂಮಿಯ ಫಲವತ್ತತೆ, ಸೂರ್ಯನ ತೀಕ್ಷ್ಣ ಕಿರಣ, ಸಕಾಲದ ಮಳೆ, ಸಸ್ಯದ ಬೆಳೆ, ರೈತನ ಪರಿಶ್ರಮ, ವ್ಯಾಪಾರಿಯ ಸಾಗಾಣಿಕೆ, ಮನೆಯ ‘ಅನ್ನಪೂರ್ಣೆಯ’ ಪ್ರೀತಿಯ ಪಾಕದ ಫಲ. ಹಾಗಾಗಿ ನಮ್ಮ ಹಿರಿಯರು ಆಹಾರವನ್ನು ಸ್ವೀಕರಿಸುವ ಮುನ್ನ "ಅನ್ನದಾತಾ ಸುಖೀ ಭವ"- ಭೂಮಿಯಿಂದ ತಟ್ಟೆಯವರೆಗೆ, ಆಹಾರದ ಕಾರಣಕರ್ತರು ಸೌಖ್ಯದಿಂದಿರಲಿ ಎನ್ನುವ ಆಳವಾದ ಕೃತಜ್ಞತಾ ಭಾವ ತಳೆದು, ಶಾಂತಿಮಂತ್ರ ಪಠಿಸುತ್ತಿದ್ದರು. ಈ ಭಾವ, ನಮ್ಮ ಜೀರ್ಣಾಂಗದಲ್ಲಿ ಅನ್ನದ ಶಕ್ತಿ ಹೀರುವ ವಿಧಾನವನ್ನು ಬದಲಿಸುವುದು. ನಾನು ಹೇಳುವುದು ಕೇವಲ ಊಹೆಯಲ್ಲ, ಈ ಭಾವನೆಯ ಹಿಂದೆ ವೈಜ್ಞಾನಿಕ ಸತ್ಯವಿದೆ. ಮೂಲ ಪದಾರ್ಥ ಒಂದೇ ಆದರೂ, ಮನೆ ಅಡಿಗೆ ತಿಂದಾಗ ಸಿಗುವ ತೃಪ್ತಿ, ದೇವರ ಪ್ರಸಾದ ತಿಂದಾಗ ಸಿಗುವ ನೆಮ್ಮದಿ, ಬೇರೆಲ್ಲೂ ಸಿಗದು. ಯಾಕೆಂದರೆ ಮನೆ ಅಡಿಗೆಯಲ್ಲಿ ಪತಿ-ಪತ್ನಿಯ ಪ್ರೀತಿ ಇಲ್ಲಾ ಅಪ್ಪ-ಅಮ್ಮನ ವಾತ್ಸಲ್ಯಗಳು ತುಂಬಿವೆ. ಪ್ರಸಾದ ವಿನಿಯೋಗವಾದಾಗ ಅದರಲ್ಲಿ ದೈವಾಂಶ ತುಂಬಿರುವುದು. ಆ ಶಕ್ತಿ, ಲಾಭ ದೃಷ್ಟಿಯಿಂದ ಬಾಣಸಿಗ ಮಾಡಿದ ಹೋಟೆಲ್ ನ ಆಹಾರದಲ್ಲಿ ಇರಲಾರದು. ಹಾಗಾಗಿ ಕೋಪ ಅಥವಾ ದುಃಖದಲ್ಲಿ ಅಡಿಗೆ ಮಾಡಬಾರದು, ತಿನ್ನಲೂ ಬಾರದು. ನಮ್ಮ ದೇಹದ ಚಯಾಪಚಯ ಕ್ರಿಯೆಗೆ (metabolism) ಹೊಂದುವ ಇನ್ನೊಂದು ಜೀವಿ (ಸಸ್ಯ, ಪ್ರಾಣಿ) ನಮ್ಮ ಪ್ರಶಸ್ತ್ಯ ಆಹಾರ. ಇದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ವಿಶೇಷವಾಗಿ ಹೊರಗಡೆ ಹೋದಾಗ, ಆಹಾರ ತಯಾರಿಸಲು, ಮತ್ತು ಸ್ವೀಕರಿಸಲು ಬಹಳ ಕಟ್ಟುಪಾಡುಗಳು ಇದ್ದವು. ಹಿಂದೆ ಆಹಾರವನ್ನು ಮಡಿಕೆ ಇಲ್ಲವೇ ತವರ ಲೇಪಿತ ಹಿತ್ತಾಳೆಯ ಪಾತ್ರೆಯಲ್ಲೇ ಮಾಡಿ, ಶೇಖರಿಸುತ್ತಿದ್ದರು. ಏಕೆಂದರೆ, ಆಹಾರದಲ್ಲಿ ವಿಷಕಾರಕ ಅಂಶವಿದ್ದರೆ, ತಾಮ್ರ ಮತ್ತು ಹಿತ್ತಾಳೆಯ ಬಣ್ಣ ಬದಲಾಗುವುದು.
