ಲಕ್ಷಾಂತರ ಜನರನ್ನು ಕೊಲ್ಲಿಸಲು ಅಡಾಲ್ಫ್ ಹಿಟ್ಲರನನ್ನು ಒಂದು ದೇಶದ ಅಧ್ಯಕ್ಷನನ್ನಾಗಿಸಿದ. ಈಗ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಂದು ದೇಶದ ಅಧ್ಯಕ್ಷನನ್ನಾಗಿಸಿದ್ದಾನೆ. ಲಕ್ಷಾಂತರ ಜನರನ್ನು ಹತ್ಯೆ ಮಾಡಿಸಲು ಇರಾನ್ ಇಸ್ರೇಲ್ ನಡುವೆ ಯುದ್ಧ ಮಾಡಿಸುತ್ತಿದ್ದಾನೆ. ಹಿರೋಷಿಮಾ ನಾಗಸಾಕಿ ಮೇಲೆ ಬಾಂಬ್ ಹಾಕಿಸಿ ಜಪಾನಿನ ಲಕ್ಷಾಂತರ ಜನರನ್ನು ಜೀವಂತ ಶವ ಮಾಡಿದ.  ಆಫ್ರಿಕಾದಲ್ಲಿ ಹಾರಾಡುತ್ತಿದ್ದ ವಿಮಾನವನ್ನೇ ನೆಲಕ್ಕೆ ಬೀಳಿಸಿ ನೂರಾರು ಜನರನ್ನು ಕೊಂದ. ಪುಲ್ವಾಮದಲ್ಲಿ ದೇಶ ರಕ್ಷಣೆ ಮಾಡುತ್ತಿದ್ದ 48 ಯೋಧರನ್ನು ಒಮ್ಮೆಗೇ ಸಾಯಿಸಿದ. ಮಂಡ್ಯದ ಬಳಿ ಪ್ರಯಾಣಿಕರ ಬಸ್ ಕೆರೆಗೆ ಬೀಳಿಸಿ ಒಂದಷ್ಟು ಜನರನ್ನು ಇಲ್ಲವಾಗಿಸಿದ. ಧಾರವಾಡದಲ್ಲಿ ಕಟ್ಟುತ್ತಿದ್ದ ಕಟ್ಟಡವನ್ನೇ ಕೆಡವಿ ಸುಮಾರು ಜನರನ್ನು ಕರೆದುಕೊಂಡು ಹೋದ. ದೇವರು ಎಷ್ಟೊಂದು ಒಳ್ಳೆಯವನಲ್ಲವೇ?

ಅನ್ನ ಬೆಳೆಯುವ ರೈತರನ್ನೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ. ಪುಟ್ಟ ಶಾಲಾ ಮಕ್ಕಳ ವ್ಯಾನನ್ನು ರೈಲಿಗೆ ಗುದ್ದಿಸಿ ಅವರ ಪ್ರಾಣವನ್ನೇ ತೆಗೆಯುತ್ತಾನೆ. ಎಷ್ಟೋ ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿಸಿ ಅವರನ್ನು ಕೊಲ್ಲಿಸುತ್ತಾನೆ. ಅದಕ್ಕಾಗಿಯೇ ಅಲ್ಲವೇ, ವಿಶ್ವದ ಎಲ್ಲಾ ಧರ್ಮಗಳ ಬಹುತೇಕ ಜನ ದೇವರನ್ನು ನಂಬಿ ಆರಾಧಿಸುವುದು‌. ಇಡೀ ಸೃಷ್ಟಿಯನ್ನು ನಿಯಂತ್ರಿಸುತ್ತಿರುವುದೇ ದೇವರಲ್ಲವೇ?

ಹುಟ್ಟಿಸುವವನೂ ಅವನೇ, ಸಾಯಿಸುವವನೂ ಅವನೇ, ವೃದ್ದಾಶ್ರಮಗಳನ್ನು ಹೆಚ್ಚಿಸುತ್ತಿರುವುದು ಅವನೇ, ಜೈಲುಗಳನ್ನು ತುಂಬಿಸುತ್ತಿರುವುದು ಅವನೇ, ಆಸ್ಪತ್ರೆಗಳನ್ನು ಬೆಳೆಸುತ್ತಿರುವುದು ಅವನೇ, ಭ್ರಷ್ಟರನ್ನು ಚುನಾಯಿಸುತ್ತಿರುವುದು ಅವನೇ, ಜನಸಂಖ್ಯೆಯನ್ನು ಮುಂದುವರಿಸುತ್ತಿರುವುದು ಅವನೇ… ಜಾತಿವಾದಿ, ಕೋಮುವಾದಿ, ಭ್ರಷ್ಟ, ವಂಚಕ, ಸಮಾಜ ದ್ರೋಹಿ ಮನೋಭಾವದವರನ್ನು ಎಂಎಲ್ಎ, ಎಂಪಿ, ಮಂತ್ರಿಯಾಗಿ ಮಾಡುತ್ತಿರುವುದು ಅವನೇ.

