ಕಲ್ಲಿನಲ್ಲಿ ಅರಳಿದ ಕಾವ್ಯದ ಹಾಗೆ ವಿವರಿಸಬಹುದು ಐಹೊಳೆ ಪ್ರವಾಸ ಕಥನ.. ಕರ್ನಾಟಕದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಕಲ್ಲುಗಳೇ ಮಾತಾಡುವ ಜಾಗಗಳಲ್ಲಿ ಬಾಗಲಕೋಟೆ ಜಿಲ್ಲೆಯ ಐಹೊಳೆಗೆ ಅಗ್ರಸ್ಥಾನವಿದೆ. ಭಾರತೀಯ ದೇವಾಲಯ ವಾಸ್ತುಶಿಲ್ಪದ ತೊಟ್ಟಿಲು ಎಂದೇ ಖ್ಯಾತವಾಗಿರುವ ಐಹೊಳೆಗೆ ಒಂದು ದಿನದ ಪ್ರವಾಸ ಕೈಗೊಂಡ ಅನುಭವ ನಿಜಕ್ಕೂ ರೋಮಾಂಚನಕಾರಿ. ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವ ಕಣ್ಣಿಗೆ ಕಟ್ಟುವಂತಿದ್ದರೆ, ಐಹೊಳೆ ನಮ್ಮ ಚಾಲುಕ್ಯರ ಅರಸರ ಆದಿಕಾಲದ ಶಿಲ್ಪಕಲೆಯ ಪ್ರಯೋಗಾಲಯದಂತೆ ಭಾಸವಾಗುತ್ತದೆ.

ಪ್ರಯಾಣದ ಆರಂಭ ಮತ್ತು ಮೊದಲ ನೋಟ : ಬೆಳಗ್ಗಿನ ಜಾವದ ತಂಗಾಳಿಯಲ್ಲಿ ಬಾದಾಮಿಯಿಂದ ಐಹೊಳೆಯತ್ತ ಪ್ರಯಾಣ ಬೆಳೆಸಿದರೆ.... ದಾರಿಯಿಡೀ ಹಸಿರು ಗದ್ದೆಗಳು ಮತ್ತು ಸೂರ್ಯನ ಕಿರಣಗಳ ಸ್ವಾಗತ. ನಾವು ಐಹೊಳೆ ತಲುಪಿದಾಗ ಅಲ್ಲಿನ ಮಣ್ಣಿನ ವಾಸನೆ ಹಾಗೂ ಪ್ರಾಚೀನತೆಯ ಗತವೈಭವ ನಮ್ಮನ್ನು ಸ್ವಾಗತಿಸುತ್ತದೆ. ಗ್ರಾಮದ ತುಂಬೆಲ್ಲ ಎಲ್ಲೆಂದರಲ್ಲಿ ಹರಡಿಕೊಂಡಿರುವ ಐತಿಹಾಸಿಕ ದೇವಾಲಯಗಳನ್ನು ನೋಡಿಯೇ ಅಚ್ಚರಿಯಾಗುತ್ತದೆ.

