ನಾವು ನಾವು ಎಂದುಕೊಂಡು
ಸೋಸಿ ಸೋಸಿ ಬದಿಗಿಡುವ
ನಮ್ಮೊಳಗಿನ ಕವಲುದಾರಿ
ಗಮ್ಯ ತಿಳಿಸಿತಚ್ಚರಿ
ಸ್ನೇಹ ಸ್ವಾರ್ಥ ಸೋಗಲಾಡಿ
ಮನಸುಗಳಲಿ ಮುಗುಳುನಗೆ
ಮೌನಿಯಾಗಿ ನಂಬಿದರೆ
ಉಳಿವಿರದು ಎಚ್ಚರ..
ಮೇಲು ಕೀಳು ಮೈಲಿಗೆಯು
ಮೇಳವನ್ನೇ ಹೂಡಿರಲು
ದ್ವೇಷವೆಂಬ ಚೆಂಡೆ ದನಿಗೆ
ರುಧಿರಕೋಟಿ ಕುದಿದಿದೆ..
ನಿನ್ನೆಯನ್ನು ಮರೆತು ಬಿಟ್ಟು
ನಾಳೆಯನ್ನು ಯೋಚಿಸದ
ಅಕ್ಷರಸ್ಥ ಹದ್ದುಗಳು
ಹಾರಿ ಹಾರಿ ನೆಗೆದಿದೆ..
ಅಲ್ಲಿಂದ ಇಲ್ಲಿಂದ
ಹೆಕ್ಕಿ ಹೆಕ್ಕಿ ಕೂಡಿ ತಂದ
ಏಕ ಮುಖ ವಿಷಯವನ್ನೇ
ಬಲವಾಗಿ ಹಿಡಿದಿದೆ..
ಬದಲಾಗದ ಬದುಕಿನಲ್ಲಿ
ಬದಲಾವಣೆ ಬಾಷೆ ಕೊಡದೆ
ಗೊಂಬೆಯಂತೆ ಆಡಬೇಕೆ
ಸತ್ವವಿರದ ಗೀತೆಗೆ?..
ಪ್ರಶ್ನೆ ಮಾಡೋ ಜಿಹ್ವೆಗಳಲಿ
ಜೈಕಾರವೇ ತುಂಬಿರಲು
ಜೀತತನವೇ ಗೆದ್ದಿತಲ್ಲ
ಅವರ ಸಂಚಿನಾಟಕೆ..
ಓ ಬನ್ನಿ ಯುವಕರೇ
ಭಾರತಾಂಬೆ ಅಳುತಿದೆ
ಅಂಗೈಗಳ ಅಂಕುರಿಸಿ
ಸಂತೈಸಬೇಕಿದೆ..
ಕೋಟಿ ಕಂಠ ಕೂಡಬೇಕು
ನ್ಯಾಯದ ಧ್ವನಿ ಮೊಳಗಬೇಕು
ರಣಕಹಳೆಯ ಕಿಚ್ಚಿನಂತೆ
ನಾಳೆಗಾಗಿ ಸೆಣೆಸಬೇಕು..
ಯುಗಕೂ ಜಗಕೂ ತಿಳಿಯುವಂತೆ
ಶಯನದಲೂ ಬೆಚ್ಚವಂತೆ
ಕ್ರಾಂತಿಯಾ ಹಣತೆಯನ್ನು
ನಾವೆಲ್ಲರೂ ಹಚ್ಚಬೇಕು..
-ಮೌನರಾಗ , ಸನಂ (ಶಮೀರ್ ನಂದಿಬೆಟ್ಟ..)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!