​ಬಿಸಿಲ ಶಲಾಕೆ

ಇಳಿದು ಚುಚ್ಚಿದೆ

ಹೃದಯದಟ್ಟದ ಆಳಕೆ;

ಬತ್ತಿಸಿ ಪ್ರಾಣದ ಒರತೆಯ

ಉಳಿದಿದೆ— ಇಂಗದ ಬಾಯಾರಿಕೆ.

​ಅರಿಯದ ನೋವು

ಅಸ್ಥಿ-ಮಾಂಸವ ಕೊರೆಯಲು;

ಬೆವರಿನ ನದಿಯಲಿ

ಹುಡುಕುವ ಹಾದಿಯೇ

ಬಸವಳಿದ ಮನಕೆ ಕಿರು ಆಸರೆ.

​ಹೆಜ್ಜೆಗಳು ಭಾರವಾಗಿ,

ಬೆಳಕೇ ಬೆಂಕಿಯ ಮಳೆಯಾಗಿ;

ದಿಗಂತದಲಿ ನಿಂತು

ಜೀವ ಹಿಂಡುವಾಗ—

ಸೋಲೊಪ್ಪದೆ ವಿಧಿಯಿಲ್ಲವೇ?

-ನಿರಂಜನ ಕೇಶವ ನಾಯಕ, ಮಂಗಳೂರು