ಆನಂದ, ಇದು ಅಂತರಾತ್ಮನಲ್ಲಿ ಸದಾಕಾಲ ಪ್ರಜ್ವಲಿಸುತ್ತಿರುವ ಒಂದು ಆಧ್ಯಾತ್ಮಿಕ ಸ್ಥಿತಿ. ಈ ಆನಂದವನ್ನು ಯಾವುದೇ ಬಾಹ್ಯ ಸುಖದ ವಸ್ತುಗಳನ್ನು ಹೊಂದುವುದರ ಮೂಲಕವಾಗಲಿ ಅಥವಾ ಹೊಸತರ ಅನ್ವೇಷಣೆಯಲ್ಲಾಗಲಿ ಆನಂದ ಸಿಗುವುದಿಲ್ಲ. ಸತ್ಯವಾದ ವಿಚಾರವೆಂದರೆ, ನಮಗೆ ಯಾವ ಬಾಹ್ಯ ವಸ್ತುವೂ ಆನಂದದ ಅನುಭವವನ್ನು ನೀಡಲು ಸಾಧ್ಯವಿಲ್ಲ. ಅನೇಕ ಬಾರಿ ನಾವು ಬಹಳ ಅಪೇಕ್ಷೆ ಪಟ್ಟಿದ್ದು ನಮಗೆ ಸಿಕ್ಕಾಗ, ಅದರಿಂದ ಸಿಗುವ ಆನಂದದಿಂದ ನಮಗೆ ಹಿತವೆನಿಸಬಹುದು: ಆಗ ನಮ್ಮ ಮನಸ್ಸಿಗೆ ಉಲ್ಲಾಸವೆನಿಸಲೂಬಹುದು; ನಾವು ಉತ್ಸಾಹಿಗಳೂ ಆಗಬಹುದು; ಆದರೆ, ಈ ಎಲ್ಲಾ ಭಾವನೆಗಳೂ ಕೇವಲ ತಾತ್ಕಾಲಿಕವೇ ! ಈ ಎಲ್ಲಾ ಭಾವನೆಗಳನ್ನು ಸಮ್ಮಿಶ್ರಮಾಡಿ ಅದಕ್ಕೆ' ಆನಂದ ' ಎಂದು ಹೆಸರು ಕೊಟ್ಟ ಮಾತ್ರಕ್ಕೆ ಅದು ನಿಜವಾದ ಅರ್ಥದಲ್ಲಿ ಆನಂದವಾಗುವುದಿಲ್ಲ. ನಾವು ಬಾಹ್ಯದಲ್ಲಿ ಪಡೆದ ವಸ್ತುಗಳಿಂದ   ನಮಗೆ ಯಾವಾಗಲೂ ಆನಂದ ನೀಡುತ್ತೆಂಬ ಖಾತ್ರಿ ಯಾವುದರಲ್ಲೂ ಇಲ್ಲ. ಏಕೆಂದರೆ, ಅನ್ಯರಲ್ಲಿರುವ ವಸ್ತು ನಮ್ಮಲ್ಲಿರುವುದಕ್ಕಿಂತ ಹೆಚ್ಚಿನ ಗುಣಮಟ್ಟದ್ದೋ, ಆಕರ್ಷಿತವೋ ಆಗಿಬಿಟ್ಟರೆ ಸಾಕು, ಆಗ ನಮ್ಮ ಮುಖ ಆ ಕಡೆಗೆ ಖಂಡಿತವಾಗಿ ತಿರುಗುತ್ತದೆ. ಆ ಸಂದರ್ಭದಲ್ಲಿ ನಮ್ಮ ಆನಂದದ ಮೂಲವೇ ಬದಲಾಗಿ ಬಿಡುತ್ತದೆ. 

ಮಹಾ ನಾರಾಯಣಯೋಪನಿಷತ್ ಹೀಗೆ ಹೇಳುತ್ತದೆ . " ನ ಕರ್ಮಣಾ ನ ಪ್ರಜಾಯಾ ಧನೇನ ತ್ಯಾಗೇ ನೈಕೇ ಅಮೃತತ್ವ ಮಾನಷುಹು " ಕರ್ಮದಿಂದಲ್ಲ, ಸಂತತಿಯಿಂದಲ್ಲ, ಸಂಪತ್ತಿನಿಂದಲ್ಲ-- ತ್ಯಾಗದಿಂದಲೇ ಅಮೃತತ್ವವನ್ನು ಹೊಂದಿದರು.   ಇಲ್ಲಿ ತ್ಯಾಗ ಎಂದರೆ ಕೇವಲ ಮನೆ, ಮಠ , ಹಣ ಅಥವಾ ಆಸ್ತಿಯನ್ನು ಬಿಟ್ಟುಬಿಡುವುದು ಮಾತ್ರವಲ್ಲ, ಮುಖ್ಯವಾಗಿ ಅಹಂಕಾರ, ಕತೃತ್ವಭಾವ ಮತ್ತು ಫಲಾಪೇಕ್ಷೆಯನ್ನು ತ್ಯಜಿಸುವುದು ಎಂಬ ಆಳವಾದ ವೇದಾಂತಾರ್ಥವಿದೆ. 

