ಗುರುವಿನ ಆಶೀರ್ವಾದವೆಂದರೆ, ಗುರುವಿನ ಸಾನಿಧ್ಯದಲ್ಲಿ ನಮ್ಮ ವರ್ತಮಾನ ಮತ್ತು ಭವಿಷ್ಯಗಳ ಮಿಲನ.  ಗುರುವಿನ ಸೇವೆಯಲ್ಲಿ  ನಿರತನಾಗಿ, ಗುರುವಿಗೆ ಸಂಪೂರ್ಣವಾಗಿ ಶರಣಾಗತನಾದಲ್ಲಿ ಗುರುವಿನ ಆಶೀರ್ವಾದವು ನಮ್ಮನ್ನು ಊರ್ಧ್ವಗತಿಗೆ ಕರೆದೊಯ್ಯುವ ಪ್ರಮುಖ ಸಾಧನವಾಗುತ್ತದೆ. ಭವಿಷ್ಯ ನಮ್ಮದಾದರೂ, ಈ ಭವಿಷ್ಯ ವರ್ತಮಾನದ  ಮೂಲಕ ಸರಿಯಾಗಿ ಹರಿದುಹೋಗುವಂತೆ ಮಾಡಬಲ್ಲ ದಿವ್ಯ ಚೈತನ್ಯವೇ ಗುರುವಿನ ಕೃಪೆ. 

ಗುರುವು ನಮಗೆ ಏನನ್ನೂ ಕೊಡುವುದಿಲ್ಲ. ಏನನ್ನು ಮಾಡುವುದು ಇಲ್ಲ. ಆತನ ಇರುವಿಕೆಯೇ ನಮಗೆ ಸಾಕು. ಅದರಲ್ಲೇ ಎಲ್ಲವೂ ಅಡಗಿದೆ. ಒಂದು ಹೂವು ತನ್ನಷ್ಟಕ್ಕೆ ತಾನೇ ಸುಗಂಧವನ್ನು ಬೀರುವ ಹಾಗೇ, ಯಾರು ಗಮನ ನೀಡಲಿ ಅಥವಾ ನೀಡದಿರಲಿ, ಪರರಿಗೆ ಬೇಕಿರಲಿ ಅಥವಾ ಬೇಡದಿರಲಿ ಹೂವು ಮಾತ್ರ ಗಾಳಿಯೊಂದಿಗೆ ಬೆರೆತು ಸುಗಂಧವನ್ನು ಪಸರಿಸುತ್ತಾ ಹೋಗುವುದು. ಸುಗಂಧವನ್ನು ಹೀರಿದವರಿಗೆ ಒಂದು ರೀತಿಯ ಹಿತಾನುಭವದ ಸಂತೃಪ್ತಿ. ಇಂತಹ ಸಂತೃಪ್ತಿಯ ಹಿತಾನುಭವವೆ ಗುರುವಿನ ಸಾನಿಧ್ಯದ ಆಶೀರ್ವಾದ. ಇದೆ ಗುರುವಿನ ದಿವ್ಯ ಪ್ರಸಾದ. 

ಈ ಸುಗಂಧ ಪಡೆಯಲು ಗಿಡ ಅದೆಷ್ಟು ಕಾಲ ಸವೆಸಿದೆ?  ಅದೆಷ್ಟು ಕಷ್ಟಗಳನ್ನು ಅನುಭವಿಸಿದೆ? ಅದೆಷ್ಟು ಕಾಲ ಮಣ್ಣುಗಳನ್ನು ಬೇಧಿಸಿಕೂಂಡು ಹೊರಬಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಲವು ಹದಿನೆಂಟು ಕಷ್ಟನ್ನು ಎದುರಿಸಿ ದೃಢವಾಗಿ ನಿಂತು ಗಿಡವಾಗಿ, ಮರವಾಗಿ, ಹೂವಾಗಿ ತನ್ನೊಳಗೆ ಸೂಸುವ  ಸುಗಂಧವನ್ನು ತನಗಾಗಿ ಅಲ್ಲದೆ ಇತರರಿಗಾಗಿ ತನ್ನ  ಗಂಧದ   ಹಿತಾನುಭವ ನೀಡುತ್ತಿದೆ. ಈ ಸುಗಂಧ, ಹೂವೊಳಗೆ ಕೆಲವೇ ಸಮಯ ಇದ್ದರೂ, ಬದುಕು ಸಾರ್ಥಕ ಮಾಡಿಕೊಂಡ ಸಂತೃಪ್ತ ಭಾವ ಆ ಹೂವಿನದು. ಬೀಜ ಮೊಳೆತು  ಸಸಿಯಾಗಿ, ಸಸಿಯಿಂದ ಗಿಡವಾಗಿ,  ಗಿಡವೇ ಹೆಮ್ಮರವಾಗಿ, ತನ್ನೆಡೆಗೆ ಬರುವ ಎಲ್ಲರಿಗೂ ಬೇಧವೆಣಿಸದೇ ನೆರಳು, ಸುಗಂಧ  ನೀಡುವಂತಹ ಮರದಂತೆ,  ಸ್ವಾರ್ಥರಹಿತ ಸೇವೆಯಲ್ಲೇ ಮುಳುಗಿ  ಆನಂದ ಕಾಣುವ ದಿವ್ಯ ಚೈತನ್ಯವೇ ಸದ್ಗುರು. 

ನಮ್ಮ ನಮ್ಮ ಯೋಗ್ಯತಾನುಸಾರ ಗುರು ದೊರೆಯಬಲ್ಲ. ನಾವು ಬಲಿತಂತೆ, ಗುರು ನಮ್ಮನ್ನು ತಿದ್ದಬಲ್ಲ. ನಾವು ಬೇಡಿದ್ದನ್ನು ನಿರ್ವಚನೆಯಿಂದ ನೀಡಬಲ್ಲ. ಬೇಡುವ ಮನಸ್ಸು, ಕಲಿಯುವ ಹಂಬಲ, ಸಾಧಿಸುವ ಛಲ ಎಲ್ಲವೂ ಸಮ್ಮಿಳತವಾಗಿ ಸಂಪೂರ್ಣವಾದರೆ  ಗುರು ಸಕಲವನ್ನೂ ಶಿಷ್ಯರ  ಉದ್ಧಾರಕ್ಕಾಗಿ ಧಾರೆ ಎರೆಯಬಲ್ಲ. ಇಂತಹ ಸದ್ಗುರುವಿನ ಕೃಪೆಯಾಗಲೆಂಬ ಪ್ರಾರ್ಥನೆ  ದಿನನಿತ್ಯವೂ ನಮ್ಮದಾಗಲಿ. 

-ಪ್ರಕಾಶ್ ಹೆಚ್ ಎನ್