ಗ್ರೀಸ್ ದೇಶದ ಮಹಾಜ್ಞಾನಿ ಸಾಕ್ರೆಟಿಸ್.  ಪ್ರತಿನಿತ್ಯ ಆತನಾಡುತ್ತಿದ್ದ ಅನುಭವದ ನುಡಿಗಳನ್ನು ಕೇಳಲು ಆ  ದೇಶದ ಯುವಕರೆಲ್ಲರು ತಮಗೆ ಇರುವ ಕೆಲಸವನ್ನು ಬಿಟ್ಟು ಈತನೆಡೆಗೆ ಬರುತ್ತಿದ್ದರು. ಇದರಿಂದ ಗ್ರೀಸ್ ದೇಶದ ಹಲವು ವಿಚಾರವಂತರಿಗೆ ಅಸಮಾಧಾನವಿತ್ತು. ಸಾಕ್ರೆಟಿಸ್ ತಮ್ಮ ಮಕ್ಕಳಿಗೆ ದಾರಿ ತಪ್ಪಿಸುತ್ತಿದ್ದಾನೆಂದು ಆ ದೇಶದ ಜನರು ರಾಜನಿಗೆ ದೂರು ಸಲ್ಲಿಸಿದರು. ವಿಚಾರಣೆ ನಡೆಸಲಾಯಿತು. ಸಾಕ್ರೆಟಿಸ್ ಈ ಮಾತನ್ನು ಸುತರಾಂ ಒಪ್ಪಲಿಲ್ಲ, ಪರಿಣಾಮವಾಗಿ ರಾಜ ಸಾಕ್ರೆಟೀಸನಿಗೆ ಮರಣ ದಂಡನೆ ವಿಧಿಸಿದ. 

ಒಂದು ತಿಂಗಳ ಮುಂಚಿತವಾಗಿಯೇ ಸಾಕ್ರೆಟೀಸನನ್ನು ಜೈಲಿನಲ್ಲಿ ಇಡಲಾಯಿತು. ಆದರೆ, ಸಾಕ್ರೆಟೀಸನಲ್ಲಿ  ಉತ್ಸಾಹಕ್ಕೇನೂ ಕೊರತೆ ಇರಲಿಲ್ಲ. ತನಗೇನೂ ಆಗೇ ಇಲ್ಲಾ ಎನ್ನುವಂತೆ ಉತ್ಸಾಹಪೂರ್ಣನಾಗಿಯೇ ದಿನವಿಡಿ  ಇರುತ್ತಿದ್ದ. ಅಂತಿಮವಾಗಿ ಒಂದು ದಿನ ಸಾಕ್ರೆಟೀಸನಿಗೆ ' ಹೆಮ್ಲಾಕ್ '  ಎಂಬ ಘೋರವಾದ ವಿಷವನ್ನು ನೀಡಿ ಅದನ್ನು ಕುಡಿಯುವಂತೆ ಆದೇಶಿಸಲಾಯಿತು. ಸಾಕ್ರೆಟಿಸ್ ಅತ್ಯಂತ ಪ್ರಸನ್ನನಾಗಿ ಹಾಲು ಕುಡಿದಂತೆ ಈ ವಿಷವನ್ನು ಕುಡಿದುಬಿಟ್ಟ. ಆತನ ಹತ್ತಿರದಲ್ಲಿಯೇ ಇದ್ದ ಶಿಷ್ಯನೊಬ್ಬ ಸಾಕ್ರೆಟಿಸ್ ನನ್ನು ಕೇಳಿದ, " ನೀವು ವಿಷವನ್ನೇ ಹಾಲು ಕುಡಿದಂತೆ ಕುಡಿದಿರಿ. ಈಗ ನಿಮಗೆ ಭಯವಾಗುತ್ತಿಲ್ಲವೇ?" ಸಾಕ್ರೆಟಿಸ್ ನಗುತ್ತಾ ನಿಷ್ಚಿಂತನಾಗಿ ಹೇಳಿದ," ಭಯ! ಏತಕ್ಕೆ? ಈ ವಿಷವು ನನ್ನ ದೇಹವನ್ನು ಕೊಲ್ಲುತ್ತದೆಯೇ ವಿನಃ, ನನ್ನ ಆತ್ಮವನ್ನಲ್ಲ."  

ವಿಷ ಕುಡಿದ ಸಾಕ್ರೆಟೀಸನಿಗೆ ಅತ್ತ ಇತ್ತ ತಿರುಗಾಡಲು ಅಧಿಕಾರಿಗಳು ಹೇಳಿದರು. ಸಾಕ್ರೆಟಿಸ್  ತಿರುಗಾಡುತ್ತಿರುವಂತೆ ಅವನ ಕೈಕಾಲುಗಳು ಭಾರವಾದಂತೆ, ಅಧಿಕಾರಿಗಳು ಆತನಿಗೆ ಮಲಗಲು ಹೇಳಿದರು.  ಸ್ವಲ್ಪ ಸಮಯದ ನಂತರ ಕ್ರಮೇಣ ವಿಷವು ಎದೆಯ ಭಾಗಕ್ಕೆ ಬರುವಂತಾದಾಗ ಸಾಕ್ರೆಟೀಸನ ಧ್ವನಿಯು ಸಣ್ಣದಾಗುತ್ತಾ ಬಂತು.  ಆಗ, " ವಿಷವು ನನ್ನ ಕಾಲಿಗೆ, ಕೈಗೆ, ಕುತ್ತಿಗೆಗೆ ಬಂದಿದೆ. ಈಗ ಇದು ನನಗೆ ತಿಳಿಯುತ್ತಿದೆ. ಇದರಿಂದ ನನಗೆ ತಿಳಿಯುತ್ತಿರುವುದು ಏನೆಂದರೆ "ಈ ದೇಹವೇ ಬೇರೆ, ನಾನೇ ಬೇರೆ. ಈ ವಿಷವು ನನ್ನ ದೇಹವನ್ನು ಕೊಲ್ಲುತ್ತದೆಯೇ ವಿನಃ ನನ್ನ ಆತ್ಮವನ್ನು ಕೊಲ್ಲುವುದಿಲ್ಲ. ನಾನು ಅಮರ.  ನಾನು ಅದ್ವಿತೀಯ"  ಎಂದು ಎಂದು ಹೇಳುತ್ತಾ ನಿಧಾನವಾಗಿ ಪ್ರಾಣವನ್ನು ಬಿಟ್ಟ. ಸಾಕ್ರೆಟಿಸನಿಗೆ ನಮ್ಮ ಉಪನಿಷತ್ತುಗಳಲ್ಲಿ ತಿಳಿಸಿರುವ ವಿಷಯದ ಪರಿಚಯ ಇದ್ದಂತೆ ವರ್ತಿಸಿದ್ದಾನೆ. ಉಪನಿಷತ್ತು ಹೇಳಿರುವಂತೆ ಬದುಕಿ ಬಾಳಿದವನು. ಉಪನಿಷತ್ತು ಹೇಳಿರುವಂತೆ ಬದುಕಿದ್ದಾಗಲಿಂದ ಮತ್ತು ಸಾಯುವತನಕ ನಸು ನಗುತ್ತಾ ಬದುಕಿನ ಎಲ್ಲ ಮಜಲುಗಳನ್ನು ಅನುಭವಿಸುತ್ತಾ ದೇಹಭಾವದಲ್ಲಿದ್ದ ಆತ್ಮಜ್ಞಾನಿ.     

-ಪ್ರಕಾಶ್ ಹೆಚ್ ಏನ್