"ಕೋಟಿ ಧನವಿದ್ದರೂ ಪಟ್ಟಣವು ಗೋಳು,
ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು" - ಕುವೆಂಪು
ನಾನು ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಎಂಬ ಹಳ್ಳಿಯ ಬಳಿ ಇರುವ ನಾಯಕವಾಡಿ ಎಂಬ ಸಣ್ಣ ಹಳ್ಳಿಯಲ್ಲಿ. ನನ್ನ ಹಳ್ಳಿ (ನನ್ನ ಬಾಲ್ಯದ ದಿವಿಸಗಳಲ್ಲಿ) ಸಿರಿವಂತಿಕೆಯಲ್ಲಿ ಬಹಳ ಹಿಂದಿದ್ದರೂ, ನೈಸರ್ಗಿಕ ಸೌಂದರ್ಯದಲ್ಲಿ ಸ್ವಿಟ್ಜರ್ಲ್ಯಾಂಡ್ ಗಿಂತಲೂ ಸುಂದರವಾಗಿತ್ತು. ಹಾಗೆಯೇ, ನನ್ನ ಊರಿನವರು ಕೃಷಿಕರಾಗಿದ್ದರಿಂದ ಸರಳ ಬದುಕನ್ನು ಅನುಸರಿಸಿದರೂ, ಸಹಬಾಳ್ವೆಯಲ್ಲಿ ಬಹಳ ಮುಂದಿದ್ದರು. ಇನ್ನೊಬ್ಬರ ಕಷ್ಟ-ಸುಖಗಳಲ್ಲಿ ಸದಾ ಹಾಜರಿರುತ್ತಿದ್ದರು. ನಾಯಕವಾಡಿಯ ನನ್ನ ಬಾಲ್ಯದ ದಿವಸಗಳು, ನಿಜಕ್ಕೂ ಅಸೂಯೆ ಪಡುವಂತಿದ್ದವು.
ನಾಯಕವಾಡಿಯು, ಅರಬ್ಬೀ ಕಡಲತಡಿಯ ಒಂದು ಸಣ್ಣ ಅಭಿವೃದ್ಧಿ ಕಾಣದ ಹಳ್ಳಿಯಾಗಿತ್ತು. ಹಸಿರು ಗದ್ದೆಗಳ ನಡುವೆ ಅಲ್ಲಲ್ಲಿ ಸಣ್ಣಪುಟ್ಟ ಗುಡಿಸಲು ಮನೆಗಳು. ನಮ್ಮ ಮನೆಯ ಮುಂದೆ ಗೋಪಾಲಣ್ಣ ಅವರ ಸಣ್ಣ ಗುಡಿಸಲು ಇತ್ತು. ಅವರು ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ತನ್ನ ಗದ್ದೆಯಲ್ಲಿ ಎತ್ತುಗಳಿಂದ ನೇಗಿಲು ಮಾಡುವ ಕೃಷಿಕರಾಗಿದ್ದರು. ಪಕ್ಕದಲ್ಲಿ ರಾಮಣ್ಣ-ರಾಧಕ್ಕ ಎಂಬ ದಂಪತಿ, ಐವರು ಮಕ್ಕಳೊಂದಿಗೆ ಸಂತೋಷದಾಯಕ ಬದುಕು ನಡೆಸುತ್ತಿದ್ದರು. ಅವರ ಹಿರಿಯ ಮಗಳಾದ ನಾಗರತ್ನಕ್ಕ ಅವಳು ನನಗೆ ಲಂಗಡಿ (ಒಂದು ಕಾಲಿನಲ್ಲಿ ಜಿಗಿಯುತ್ತ ಮುಂದೆ ಓದುವ ಒಂದು ಆಟ) ಆಡಲು ಕಲಿಸಿಕೊಟ್ಟಿದ್ದಳು. ರಾಮಣ್ಣ-ರಾಧಕ್ಕ ಇಬ್ಬರೂ ಪ್ರತಿದಿನ ದುಡಿಯುವ ಕಾರ್ಮಿಕರಾಗಿದ್ದರು. ತೆಂಗಿನ ಮರ ಏರುವುದು, ಮರಗಳಿಗೆ ಕಟ್ಟೆ ಮಾಡುವುದು, ಇನ್ನಿತರ ಕೆಲಸ ಮಾಡುತ್ತಿದ್ದರು. ಅವರ ಮಗ ಅನಿಲ ಓದಿನಲ್ಲಿ ಬಹಳ ಚುರುಕಾಗಿದ್ದನು. ಅವನು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದನು. ಪ್ರತಿ ಪರೀಕ್ಷೆಯಲ್ಲಿ ಕ್ಲಾಸಿನಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದನು.