ದಗಾಕೋರರಿಂದ ಕಾಣಿಕೆ ಪಡೆದು ಅವರಿಂದಲೇ ಹೋಮ ಹವನ ಪೂಜೆ ಮಾಡಿಸಿಕೊಳ್ಳುತ್ತಿರುವವನು ಅವನೇ, ಮಂದಿರ, ಮಸೀದಿ, ಚರ್ಚುಗಳ ಮುಂದೆ ಹಸಿದವರನ್ನು ಭಿಕ್ಷೆಗೆ ದೂಡಿ ಗಹಗಹಿಸಿ ನಗುತ್ತಿರುವವನು ಅವನೇ, ಮಾನವೀಯ ಮನಸ್ಸುಗಳಿಗೆ, ಅವರ ಒಳ್ಳೆಯ ಗುಣಗಳಿಗೆ ಅಪಾರ ನೋವು ಕೊಡುತ್ತಿರುವವನು ಅವನೇ., ಆದರೂ ಪ್ರತಿ ಕ್ಷಣ ವಿಶ್ವದ ಎಲ್ಲಾ ಕಡೆ, ಎಲ್ಲಾ ಸಂಧರ್ಭಗಳಲ್ಲೂ, ಬೇರೆ ಬೇರೆ ಹೆಸರುಗಳಿಂದ  ‌ವಿವಿಧ ರೀತಿಯಲ್ಲಿ ಅಗ್ರ ಪೂಜೆ ಮಾಡಿಸಿ ಜನರಿಂದ ಮೆರೆಯುತ್ತಿರುವವನು ಅವನೇ. ಹಿಂದೂ, ಮುಸ್ಲಿಂ , ಕ್ರಿಶ್ಚಿಯನ್ನರು ಸೇರಿದಂತೆ ಬಹುತೇಕ ಧರ್ಮಗಳಲ್ಲಿ ಅಗ್ರಗಣ್ಯ ಅವನೇ. ಅಯ್ಯಾ ದೇವರೇ, ಏನಯ್ಯ ನಿನ್ನ ಲೀಲೆ. ಎಂದೂ, ಎಲ್ಲಿಯೂ ಕಾಣಿಸಿಕೊಳ್ಳದ ನೀನು, ಜನರ ಹೃದಯದಲ್ಲಿ ನೆಲೆಸಿ ಇಡೀ ಸೃಷ್ಟಿಯ ಅಧಿಪತಿ ಎಂದು ಬಿಂಬಿಸಿಕೊಳ್ಳುತ್ತಿರುವೆ.

ಕಾಲ್ಪನಿಕ ವ್ಯಕ್ತಿಯೊಬ್ಬ ಒಂದು ಶಕ್ತಿಯಾಗಿ ಮಾನವ ಕುಲವನ್ನು ನಿಯಂತ್ರಿಸುತ್ತಿರುವುದು ಮನುಷ್ಯನ ವಿವೇಚನಾ ಶಕ್ತಿಯನ್ನೇ ಪ್ರಶ್ನಿಸುವಂತೆ ಮಾಡಿದೆ. ಅಂತಹ ದೈತ್ಯ ಶಕ್ತಿಯ ಮುಂದೆ, ನಮ್ಮಂತ ಹುಲುಮಾನವನ ಅಭಿಪ್ರಾಯ ಯಾವ ಲೆಕ್ಕ? ಗಾಳಿ ಬಂದ ಕಡೆ ತೂರಿಕೊಂಡು ಅದರೊಂದಿಗೆ ಬದುಕುವವನೇ ಜಾಣ ಎಂಬ ವ್ಯವಸ್ಥೆಯಲ್ಲಿ ಸತ್ಯದಹುಡುಕಾಟವೇ ಒಂದು ಹುಚ್ಚುತನ. ಆದರೂ ಪ್ರಯತ್ನ ಮಾತ್ರ ನಿಲ್ಲಬಾರದು.

ನಿಜವಾಗಲೂ ಈ ಕ್ಷಣದ ದೇವರುಗಳು ಮತ್ತು ವಿಶ್ವವನ್ನು ಶಾಂತಿ ನೆಲೆಸುವಂತೆ ಮಾಡುವವ ಶಕ್ತಿ ಇರುವವರು ಯಾರು ಗೊತ್ತೆ ?,

ಅಮೆರಿಕಾ ಅಧ್ಯಕ್ಷ  ಡೊನಾಲ್ಡ್ ಟ್ರಂಪ್,

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್,

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್,

ಭಾರತದ ಪ್ರಧಾನಿ ನರೇಂದ್ರ ಮೋದಿ,

ಪಾಕಿಸ್ತಾನದ ಪ್ರಧಾನಿ,

ಇಂಗ್ಲೆಂಡಿನ ಪ್ರಧಾನಿ, 

ಹಾಗು ಇಸ್ರೇಲ್, ಫ್ರಾನ್ಸ್,  ಇರಾನ್,ಜರ್ಮನಿ, ಕೊರಿಯಾ, ಜಪಾನ್‌, ಆಸ್ಟ್ರೇಲಿಯಾ ಮುಂತಾದ ವಿಶ್ವದ ಕನಿಷ್ಠ 100 ಪ್ರಬಲ ರಾಷ್ಟ್ರಗಳ ಮುಖ್ಯಸ್ಥರು, ವಿಶ್ವದಲ್ಲಿ ಶಾಂತಿಯುತ ಸಹಭಾಳ್ವೆ ನಡೆಸಲು ಸಾಧ್ಯ ಮಾಡಬಹುದಾದ ಧರ್ಮಗಳೆಂದರೆ ಆಯಾ ದೇಶಗಳ ಸಂವಿಧಾನಗಳು, ಅಂದರೆ ನಿಜವಾದ ದೇವರುಗಳು ಮತ್ತು ಧರ್ಮ ಆಯಾ ದೇಶದ ಮುಖ್ಯಸ್ಥರು ಮತ್ತು ಸಂವಿಧಾನ, ಬಹುಶಃ ಇಂದಿನ ವಾಸ್ತವ ಇದೇ, ಉಳಿದದ್ದು ಭ್ರಮೆ ಮತ್ತು ನಂಬಿಕೆ‌ ಮಾತ್ರ,

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