ಟಾಮ್ ಡೆವಾನ್ ಪೋರ್ಟ್ ಮತ್ತು ಸೀನ್ ಸ್ವಾರ್ನೆರ್ ಈ ಇಬ್ಬರು ಗೆಳೆಯರು ಸಾಹಸಿಗಳು. ಆದರೆ, ಈ ಇಬ್ಬರೂ ಸಾಹಸಿಗಳು ಕಾನ್ಸರ್ ಪೀಡಿತರಾದವರು. ಈ ಇಬ್ಬರಿಗೂ ತಮ್ಮ ಕಾಯಿಲೆಯ ಬಗ್ಗೆ ಸಂಪೂರ್ಣ ಅರಿವು ಇತ್ತು. ಇವರಿಗೆ ತಮ್ಮ ಖಾಯಿಲೆಗಿಂತ ಹೆಚ್ಚಾಗಿ ಏನಾದರೊಂದು ಗುರಿಸಾಧನೆ ಮಾಡುವ ಬಗ್ಗೆ ಹೆಚ್ಚು ಆಸ್ಥೆ ಇತ್ತು. ಯಾವತ್ತೋ ಒಂದು ದಿನ ಸಾವು ಬರುತ್ತದೆ, ಸಾಯುವುದರೊಳಗಾಗಿ ತಮ್ಮ ಗುರಿಯನ್ನು ಮುಟ್ಟಲೇ ಬೇಕೆಂಬ ಛಲ ಇತ್ತು, ಹೀಗಾಗಿ ತಮ್ಮ ಜೀವನವನ್ನೇ ಒತ್ತೆಯಿಟ್ಟು ಒಂದು ದಿನ ತಮ್ಮ ಗುರಿಸಾಧನೆಯತ್ತ ಮುಖ ಮಾಡಿದರು, ಹಾಗೆಂದು ಬದುಕುವ ಆಸೆ ಬಿಟ್ಟವರಲ್ಲ.
ಸಾವಿನ ಬಾಗಿಲನ್ನು ಇನ್ನೇನು ತಟ್ಟುವವರಿದ್ದೇವೆಂದು ತಿಳಿದಿದ್ದರೂ ಸಹಾ ಟಾಮ್ ೧೨೦೦ ಕಿ ಮೀ ದೂರದ ಟ್ರಕ್ಕಿಂಗ್ ಮಾಡಿ, ೫೩ ದಿನಗಳ ಕಾಲ ದಕ್ಷಿಣದ್ರುವದ ಉಸಿರುಕಟ್ಟುವ ವಾತಾವರಣದಲ್ಲಿ ಬದುಕನ್ನು ಸವೆಸಿದ. ಇವನ ಉತ್ಸಾಹ ಇಲ್ಲಿಗೆ ನಿಲ್ಲಲಿಲ್ಲ. ಆ ಸುಂದರ ತೀರದ ಪ್ರದೇಶದಲ್ಲಿ ನಿಂತು ಗಾಳಿಪಟವನ್ನು ಸಂಭ್ರಮದಿಂದ ಹಾರಿಸುತ್ತ ಆನಂದದಲ್ಲಿ ಕಾಲ ಕಳೆದಂತಹ ಟಾಮ್ ಹೇಳುತ್ತಾನೆ, " ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಇರಬೇಕು. ರಿಸ್ಕ್ ತೆಗೆದುಕೊಳ್ಳಲು ನಾವೇನಾದರೂ ಅಶಕ್ತರಾದರೆ ಬದುಕಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ."
ಸೀನ್ ಸ್ವಾರ್ನೆರ್ ಎವರೆಸ್ಟ್ ಪರ್ವತದ ಜೊತೆಗೆ ಅದೆಷ್ಟೋ ಪರ್ವತಗಳನ್ನು ಅದೆಷ್ಟೋ ಬಾರಿ ಹತ್ತಿ ಇಳಿದಿದ್ದಾನೆ. ಅವನು ತನ್ನ ಅನುಭವದಲ್ಲಿ ಹೇಳುತ್ತಾನೆ " ಮುಂದೆ ಎಂದೋ ಸಂಭವಿಸುವ ಸಾವಿಗೆ ಅಂಜಿ, ಜೋಲುಮೋರೆ ಹಾಕಿಕೊಂಡು ಇಂದು ಯಾಕೆ ಸುಮ್ಮನೆ ಕೂಡುಬೇಕು? ಇದರ ಬದಲು ಜೀವನದಲ್ಲಿ ಹೊಸತು ಏನನ್ನಾದರೂ ಸಾಧಿಸುವ ಛಲಹೊಂದ ಬೇಕು. ನಾವು ಕಳೆಯುವ ಪ್ರತಿ ಕ್ಷಣದಲ್ಲಿ ಹೊಸತುಗಳ ನಿರೀಕ್ಷೆಯಲ್ಲಿರಬೇಕು. ಅದೇ ನಿಜದಲ್ಲಿ ಸುಂದರವಾದ ಜೀವನ. "
ಹೌದು. ಈ ಇಬ್ಬರೂ ಸಾಧಕರು ತೋರಿಸಿದ ಧೈರ್ಯ ಮತ್ತು ಸಾಹಸ ನಮ್ಮೊಳಗೂ ಮನೆಮಾಡಿದರೆ, ಉತ್ಸಾಹದ ಜೊತೆಗೆ ಧೈರ್ಯವೂ ಬರುತ್ತದೆ. ಆಗ ಎಂದೋ ಬರುವ ಸಾವಿಗೆ ಅಂಜಿ ಕೂರಬೇಕಾದ ಪ್ರಮೇಯವಿರುವುದಿಲ್ಲ.
ಪ್ರಕಾಶ್ ಹೆಚ್ ಎನ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!