ನಮ್ಮ ಊರಿಗೆ ಒಂದೇ ಒಂದು ಆಟೋ ರಿಕ್ಷಾ ಇತ್ತು. ಮಂಜು ಅಣ್ಣ ಅದನ್ನು ನಡೆಸುತ್ತಿದ್ದನು. ನಮ್ಮ ಮನೆಯ ಹಿಂದೆ ರಾಮಕೃಷ್ಣ ಅಂಕಲ್ ಅವರ ದೊಡ್ಡ ಮನೆಯಿತ್ತು. ಅದು ಅಂಕಲ್ ಅವರ ಅಗಲಿದ ತಂದೆ ಕಟ್ಟಿದ ಮನೆಯಾಗಿತ್ತು. ಮನೆ ಪ್ರವೇಶಿಸುತ್ತಿದ್ದಂತೆ ಹಾರ ಹಾಕಿದ್ದ ಅಂಕಲ್ ಅವರ ತಂದೆಯ ದೊಡ್ಡ ಚಿತ್ರವಿತ್ತು. ಅಲ್ಲಿ ಪಕ್ಕದಲ್ಲೇ ದೇವರ ಕೊಣೆಯಿತ್ತು. ನಾವು ಬಾಲ್ಯದಲ್ಲಿ ಅಲ್ಲಿ ಆಟವಾಡುತ್ತಿದ್ದೇವು. ರಾಮಕೃಷ್ಣ ಅಂಕಲ್ ಅವರ ಹಿತ್ತಲಿನಲ್ಲಿ ಚಿಕ್ಕೂ, ಮಾವು, ಗೇರಿನ ಮರಗಳಿದ್ದವು. ಅಂಕಲ್ ಅವರು ಹಣ್ಣುಗಳನ್ನು ಗೋಣಿಗಳಲ್ಲಿ ಹಾಕಿ ಇಬ್ಬರು ಸೆವರನ್ನು ಮಂಜು ಅಣ್ಣ ಅವರ ಆಟೋ ರಿಕ್ಷಾದಲ್ಲಿ ಶನಿವಾರದ ಸಂತೆಗೆ ಕಳುಹಿಸುತ್ತಿದ್ದರು. ಅಂಕಲ್ ಅವರು ನಮಗೆ ಹಣ್ಣು ಹಂಪಲು ತಿನ್ನಲು ಆಗಾಗ ಕೊಡುತ್ತಿದ್ದರು. ಅಂಕಲ್ ಅವರು ನನ್ನಜ್ಜನವರ ಗೆಳೆಯರಾಗಿದ್ದರು. ಇಬ್ಬರು ಗಂಟೆಗಟ್ಟಲೆ ಮಾತನಾಡುತ್ತಿದ್ದರು.
ಧಾರ್ಮಿಕ ನೆಲೆಯಲ್ಲಿ ಮಾತನಾಡಿದರೆ, ಆ ಇಡೀ ಹಳ್ಳಿಯಲ್ಲಿದ್ದು ಕೇವಲ ಎರಡೇ ಎರಡು ಮುಸ್ಲಿಮರ ಮನೆಗಳಿದ್ದವು! ಒಂದು ನಮ್ಮ ಮನೆಯಾಗಿದ್ದರೆ, ಇನ್ನೊಂದು ನಮ್ಮ ಮನೆಯ ಪಕ್ಕದಲ್ಲಿರುವ ನನ್ನ ದೊಡ್ಡಮ್ಮ ಅವರ ಮನೆಯಾಗಿತ್ತು. ನಾನು ನನ್ನ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಮೈಸೂರಿನಲ್ಲಿ. ಏಪ್ರಿಲ್-ಮೇ ತಿಂಗಳಿನಲ್ಲಿ ಬೇಸಿಗೆಯ ರಜೆ ಆಚರಿಸಲು ಊರಿಗೆ ಬಂದಾಗ ನನ್ನ ಗೆಳೆಯರೆಲ್ಲರಲ್ಲಿ ಎಲ್ಲಿಲ್ಲದ ಸಂತೋಷ-ಸಡಗರ. ಮಕ್ಕಳೆಲ್ಲರು ಓಡಿ ನಮ್ಮ ಮನೆಗೆ ಬಂದು ಮಾತನಾಡಿಸುತ್ತಿದ್ದರು. 'ಮೈಸೂರು ಹೇಗಿದೆ? ಮೈಸೂರಿನ ಅರಮನೆ ಹೇಗಿದೆ? ಕೆ.ಆರ್.ಎಸ್ ಕುರಿತು ಹೇಳು..' ಎಂದೆಲ್ಲಾ ನನ್ನಲ್ಲಿ ಕೇಳುತ್ತಿದ್ದರು. ಮಧ್ಯಾಹ್ನ ಊಟಕ್ಕೆ ನನ್ನಜ್ಜಿ ಎಲ್ಲರಿಗೆ ಒಟ್ಟಿಗೆ ಊಟ ಬಡಿಸುತ್ತಿದ್ದರು. ಆ ಬೇಸಿಗೆಯ ಬಿಸಿಲಿನಲ್ಲೂ ಆಲದ ಮರ ಮತ್ತು ತೆಂಗಿನ ಮರಗಳು ತಂಗಾಳಿಯನ್ನು ಬೀಸುತ್ತಿದ್ದರು. ದಿನವಿಡೀ ನಮ್ಮ ಹುಡುಗರ ಮಾತುಕತೆ ನಡೆಯುತ್ತಿತ್ತು.
