ಪ್ರಣತಿಯಲಿ ತನುವ ಕಾಂತಿ ಬೆಳಗಲಿ

ದೇವನಿರವ ಸಾರಲಿ ದೀಪಾವಳಿ

ಬೇನೆ ಬೇಸರಿಕೆ ಕೋಪ-ತಾಪಗಳ ಒದ್ದೋಡಿಸಲಿ ದೀಪಾವಳಿ

ಲಕ್ಷ್ಮೀದೇವಿ ಗೋವುಗಳ ಗೋವಿಂದನ ಆರಾಧಿಸುವ ದೀಪಾವಳಿ

ಎಲ್ಲರೊಂದಾಗಿ ಸಂಭ್ರಮಿಸಿ ನಲಿಯುವ ದೀಪಾವಳಿ

 

'ದೀಪದಿಂದ ದೀಪವ

ಹಚ್ಚಬೇಕು ಮಾನವ

ಕೇಳಲು ಕರ್ಣಾನಂದ, ಭಾವಾರ್ಥ ಮತ್ತೂ ಸೊಗಸು. ಅಜ್ಞಾನದ ಅಂಧಕಾರ ತೊಲಗಿ ಜ್ಞಾನದ ಪ್ರಭೆ ಹರಡಲಿ. ತಮ ನಾಶವಾಗಿ ಸಂತೋಷ ಉಕ್ಕಲಿ. ಅರಿಷಡ್ವರ್ಗಗಳು ಉರಿದು ಭಸ್ಮವಾಗಲಿ. ಜೀವ ಭಾವಗಳಲಿ ಹೊಸ ಚೈತನ್ಯ,ಪ್ರಭೆ ತುಂಬಿ ತುಳುಕಾಡಲಿ. ಕೆಟ್ಟದರ ನಾಶ, ಒಳ್ಳೆಯದರ ಪ್ರತೀಕ ದೀಪಗಳ ಹಬ್ಬ ಮನೆಮನಗಳಲಿ ಸುಖ, ಶಾಂತಿ, ನೆಮ್ಮದಿ ತುಂಬಿ  ಸಂತಸ, ಸಮೃದ್ಧಿ ಮೂಡಿಸಲಿ. ಅಹಂ ತಲೆಯೆತ್ತಿದಾಗ, ನನಗೇ ಎಲ್ಲವೂ ಸಿಗಬೇಕೆಂದು ಬಯಸಿದಾಗ ಅದನ್ನು ಮುರಿಯಲು ದೇವನಿದ್ದಾನೆ ಎನ್ನುವ ಸಂದೇಶ. ದುಷ್ಟರ ಮನದಲ್ಲಿ ಕೆಟ್ಟ ಆಲೋಚನೆ ಬಂದಾಗ, ಹೆಣ್ಣುಮಕ್ಕಳಿಗೆ ಅಪಮಾನವಾದಾಗ ರಕ್ಷಿಸುವುದು ಆದ್ಯ ಕರ್ತವ್ಯವೆಂದು ಸಾರುವ ಬೆಳಕಿನ ಕಿರಣವನ್ನು ಮೂಡಿಸುವ ಹಬ್ಬವಿದು. 'ಪ್ರಜ್ವಾಲಿತೋ ಜ್ಞಾನಮಯ ಪ್ರದೀಪ:'ಎಂಬ ವ್ಯಾಸೋಕ್ತಿಯಂತೆ, ಇಲ್ಲಿ ಬೆಳಗುವ ದೀಪವು ಜ್ಞಾನದ, ಪ್ರಾಣದ, ಮಂಗಲಮಯ ವಾತಾವರಣದ,ಮೂಲ ಪರಂಪರೆಯ ಸಂಕೇತವೂ ಹೌದು. ಅಗ್ನಿದೇವನ ಅವತಾರ ಕಾಲದ ಈ ಸಂದರ್ಭ ಆರಾಧನೆಗೆ ಸಕಾಲವಿದು. ನಮ್ಮೆಲ್ಲರ ಸಂತೋಷ, ಸಂಭ್ರಮ, ಸಂತಾಪ, ಉತ್ಸವ,ಬದುಕಿನ ಬವಣೆಯ ಹಾದಿಯಲ್ಲಿ ಅಗ್ನಿದೇವನ ನೆರವು ಬೇಕೇ ಬೇಕು. ಉದರಾಗ್ನಿ ರೂಪದಲ್ಲಿ ಆರೋಗ್ಯಭಾಗ್ಯ ನೀಡುವನು. ನಮ್ಮ ಈ ದೇಹವೆಂಬ ಯಂತ್ರದ ಚಾಲಕನವ.ಶರೀರವನ್ನು ಬೀಳದಂತೆ ಜಾಗ್ರತೆ ವಹಿಸುವ ಅಗ್ನಿ ಜೀವಸ್ವರೂಪನೂ ಹೌದು. ಅಗ್ನಿಯ ಪ್ರೀತ್ಯರ್ಥವಾಗಿ ದೀಪಗಳ ಬೆಳಗಿ ಕೃತಜ್ಞತೆ ಸಲ್ಲಿಸೋಣ.ದುಷ್ಟತನದಿಂದ ಲೋಕಕಂಟಕನಾಗಿ ಮೆರೆಯುತ್ತಿದ್ದ ನರಕಾಸುರನ ಹನನಗೈದು, ಮೋಕ್ಷವನ್ನು ಕರುಣಿಸಿ,ತೈಲಾಭ್ಯಂಗ ಮಾಡಿದವನು ಭಗವಾನ್ ಶ್ರೀಕೃಷ್ಣ.ನರಕದಿಂದ ಪಾರಾದ ಈ ದಿನವೇ ನರಕ ಚತುರ್ದಶಿ. ನರಕ ಎಂದರೆ ಅಜ್ಞಾನವೂ ಹೌದು. ಜ್ಞಾನದ ಬೆಳಕಾಗಿ ದೀಪ ಹಚ್ಚೋಣ. ಎಣ್ಣೆಸ್ನಾನದ ಈ ಹಬ್ಬದೊಂದಿಗೆ, ನವವಸ್ತ್ರ ಧರಿಸಿ, ಮನೆಮಂದಿ, ಬಂಧು ಬಾಂಧವರೆಲ್ಲ ಒಟ್ಟಾಗಿ ಸೇರಿ ಉಂಡುಟ್ಟು, ಸಂತಸಗೊಳ್ಳೋಣ. ಹತ್ತಿರದ ದೇವಾಲಯಗಳಿಗೆ ಭೇಟಿಯಿತ್ತು  ಎಲ್ಲರಿಗೂ ಒಳ್ಳೆಯದಾಗಲೆಂದು ಪ್ರಾರ್ಥಿಸೋಣ. ಬಳಗದ ಬಂಧುಗಳಿಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು.

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