ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭಾರತದ ಪ್ರಥಮ ಖಗೋಳ ವೀಕ್ಷಣಾಲಯವಾದ ಆಸ್ಟ್ರೋ ಸ್ಯಾಟ್[Astro Sat], ಇತ್ತೀಚೆಗೆ ತನ್ನ ಕಾರ್ಯಾಚರಣೆಯ ಒಂದು ದಶಕವನ್ನು ಪೂರೈಸಿತು. 2015ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಆಸ್ಟ್ರೋ ಸ್ಯಾಟ್, ಕ್ಷ-ಕಿರಣ (ಎಕ್ಸ್-ರೇ), ಅಲ್ಟ್ರಾ-ವೈಲೆಟ್ ಮತ್ತು ಆಪ್ಟಿಕಲ್ ಸ್ಪೆಕ್ಟ್ರಲ್ ಪಟ್ಟಿಗಳ ನೆರವಿನಿಂದ ಖಗೋಳದ ಕುರಿತು ಅಧ್ಯಯನ ನಡೆಸಲು ಉಪಯುಕ್ತಕರವಾಗಿದೆ.

"ಕಕ್ಷೆಗೆ ಸೇರಿಸಿದ ಬಳಿಕ ಆಸ್ಟ್ರೋ ಸ್ಯಾಟಿನ ಎರಡು ಸೌರಫಲಕಗಳು ಒಂದರ ಹಿಂದೊಂದರಂತೆ ತ್ವರಿತವಾಗಿ ತಾವಾಗಿಯೇ ಬಿಚ್ಚಿಕೊಂಡವು. ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕಿನ (ISTRAC) ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್‌ ನಲ್ಲಿರುವ (MOX) ಬಾಹ್ಯಾಕಾಶ ನೌಕೆ ನಿಯಂತ್ರಣ ಕೇಂದ್ರವು ಉಪಗ್ರಹದ ಸಂಪೂರ್ಣ ಕಾರ್ಯಾವಧಿಯಲ್ಲಿ ಅದನ್ನು ನಿರ್ವಹಿಸುತ್ತದೆ. ಆಸ್ಟ್ರೋ ಸ್ಯಾಟಿನ ಐದು ಪೇಲೋಡ್‌ ಗಳು ಸಂಗ್ರಹಿಸುವ ವೈಜ್ಞಾನಿಕ ದತ್ತಾಂಶವನ್ನು ಮಾಕ್ಸ್‌ ನಲ್ಲಿರುವ ಭೂ ಕೇಂದ್ರಕ್ಕೆ ಟೆಲಿಮೆಟ್ರಿ ಮೂಲಕ ರವಾನಿಸಲಾಗುತ್ತದೆ. ಬಳಿಕ, ಬೆಂಗಳೂರು ಸಮೀಪದ ಬೈಲಾಳುವಿನಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರವು (ISSDC) ಆ ದತ್ತಾಂಶವನ್ನು ಸಂಸ್ಕರಿಸಿ, ಸಂಗ್ರಹಿಸಿ ಮತ್ತು ಅಧ್ಯಯನ ನಡೆಸುತ್ತದೆ" ಎಂದು ಇಸ್ರೋ ಹೇಳಿದೆ. 

ಉಡಾವಣೆಯ ಸಮಯದಲ್ಲಿ ಆಸ್ಟ್ರೋ ಸ್ಯಾಟಿನ ತೂಕ 1,515 ಕೆ.ಜಿ. ಇತ್ತು. ಬಾಹ್ಯಾಕಾಶ ವೀಕ್ಷಣೆಗೆ ಸ್ಪಷ್ಟತೆಯನ್ನು ತರುವ ಅದರ ಧ್ಯೇಯವು, ಅದ್ಭುತ ಪ್ರಕಾಶದಿಂದ ಹೊಳೆಯುತ್ತಿದ್ದ ಒಂದು ದೈತ್ಯ ಕೆಂಪು ನಕ್ಷತ್ರ [Giant Red Star]ಕ್ಕೆ ಸಂಬಂಧಿಸಿದ ಎರಡು ದಶಕ ಹಳೆಯ ರಹಸ್ಯವನ್ನು ಭೇದಿಸುವುದರೊಂದಿಗೆ ಪ್ರಾರಂಭಗೊಂಡಿತ್ತು. ಅಂದಿನಿಂದ ಅದರ ಅನೇಕ ಸಾಧನೆಗಳಲ್ಲಿ ಸುಮಾರು 900 ಕೋಟಿ ಬೆಳಕಿನ ವರ್ಷಗಳ ದೂರದಿಂದ ಬಂದ ಅಲ್ಟ್ರಾ-ವೈಲೆಟ್ ಫೋಟಾನ್‌ ಗಳ ಪತ್ತೆಯೂ ಸೇರಿದೆ. ಆಸ್ಟ್ರೋ ಸ್ಯಾಟ್ ನಕ್ಷತ್ರಪುಂಜಗಳು ವಿಲೀನಗೊಳ್ಳುವುದನ್ನು ಮತ್ತು ಕಪ್ಪುರಂಧ್ರಗಳು ಸುತ್ತುವುದನ್ನು ಕಂಡಿದೆ.

ಸರಳ ಭಾಷೆಯಲ್ಲಿ, ಆಸ್ಟ್ರೋ ಸ್ಯಾಟ್ ಬ್ರಹ್ಮಾಂಡದ ಪ್ರಾರಂಭದಿಂದ ವಿನಾಶದವರೆಗಿನ ಸಂಪೂರ್ಣ ವ್ಯಾಪ್ತಿಯನ್ನು ಸೆರೆ ಹಿಡಿದಿದೆ! ಇದೀಗ, ಅಮೆರಿಕ ಸೇರಿದಂತೆ 57ಕ್ಕೂ ಹೆಚ್ಚು ದೇಶಗಳು ಆಸ್ಟ್ರೋ ಸ್ಯಾಟಿನ ನೋಂದಾಯಿತ ಬಳಕೆದಾರರಾಗಿವೆ. ಅದರ ಸಂಶೋಧನಾ ಫಲಿತಾಂಶಗಳನ್ನು 132 ಭಾರತೀಯ ವಿಶ್ವವಿದ್ಯಾಲಯಗಳು ಬಳಸಿಕೊಂಡಿವೆ. ಆರಂಭಿಕ ಕಾರ್ಯಾಚರಣೆಯ ಮಿತಿ ಐದು ವರ್ಷಗಳಾಗಿದ್ದರೂ, ಆಸ್ಟ್ರೋ ಸ್ಯಾಟ್ ಮುಂದೆಯೂ ಕಾರ್ಯನಿರ್ವಹಿಸುವಷ್ಟು ಉತ್ತಮ ಸ್ಥಿತಿಯಲ್ಲಿದೆ.

ಚಿತ್ರದಲ್ಲಿ NGC 1365' ಹೆಸರಿನ ನಕ್ಷತ್ರಪುಂಜ

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.