ನಮಗೆ ಕ್ರಿಕೆಟ್ ಆಡಲು ಬ್ಯಾಟು-ಬಾಲು ಇರುತ್ತಿರಲಿಲ್ಲ. ನಾವು ಸಣ್ಣ ತೆಂಗನ್ನು ಬಾಲು ಮಾಡಿ, ಕಟ್ಟಿಗೆಯ ಬ್ಯಾಟು ಮಾಡಿ ಕ್ರಿಕೆಟ್ ಆಡುತ್ತಿದ್ದೆವು. ನಾನು ಮೈಸೂರಿನಿಂದ ಟೆನಿಸ್ ಬಾಲ್ ತಂದಾಗ ನನಗೆ ಗೆಳೆಯರ ನಡುವೆ ಬಹಳ ಗೌರವ ಸಿಗುತಿತ್ತು. ಮೇ ತಿಂಗಳಿನ ಕೊನೆಯಲ್ಲಿ ನಾವು ಮೈಸೂರಿಗೆ ಹೋಗುವಾಗ, ಹುಡುಗರೆಲ್ಲ ಸಪ್ಪೆ ಮುಖ ಹಾಕುತ್ತಿದ್ದರು. ಅಂದು ನಮ್ಮ ಬಳಿ ಟಿವಿ ಇರಲಿಲ್ಲ; ಲ್ಯಾಪಟಾಪ್, ಮೊಬೈಲ್ ಫೋನುಗಳು ಏನೂ ಇರಲಿಲ್ಲ. ಆದರೂ, ಅವು ನನ್ನ ಬದುಕಿನ ಸ್ವರ್ಣ ದಿನಗಳು ಎಂದು ಎದೆ ತಟ್ಟಿ ಹೇಳುತ್ತೇನೆ. ಹಾಗೆಯೇ, ಮನಾಲಿ, ಮೂನಾರ್ ಇತ್ಯಾದಿಗಳು ಕೇವಲ ಹೆಸರಿಗಾಗಿರುವ ಪ್ರವಾಸ ತಾಣಗಳು; ಅಂದಿನದ ನನ್ನ ನಾಯಕವಾಡಿ ಭೂಮಿಯ ಮೇಲಿರುವ ಸ್ವರ್ಗವಾಗಿತ್ತು!