ದುರ್ಗಾ ದೇವಸ್ಥಾನದ ಅಚ್ಚರಿ : ಪ್ರಸಿದ್ಧ ದುರ್ಗಾ ದೇವಸ್ಥಾನ ಸಂಕೀರ್ಣ. ಇಲ್ಲಿಗೆ ಕಾಲಿಡುತ್ತಿದ್ದಂತೆ ಪ್ರಾಚೀನತೆಯ ಇತಿಹಾಸ ಮೈದಾನದಲ್ಲಿ ನಿಂತ ಅನುಭವವಾಗುತ್ತದೆ. ಇದು ಯಾವುದೇ ದುರ್ಗಾ ದೇವಿಯ ದೇವಾಲಯವಲ್ಲ, ಬದಲಿಗೆ ಇದರ ಅಂಡಾಕಾರದ (ಕುದುರೆಯ ಲಾಳದ ಆಕಾರದ) ವಿನ್ಯಾಸದಿಂದಾಗಿ ಇದಕ್ಕೆ ಆ ಹೆಸರು ಬಂದಿದೆ. ಈ ದೇವಾಲಯದ ಸುತ್ತಲೂ ಇರುವ ಕಾರಿಡಾರ್ನಲ್ಲಿ ಹೆಜ್ಜೆ ಹಾಕಿದರೆ, ಶತಶತಮಾನಗಳ ಹಿಂದಿನ ಶಿಲ್ಪಿಗಳ ಕೈಚಳಕ ಮತ್ತು ಅವರ ಕಲ್ಪನಾ ಶಕ್ತಿಗೆ ಮನಸೋಲದೆ ಇರಲು ಸಾಧ್ಯವಾಗುವುದಿಲ್ಲ. ಇಲ್ಲಿರುವ ಪ್ರತಿ ಕಂಬದ ಮೇಲಿನ ಕೆತ್ತನೆಗಳೂ ಒಂದೊಂದು ಕಥೆಯನ್ನು ಹೇಳುತ್ತದೆ. ಇದೇ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯದಲ್ಲಿ ಪ್ರಾಚೀನ ಕಾಲದ ವಿಗ್ರಹಗಳು ಮತ್ತು ಭಗ್ನಗೊಂಡ ಶಿಲ್ಪಗಳನ್ನು ನೋಡುವಾಗ ಇತಿಹಾಸ ಕಣ್ಣಮುಂದೆ ಜೀವಂತವಾಗಿ ಬಂದಂತೆನಿಸಿತು.

ಲಾಡ್ ಖಾನ್ ಗುಡಿ ಮತ್ತು ಇತರೆ ಶಿಲ್ಪಗಳು : ಅಲ್ಲಿಂದ ಮುಂದೆ ಸಾಗಿ ಹೋದರೆ ಐಹೊಳೆಯ ಮತ್ತೊಂದು ಹಳೆಯ ಸ್ಮಾರಕವಾದ ಲಾಡ್ ಖಾನ್ ಗುಡಿಯನ್ನು ತಲುಪಬಹುದು. ಆರಂಭದಲ್ಲಿ ಸಭಾಂಗಣವಾಗಿ ಬಳಕೆಯಾಗುತ್ತಿದ್ದ ಈ ಕಟ್ಟಡದ ವಾಸ್ತುಶಿಲ್ಪವು ತುಂಬಾ ವಿಭಿನ್ನವಾಗಿದೆ. ಇದರ ಮೇಲ್ಛಾವಣಿ ಮತ್ತು ಕಂಬಗಳ ಮೇಲಿನ ನವಿಲು, ಹೂವಿನ ವಿನ್ಯಾಸದ ಕೆತ್ತನೆಗಳು ಅತ್ಯಂತ ಆಕರ್ಷಕವಾಗಿವೆ. ಹತ್ತಿರದಲ್ಲೇ ಇರುವ ಗೌಡ ದೇವಾಲಯ ಹಾಗೂ ಸೂರ್ಯನಾರಾಯಣ ದೇವಸ್ಥಾನಗಳ ಸರಳ ಹಾಗೂ ಸುಂದರ ಶೈಲಿ ನಮ್ಮನ್ನು ಸೆಳೆಯುತ್ತದೆ.
ಬಂಡೆಯೊಳಗಿನ ಅದ್ಭುತ - ರಾವಣಫಾಡಿ ಗುಹಾಲಯ : ಹೊರಗಿನಿಂದ ಸಾಮಾನ್ಯ ಬಂಡೆಯಂತೆ ಕಾಣುವ ಇದರ ಒಳಗೆ ಪ್ರವೇಶಿಸುತ್ತಿದ್ದಂತೆ ಒಂದು ಬೇರೆ ಲೋಕವೇ ತೆರೆದು ಕೊಳ್ಳುತ್ತದೆ. ಅಲ್ಲಿರುವ ನಟರಾಜನ ಭಂಗಿ, ಅರ್ಧನಾರೀಶ್ವರ ಮೂರ್ತಿ ಮತ್ತು ಮಹಿಷಾಸುರಮರ್ದಿನಿಯ ಉಬ್ಬುಶಿಲ್ಪಗಳು ಜೀವಂತವಾಗಿ ನಿಂತು ನಮ್ಮೊಂದಿಗೆ ಮಾತನಾಡುತ್ತಿರುವಂತೆ ಭಾಸವಾಗುತ್ತದೆ. ಕಲ್ಲಿನಲ್ಲಿ ಭಾವನೆಗಳನ್ನು ತಂದ ಆ ಶಿಲ್ಪಿಗಳ ಕೈಗಳಿಗೆ ನಮಸ್ಕರಿಸಬೇಕು ಎನಿಸುತ್ತದೆ.