ಸಾಧು ವಾಸ್ವಾನಿಯವರು ಇದನ್ನು ಹೀಗೆ ಹೇಳುತ್ತಾರೆ--"ಜೀವನ ಪೂರ್ತಿ ಆನಂದದಿಂದ ಇರಬೇಕಾದರೆ, ತ್ಯಾಗ ಮಾಡುವುದರಿಂದ ಮಾತ್ರ ಸಾಧ್ಯ." ಆನಂದವನ್ನು ನಾವು ಬಾಹ್ಯವಾಗಿ ಪಡೆದುಕೊಳ್ಳಲು ಯಾವುದರಿಂದಲೂ ಸಾಧ್ಯವಿಲ್ಲ.  ಏಕೆಂದರೆ ಅದು ಈಗಾಗಲೇ ನಮ್ಮೊಳಗೇ ಇದೆ. ಅದನ್ನು ಅನುಭವಿಸಬೇಕು ಅಷ್ಟೇ! ಈ ಆನಂದವನ್ನು ಅನುಭವಿಸಲು ನಮ್ಮೊಳಗೇ ಆಗಬೇಕಾದ ಬದಲಾವಣೆಗಳೇ ಬಹಳ ಮುಖ್ಯ. ಆನಂದ, ಅಪೂರ್ವವಾದ ಒಂದು ಆಧ್ಯಾತ್ಮಿಕ ಸ್ಥಿತಿ.     ಆಧ್ಯಾತ್ಮಿಕವಾಗಿ ನಾವು ನಮ್ಮೊಳಗೇ ಇಳಿದಾಗ ನಮಗೆ ಸಿಗುವ ಪರಮಾನಂದದ ಅನುಭವವೇ ಆನಂದ. ಇದಕ್ಕೆ ಯಾವ ಬಾಹ್ಯ ಕಾರಣಗಳೂ ಬೇಡ. ನಮ್ಮೊಳಗೆ ಈ ಆನಂದದ ಸ್ಥಿತಿಯನ್ನು ಹೊಂದಲು ನಮ್ಮ ವ್ಯಕ್ತಿತ್ತ್ವದಲ್ಲಿ ನೋಡುವ ದೃಷ್ಟಿ ಬದಲಾವಣೆಯಾದರೆ ಸಾಕು. ನಮ್ಮ ದಿನನಿತ್ಯದ ಬದುಕಿನಲ್ಲಿ ಸ್ವಲ್ಪ ಸ್ವಲ್ಪ ವ್ಯಕ್ತಿತ್ತ್ವದಲ್ಲಿ ಹೊಂದಾಣಿಕೆಯ ಬದಲಾವಣೆ  ಸಾಕು. ಆಗ ನಮ್ಮ ಆನಂದದ ಸ್ಥಿತಿಯ ಗತಿಯೇ ಬದಲಾಗಿಬಿಡುತ್ತದೆ.  ಪ್ರಜ್ಞಾ ಪೂರ್ವಕವಾಗಿ ಹೆಚ್ಚು ಹೆಚ್ಚು ಈ ದಿಕ್ಕಿನಲ್ಲಿ  ನಾವು ಸಕ್ರಿಯವಾದ ಹಾಗೆ, ನಮ್ಮೊಳಗಿನ ಆನಂದದ ಅನುಭವವೂ ಹೆಚ್ಚುತ್ತಾ ಸಾಗುತ್ತದೆ. ಮುಖ್ಯವಾಗಿ ಬೇಕಾಗಿರುವುದು  ನಮ್ಮೊಳಗಿನ ಹೃದಯವಂತಿಕೆ ಮತ್ತು ಹೃದಯ ವೈಶಾಲ್ಯತೆ. ಯಾವಾಗ ನಮ್ಮ ಹೃದಯದ ಬಾಗಿಲು ತೆರೆಯುತ್ತದೋ,   ಆಗಲೇ ಆನಂದದ ಬಾಗಿಲು ತನಗೆ ತಾನೇ ತೆರೆದುಕೊಳ್ಳುತ್ತದೆ. ಏನಂತೀರಿ? 

-ಪ್ರಕಾಶ್ ಹೆಚ್ ಎನ್