ಕೆಲವು ದಿನಗಳ ಹಿಂದೆ ನಾನು ನಾಯಕವಾಡಿಗೆ ಹೋಗಿದ್ದಾಗ ನನಗೆ ಬಹಳ ಬೇಸರವಾಯಿತು.ಊರಿನ ಹಿರಿಯರಲ್ಲಿ ಹಲವರು ದಿವ್ಯದೆಡೆಗೆ ತಮ್ಮ ಪಯಣವನ್ನು ಬೆಳೆಸಿದ್ದರು. ರಾಮಕೃಷ್ಣ ಅಂಕಲ್ ಅವರು ಹೃದಯಾಘಾತದಿಂದ ಅಗಲಿದರೆ, ಗೋಪಾಲಣ್ಣ ನಿದ್ರೆಯಲ್ಲೆ ಕೊನೆಯುಸಿರು ಎಳೆದರು ಎಂದು ಪರಿಚಿತರೊಬ್ಬರು ನನಗೆ ಹೇಳಿದಾಗ ನನಗೆ ಬಹಳ ದುಃಖವಾಯಿತು. ಅನಿಲ, ಈಗ ಬೆಂಗಳೂರಿನಲ್ಲಿ ಪೊಲೀಸ್ ಪೇದೆಯಾಗಿದ್ದಾನೆ ಎಂದು ರಾಧಕ್ಕ ಹೇಳಿದಾಗ ಬಹಳ ಖುಷಿ ಆಯಿತು. ನಾಗರತ್ನಕ್ಕ ಈಗ ಮೂರು ಮಕ್ಕಳ ತಾಯಿಯಾಗಿದ್ದಾಳೆ. ನಾಗರತ್ನಕ್ಕಳ ಮಕ್ಕಳಿಗೆ ನನ್ನ ಪರಿಚಯವೂ ಇರಲಿಲ್ಲ. ಹಾಗೆ, ಅವರು ಮೊಬೈಲಿನಿಂದ ತಲೆಯೆತ್ತಿ ನನಗೆ ನೋಡಲೇ ಇಲ್ಲ. ಗೋಪಾಲಣ್ಣನ ಮಗ ಈಗ ಅಮೆರಿಕಾದಲ್ಲಿ ಸಾಫ್ಟವೇರ್ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಅವನ ಮಕ್ಕಳು ಅಲ್ಲೇ ವಿದ್ಯಾಭ್ಯಾಸ ಮಾಡಿದರು; ದುರಾದೃಷ್ಠವಾತ್, ಆ ಪುಟ್ಟ ಮಕ್ಕಳಿಗೆ ಕನ್ನಡ ಮಾತನಾಡಲೂ ಬರುವುದಿಲ್ಲ. ಆ ಪುಟ್ಟ ಮಕ್ಕಳು ಅಜ್ಜಿಯ ಕಥೆಗಳನ್ನು ಕೇಳುವುದರಿಂದ ವಂಚಿತರಾದರು.
ಊರಿನ ರಸ್ತೆ ಅಗಲೀಕರಣದ ನೆಪದಲ್ಲಿ ಹಲವಾರು ಮರಗಳು ಕಡಿದಿದ್ದವು. ಸಣ್ಣಪುಟ್ಟ ಮನೆಗಳ ಬದಲಿಗೆ ಒಳ್ಳೊಳ್ಳೆ ಎ.ಸಿ ಮನೆಗಳು ತಲೆಯೆತ್ತಿ ನಿಂತಿದ್ದವು. ಸಂಜೆ ಗದ್ದೆಗಳಲ್ಲಿ ಮಕ್ಕಳು ಕ್ರಿಕೆಟ್ ಆಡುವುದು ಬಹಳ ಹಿಂದೆಯೇ ನಿಂತು ಹೋಗಿದೆ ಎಂದು ರಾಧಕ್ಕ ಹೇಳಿದಳು. ಮಕ್ಕಳು ಶಾಲೆಯಿಂದ ಮರಳಿ ನೇರವಾಗಿ ತಮ್ಮ ತಮ್ಮ ಕೋಣೆಗಳಲ್ಲಿ ಚಿಲಕ ಹಾಕಿ ಇನ್ಸ್ಟಾಗ್ರಾಮ್ ನೋಡುತ್ತಾ ಸಮಯ ಕಳೆಯುತ್ತಾರೆ. ಮಕ್ಕಳ ಕಲರವ ಕೇಳಲು ಸಿಗುತ್ತಿಲ್ಲ ಎಂದು ರಾಧಕ್ಕ ಸಪ್ಪೆ ಮುಖ ಹಾಕಿದಳು.