ಮೇಗುಟಿ ಬೆಟ್ಟದ ಮೇಲಿನ ಸೂರ್ಯಾಸ್ತ : ಐಹೊಳೆಯ ಸಣ್ಣ ಬೆಟ್ಟದ ಮೇಲಿರುವ ಮೇಗುಟಿ ಜೈನ ದೇವಾಲಯಕ್ಕೆ ಭೇಟಿ ನೀಡಿದರೆ ಮತ್ತೊಂದು ರೋಮಾಂಚನ. ಮೇಲಕ್ಕೆ ಹೋದಮೇಲೆ ನಮಗೆ ಕಾಣುವ ತಕ್ಷಣದ ದೃಶ್ಯ ನಮ್ಮ ಇಡೀ ದಿನದ ಆಯಾಸವನ್ನು ಮರೆಸುತ್ತದೆ. ಬೆಟ್ಟದ ಮೇಲಿನಿಂದ ಕೆಳಗೆ ಕಾಣುವ ಐಹೊಳೆ ಗ್ರಾಮ, ಹಸಿರು ಹೊದಿಕೆಯ ಪರಿಸರ ಮತ್ತು ಸುತ್ತಲಿನ ಐತಿಹಾಸಿಕ ಸ್ಮಾರಕಗಳ ಪಕ್ಷಿನೋಟ ಮನಸ್ಸಿಗೆ ಅಪಾರ ನೆಮ್ಮದಿ ನೀಡುತ್ತದೆ. ಅಲ್ಲಿ ಕುಳಿತು ತಂಪಾದ ಗಾಳಿಯನ್ನು ಆನಂದಿಸುತ್ತಾ ಸೂರ್ಯಾಸ್ತವನ್ನು ಕಣ್ತುಂಬಿಕೊಂಡ ಕ್ಷಣಗಳು ಅಚ್ಚಳಿಯದೆ ಉಳಿಯುವಂತಹವು. ಮೇಗುಟಿ ದೇವಾಲಯದ ಗೋಡೆಯ ಮೇಲೆ ರಾಜ ಎರಡನೆಯ ಪುಲಿಕೇಶಿಯ ಕಾಲದ ಐಹೊಳೆ ಶಾಸನವನ್ನು ಕಣ್ಣಾರೆ ಕಂಡಾಗ ರೋಮಾಂಚನ ಆಗುತ್ತದೆ.
ಐಹೊಳೆಯ ಕಲ್ಲುಗಳ ಮೌನದಲ್ಲೂ ಚಾಲುಕ್ಯರ ಇತಿಹಾಸದ ಸದ್ದು ಕೇಳಿಸುವ ಅನುಭವವಾಗುತ್ತದೆ. ಕೇವಲ ಕಲ್ಲುಗಳ ಗುಂಪಲ್ಲ, ಬದಲಿಗೆ ಭಾರತೀಯ ವಾಸ್ತುಶಿಲ್ಪದ ಮೊದಲ ಅಕ್ಷರಾಭ್ಯಾಸದ ಕೇಂದ್ರವಾಗಿರುವ ಐಹೊಳೆ ಪ್ರವಾಸ ನಮ್ಮ ಜೀವನದ ಅತ್ಯಂತ ಸ್ಮರಣೀಯ ಮತ್ತು ಜ್ಞಾನವರ್ಧಕ ಪ್ರವಾಸಗಳಲ್ಲಿ ಒಂದಾಗಿ ಅಚ್ಚಳಿಯದೇ ಕಲ್ಲುಗಳಲ್ಲಿ ಅರಳಿದ ಕಾವ್ಯವಾಗಿಯೇ ಬಿಡುತ್ತದೆ.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!