ಆಹಾರವನ್ನು ಯಾಂತ್ರಿಕ ಬದುಕಿನ ವೇಳಾಪಟ್ಟಿಯಂತೆ ತಿನ್ನುವ ಬದಲು ಹಸಿವಾದಾಗ ಸ್ವೀಕರಿಸಬೇಕು. ಯಾರು, ಎಷ್ಟು, ಯಾವ, ಮತ್ತು ಯಾವಾಗ ಆಹಾರ ತಿನ್ನಬೇಕು ಎನ್ನುವುದರ ಬಗ್ಗೆ ಆಯುರ್ವೇದದಲ್ಲಿ ಬಹಳ ವಿವರಗಳಿವೆ. ಈ ದೇಹವನ್ನು ನಡೆಸುವ ಪಂಚ ಪ್ರಾಣಗಳಿಗೆ ಕೊಡುವ ಆಹುತಿಯೇ ಆಹಾರ. ಯೋಗಿಗೆ ಬದುಕಲು ಆರು ತುತ್ತು ಅನ್ನ ಸಾಕು! ಇದಕ್ಕಿಂತ ಹೆಚ್ಚು ತಿನ್ನುವವರು ಭೋಗಿ!! ಆರು ತುತ್ತನ್ನು ಹೇಗೆ ತಿನ್ನುವುದೆಂದರೆ, ಪಂಚಭೂತಗಳ ಸಾಕ್ಷಿ ಮತ್ತು ಆತ್ಮಸಾಕ್ಷಿಯಾಗಿ ತಿನ್ನಬೇಕು. ಒಂದು ನಿಮಿಷ ಆಹಾರವನ್ನು ಕಣ್ತುಂಬ ಕೃತಜ್ಞತಾ ಭಾವದಿಂದ ನೋಡಿ, ಅದರ ಬಣ್ಣ, ರೂಪವನ್ನು ಆನಂದಿಸಿ. ನಂತರ ಆಹಾರವನ್ನು ಪ್ರೀತಿಯಿಂದ ಸ್ಪರ್ಶಿಸಿ, ಅದರ ಮೇಲ್ಮೈ ರಚನೆಯನ್ನು ಇಷ್ಟಪಟ್ಟು ನೇವರಿಸಿ (ಕಲಸಿ). ಮುಂದೆ ಒಂದು ತುತ್ತು ಕೈಯಲ್ಲಿ ಹಿಡಿದು ಆಳವಾದ ಉಸಿರು ತೆಗೆದುಕೊಂಡು ತೃಪ್ತಿಯಿಂದ ಆಘ್ರಾಣಿಸಿ. ಕೊನೆಗೆ ಆ ತುತ್ತನ್ನು ಬಾಯಲ್ಲಿ ಇಟ್ಟು ಅದರ ರುಚಿಯನ್ನು ನಿಧಾನ ಸವಿಯಿರಿ. ಆಹಾರ ನುಂಗಿ ಹೊಟ್ಟೆ ಸೇರಿದಾಗ, ಅತ್ಯಂತ ಸ್ಮರಣೆಯಿಂದ ನಿಮ್ಮ ಪೋಷಣೆಯಾಗಲಿ ಎನ್ನುವ ಮನೋಭಾವ ತಾಳಿ. ಒಂದು ತುತ್ತು ಮೂರರಿಂದ ಐದು ನಿಮಿಷ, ಹೀಗೆ ಆರು ತುತ್ತನ್ನು ತಿಂದಾಗ ಅದೊಂದು ಸಂತೃಪ್ತಿಯ, ಅವಿಸ್ಮರಣೀಯ ಅನುಭವವಾಗುವುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!