ಗೌರಿ ದೇವಿ ಬಾರಮ್ಮ

ಶಂಕರನ ರಾಣಿಯೆ ಬಾರಮ್ಮ

ಆರತಿ ಬೆಳಗುವೆ ಬಾರಮ್ಮ

ಭಕ್ತರಿಗೊಲಿದು ಹರಸಮ್ಮ

ಸಾಮಾನ್ಯವಾಗಿ ಉತ್ತರ ಕರ್ನಾಟಕದ ಹಳ್ಳಿ ಪರಿಸರದಲ್ಲಿ ಸಡಗರ, ಸಂಭ್ರಮ, ಸಂತಸದಿಂದ ಆಚರಿಸಲ್ಪಡುವ ಹಬ್ಬವೇ 'ಗೌರಿ ಹುಣ್ಣಿಮೆ'. ವಾರ ಪೂರ್ತಿ ಹೊಸ ಸೀರೆ,ಇರುವ ಆಭರಣಗಳನ್ನು ಧರಿಸಿ ಸಂತೋಷಪಡುವರು. ಕಾರ್ತಿಕ ದ್ವಾದಶಿಯಂದು ಮಣ್ಣಿನ ಗೌರಿಯನ್ನು ಮಾಡಿ, ಆರತಿ, ಪೂಜೆ ಮಾಡುವ ಪದ್ದತಿಯೂ ಇದೆ. ಸಕ್ಕರೆ ಅಚ್ಚು ವಿಶೇಷ. ಉತ್ತಮ ರೀತಿಯ ಸಕ್ಕರೆಗೆ ನಿಂಬೆರಸ, ಹಾಲು, ಏಲಕ್ಕಿ, ನೀರು ಬೆರೆಸಿ, ಹದ ಪಾಕ ಮಾಡಿ ಅಚ್ಚುಗಳಲ್ಲಿ ಹೊಯಿದು ಸಕ್ಕರೆ ಅಚ್ಚುಗಳನ್ನು ಒಂದೆರಡು ವಾರದ ಮೊದಲೇ ತಯಾರಿಸಿಡುತ್ತಾರೆ. ಚಿಕ್ಕ ಹುಡುಗಿಯರು ಬಣ್ಣ ಬಣ್ಣದ ದಿರಿಸು ಧರಿಸಿ, ಸಕ್ಕರೆ ಅಚ್ಚುಗಳನ್ನು ನೆರೆಹೊರೆಯ ಮನೆಗಳಿಗೆ ಹಂಚುವರು. ತಟ್ಟೆಯಲಿಟ್ಟು ತೆಗೆದುಕೊಂಡು ಹೋಗಿ ಗೌರಿಯ ಮೂರ್ತಿಗೆ ಆರತಿ ಬೆಳಗುವರು.

ಗೌರಿ ಗೌರಿ ಗಾಣಾ ಗೌರಿ

ಮ್ಯಾಣಾ ಗೌರಿ

ಕುಂಕುಮ ಗೌರಿ

ಅರಶಿನ ಗೌರಿ

ಅವರಿಯಂಥ ಅಣ್ಣನ ಕೊಡ

ತೊಗರಿಯಂಥ ತಮ್ಮನ ಕೊಡ

ಎಂದು ಹಾಡುತ್ತಾ ಕೋಲಾಟ ಆಡುವರು.ಇಲ್ಲಿ ಭಕ್ತಿಯ ಪರಾಕಾಷ್ಠೆ,ಸಂಬಂಧಗಳ ಬೆಸುಗೆ ಕಾಣಬಹುದು. ಪೂರ್ವಾಹ್ನದ ಸಮಯ (ನದಿಸ್ನಾನವೂ ಇದೆ) ಶುಚಿರ್ಭೂತರಾಗಿ ಗೌರಿಪೂಜೆಗೈಯ್ದು ,ದೀಪದಾನ ಇತ್ಯಾದಿ ಮಾಡಿ, ರಾತ್ರಿ ಆರತಿ ಎತ್ತಿ ಗೌರಿಯನ್ನು ಆರಾಧಿಸಿ, ಹತ್ತಿರದ ಕೆರೆಯ ನೀರಿನಲ್ಲಿ ಮೂರ್ತಿಯನ್ನು ವಿಸರ್ಜಿಸುವರು.

ವೈಕುಂಠವಾಸಿ ಮಹಾವಿಷ್ಣು ಇದೇ ದಿನ ಮತ್ಸ್ಯಾವತಾರ ತಾಳಿದನಂತೆ. ತ್ರಿಪುರದಹನವೂ ಇದೇ ದಿನ ಆಗಿ, ರಾಕ್ಷಸರ ಉಪಟಳ ನಾಶವಾಯಿತೆಂದು ನಂಬಿಕೆ. ಗೌರಿ ಹುಣ್ಣಿಮೆಯ ಬಗ್ಗೆ ಜಾನಪದ ಕಥೆಯೊಂದಿದೆ

ಒಮ್ಮೆ ಬರಗಾಲ ಬಂದು ನೀರಿನ ಮೂಲಗಳೆಲ್ಲ ಬತ್ತಿ ಹೋದಾಗ ಊರಿನ ಗೌಡ ಬುಡಬುಡಿಕೆಯವರಲ್ಲಿ ಕಾರಣ ಕೇಳಿದನಂತೆ. ಊರಿನ ಕೆರೆಗೆ ಮುತ್ತ್ಯೆದೆಯರ ಹಾರವಾಗಬೇಕು. ಗೌಡನ ಹಿರಿಸೊಸೆ ಗೌರಿಯು ವಿಷಯವನ್ನು ಅರಿತು, ಮಾವನವರ ಕೈಯಲ್ಲಿ ಸಂಕಲ್ಪ ಮಾಡಿಸಿದಳಂತೆ. ಕೆರೆಕಟ್ಟೆ ತುಂಬಿ ಹರಿಯಿತು. ಊರಿನ ಗೌಡ ಮಾವನಿಗೆ ಕೊಟ್ಟ ಮಾತಿನಂತೆ ಗೌರಿ ಕೆರೆಗೆ ಹಾರವಾದಳು. ಕಿರಿಸೊಸೆ ಗಂಗೆಯು ಅದೇ ಕೆರೆಗೆ ಹಾರಿ ಪ್ರಾಣತ್ಯಾಗ ಮಾಡಿದಳು.(ಇದೇ ಬೃಹತ್ತಾದ ಸೂಳೆಕೆರೆ ಎನ್ನಲಾಗಿದೆ) ಮೊದಲು ಗೌರಿಯನ್ನು ತಂದು ಆರತಿ ಪೂಜೆ ಮಾಡಿ ಪುನ: ಕೆರೆಗೆ ಬಿಡ್ತಾರೆ. ಅನಂತರ ಗಂಗೆಯನ್ನು ತಂದು ಪೂಜಿಸಿ ಕೆರೆಗೆ ಬಿಡಲಾಗುತ್ತದೆ. ಜಾನಪದದ ಸೊಗಡೇ ಹಾಗೆ. ಸಕಲ ಪಾಪಗಳ ಪರಿಹಾರ ಈ ಗೌರಿ ಹುಣ್ಣಿಮೆ ಆಚರಣೆಯಿಂದಾಗುವುದೆಂದು ನಂಬಿಕೆ ಪೌರಾಣಿಕ ಉಲ್ಲೇಖದಲ್ಲಿದೆ.

(ಸಂಗ್ರಹ)

-ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