ಊರಿನ ನಡುವೆ ಡಾಂಬರು ರಸ್ತೆ ಬಂದಿತ್ತು. ಎಲ್ಲರ ಬಳಿ ಬೈಕು ಬಂದಿವೆ. ಈಗ ವಾಹನಗಳ ಧೂಳಿನಲ್ಲಿ ಉಸಿರಾಡಲೂ ಆಗುತ್ತಿಲ್ಲ. ಸಂಜೆ ಕೋಗಿಲೆಯ ಕುಹೂ, ಕುಹೂ ಎಲ್ಲೋ ಬೈಕುಗಳ ಹಾರ್ನ್ ಗಳಲ್ಲಿ ಮಾಯವಾಯಿತು. ಊರಿನ ನಡುವೆ ಇದ್ದ ಸುಂದರವಾದ ಸರೋವರವೊಂದು, ಡಾಂಬರು ರಸ್ತೆಯ ಕೆಳಗೆ ದಫನಗೊಂಡಿದೆ. ಈಗ ಚಳಿಗಾಲದಲ್ಲಿ ನಡೆಯಬೇಕಾಗಿದ್ಧ ಯಕ್ಷಗಾನ ಆಟವು, ನೋಡುವವರಿಲ್ಲದ ಕಾರಣ ನಿಂತು ಹೋಗಿದೆ. ನನ್ನ ಬಾಲ್ಯ ದಿವಸಗಳಲ್ಲಿ ನನ್ನಜ್ಜವರು ನನಗೆ ಯಕ್ಷಗಾನದ ಮೇಳದಿಂದ ಸಿಹಿ ತಿಂಡಿಗಳನ್ನು ತಂದು ಕೊಡುತ್ತಿದ್ದರು. ಈಗಿನ ಮಕ್ಕಳಿಗೆ ಚೈನೀಸ್ ಫಾಸ್ಟ್ ಫುಡ್ ಮುಂದೆ, ನಮ್ಮ ಕಾಲದ ಅಂತಹ ಸಿಹಿ ತಿಂಡಿಗಳೂ ಹಿಡಿಸುವುದಿಲ್ಲ. ಹಿಂದೆ ನಾವು ಒಂದು ಕುಲ್ಫಿ ಐಸ್ ಕ್ರೀಮ್ ತಿನ್ನಲು ಐಸ್ ಕ್ರೀಮ್ ತರುವ ಅಂಕಲಿನ ಸೈಕಲ್ ಹಿಂದೆ ಓದುತ್ತಿದ್ದೆವು; ಈಗ ಆ ಸಣ್ಣ ಹಳ್ಳಿಯಲ್ಲಿ ಎರಡು ಐಸ್ ಕ್ರೀಮ್ ಪಾರ್ಲರ್ ಗಳು ಬಂದಿವೆ.
ಹಾಗೆಯೇ, ಈಗ ಅಲ್ಲಿನವರು ಒಬ್ಬರಿಗೊಬ್ಬರು ನೋಡಿ ಕನಿಷ್ಠಮಟ್ಟಕ್ಕೆ ಮುಗುಳ್ನಗೆಯನ್ನಾದರೂ ಬೀರುತ್ತಿಲ್ಲ. ಎಲ್ಲರೂ ತಮ್ಮದೇ ಮಾಯಲೋಕದಲ್ಲಿ ಮಗ್ನರಾಗಿದ್ದಾರೆ. ಎಲ್ಲರು ತಮ್ಮ ಬದುಕುಗಳಲ್ಲಿ ಬಹಳಷ್ಟು ಸಾಧಿಸಿದ್ದಾರೆ; ಒಳ್ಳೊಳ್ಳೆ ಉದೋಗಗಳನ್ನು ಪಡೆದಿದ್ದರೆ. ಯಾಂತ್ರಿಕರಣದ ಬೆಳವಣಿಗೆಯ ರಭಸದಲ್ಲಿ ಯಾವಾಗ ನಾವೂ ಸಹ ರೋಬಾಟ್ ಗಳಾದವು ತಿಳಿಯಲೇ ಇಲ್ಲ. ಆ ಸಂಬಂಧಗಳು, ಆ ಪ್ರೀತಿ-ಸಹಬಾಳ್ವೆ ಈಗ ಕೇವಲ ನೆನಪು ಮಾತ್ರ ಆಗಿ ಉಳಿದಿದೆ. ಆಧುನಿಕತೆಗೆ ನುಚ್ಚು ನೂರಾಗಿರುವ ನನ್ನ ಹುಟ್ಟೂರಿನ ಸೌಂದರ್ಯವನ್ನು ನೋಡಿ ನನಗೆ ಬಹಳ ನೋವಾಯಿತು. ಸಂಜೆಯ ಬಸ್ಸು ಹತ್ತಿ ನೇರವಾಗಿ ಮಂಗಳೂರಿಗೆ ಮರಳಿದೆ.
ನಾಯಕವಾಡಿಯ ಈಗಿನ ಸ್ಥಿತಿ ನೋಡಿದಾಗ ನನಗೆ ಕವಿ ಸುದರ್ಶನ ಫಕೀರ್ ಅವರ ಸಾಲುಗಳು ನೆನಪಿಗೆ ಬಂದವು:
"ಏ ದೌಲತ್ ಭೀ ಲೇ ಲೋ... ಏ ಶೋಹರತ್ ಭೀ ಲೇ ಲೋ ...
ಭಲೇ ಛೀನ್ ಲೋ ಮುಜ್ ಸೆ ಮೇರಿ ಜವಾನಿ
ಮಗರ್, ಮುಜ್ ಕೋ ಲೌಟಾದೊ ಬಚ್ಪನ್ ಕಾ ಸಾವನ್,
ವೊ ಕಾಗಜ್ ಕಿ ಕಶ್ತಿ, ವೊ ಬಾರಿಶ್ ಕಾ ಪಾನಿ"
-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!