ನವನೀತ ಚೋರನಂತೆ
ಮಣಿಹಾರ ಕದ್ದನಂತೆ
ಎಲ್ಲ ಮಾಯೆಯ ಮುಸುಕು
ಎನ್ನೆದೆಯ ಒಲವ ಕದ್ದ
ಒಲವಿಂದ ನನ್ನ ಗೆದ್ದ
ನನ್ನ ಹೃದಯದ ತುಣುಕು
ನನ್ನರಮನೆಯ ಹೂದೋಟದಲ್ಲಿ
ತಂದಿಟ್ಟ ಪಾರಿಜಾತದ ಬಳ್ಳಿ
ಅಚ್ಚಬಿಳುಪಿನ ಹೂ ಇವನು
ಎನ್ನಮನಸಿನ ಅಂಗಳದಲ್ಲಿ
ಬಣ್ಣಬಣ್ಣದ ಹೂ ರಂಗವಲ್ಲಿ
ಬಿಡಿಸಿದ ಮಾಯಗಾರ ಇವನು
ಹದಿನಾರು ಸಾವಿರ ಮೋಹಗಳ
ಸೆರೆಬಿಡಿಸಬಂದ ಸುಕುಮಾರ
ಮಾಯೆ ಮೀರಿದ ಸರದಾರ
ನೂರು ಸಾವಿರ ಕನಸುಗಳ
ತೆಕ್ಕೆಯಲ್ಲಿ, ಪ್ರೀತಿಗೂ ಭಕ್ತಿಗೂ
ಸೋತು ಬರುವ ರಣಧೀರ
ಓ ಇನಿಯಾ ನಿನ್ನೊಲವಿನ ಹೂ ನಾನು
ಎಂದೆಂದೂ ನಿನ್ನಲೇ ಒಂದಾಗಿರುವೆನು.
ಜನ್ಮದಿನದ ಶುಭಾಶಯಗಳೊಂದಿಗೆ,
ನಿನ್ನ ಸತ್ಯಭಾಮೆ..
-- ಮಂಕ
ಸೆಪ್ಟೆಂಬರ್ ೪, ೨೦೨೬
ಪ್ರತಿಕ್ರಿಯೆ (1)
ನಿಮ್ಮ ಕವಿತೆ ತುಂಬಾ ಅದ್ಭುತ ವಾಗಿದೆ