ನಸು ಸಂಜೆ ಕವಿದ ಮೋಡ. ಅಲ್ಲೊಂದು, ಇಲ್ಲೊಂದು ಕೆನ್ನೆ ಮೇಲೆ ಬೀಳ್ತಿದ್ದ ಮಳೆಹನಿಗಳು. ಒಲ್ಲದ ಮನಸ್ಸಿನಲ್ಲೇ, ಭಾರದ ಬೂಟೊಂದನ್ನು ಕಾಲಿಗೆ ಸಿಕ್ಕಿಸಿಕೊಂಡು, ಬುಸ್ಸೆನ್ನುತ್ತಲೇ ನಮ್ಮನೆ ಬೀದಿಲೇ ವಾಕಿಂಗ್ ಮಾಡುತ್ತಿದ್ದೆ…
ಟ್ರಿಣ್.. ಟ್ರಿಣ್ ಅಂತಲೇ ಮಕ್ಕಳ ಸೈಕಲ್ ಗುಂಪೊಂದು ಒಂದೇ ಸಮ ರೇಸಿಗಿಳಿದಿತ್ತು.. ಪೋರನೊಬ್ಬ - “ಏನಂಕಲ್ ನೀವು, ಮನೇಲಿ ಸೈಕಲ್ ಇಟ್ಕೊಂಡು ವಾಕಿಂಗ್ ಮಾಡ್ತೀರಲ್ಲ.. ಸೈಕ್ಲಿಂಗ್ ಮಾಡಿ, You can burn more” ಅಂತ್ಹೇಳಿ ಛಂಗನೆ ಹಾರಿಸ್ದ..
ನನಗೆ ಬಾಲ್ಯದ ಹಳೆಯ ನೆನಪೊಂದು ಕಣ್ಣಮುಂದೆ ಬಂತು.
ಅದನ್ನು ನೆನೆಸಿಕೊಳ್ಳುತ್ತಾ ನನಗರಿವಿಲ್ಲದೇ ತುಟಿಯಂಚಲ್ಲಿ ನಗುಮತ್ತು ಎದೆಯುಬ್ಬುವ ಹೆಮ್ಮೆ — ಎಲ್ಲವೂ ಒಂದೇ ಕ್ಷಣದಲ್ಲಿ ಅನುಭವಕ್ಕೆ ಬಂತು.
ನಾನು ಹುಟ್ಟಿದ್ದು ಒಂದು ಸಾಮಾನ್ಯ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ. ನಾವಿದ್ದದ್ದು ಚಿಕ್ಕ ಬಾಡಿಗೆ ಮನೆ. ನಮಗೆ ದಿನದ ಊಟ, ತಲೆಗೊಂದು ಸೂರು ಮತ್ತು ಒಳ್ಳೆ ಶಿಕ್ಷಣ ಸಿಗಲಿ ಎಂದು ಅಪ್ಪ ಕಷ್ಟಪಡುತ್ತಿದ್ದರು. ಆ ವಯಸ್ಸಿನಲ್ಲಿ ನನಗೆ ಅದರ ಬೆಲೆ ಗೊತ್ತಾಗುತ್ತಿರಲಿಲ್ಲ, ಆದರೆ ಇಂದು ಅದರ ಪೂರ್ಣ ಅರಿವಾಗುತ್ತಿದೆ.
ಚಿಕ್ಕವನಿದ್ದಾಗ ನನಗೆ ಸೈಕಲ್ ಎಂದರೆ ಪಂಚಪ್ರಾಣ. ನಮ್ಮ ಬೀದಿಯಲ್ಲಿದ್ದ ಎಲ್ಲ ಮಕ್ಕಳ ಬಳಿಯೂ ಸೈಕಲ್ ಇತ್ತು. ಪ್ರತಿದಿನ ಸಂಜೆ ಶಾಲೆ ಮುಗಿದು ಬರ್ತಿದ್ದಂತೆ ಅವರೆಲ್ಲ ಸೈಕಲ್ ತುಳಿಯುತ್ತಾ ಖುಷಿಯಿಂದ ಓಡಾಡುತ್ತಿದ್ದರು. ನಾನು ಮಾತ್ರ ನೆರೆಮನೆಯ ಹುಡುಗ ಸೈಕಲ್ ಓಡಿಸುವುದನ್ನೇ ನೋಡುತ್ತಾ ಹೊರಗೆ ನಿಲ್ಲುತ್ತಿದ್ದೆ. ನನಗೇನೂ ಬೇಸರವಿಲ್ಲ ಎನ್ನುವಂತೆ ಸುಮ್ಮನೆ ಮುಖ ಮಾಡಿ ನಿಲ್ಲುತ್ತಿದ್ದೆ.
ಆದರೆ ನಿಜಕ್ಕೂ ನನ್ನ ಮನಸ್ಸಿನಲ್ಲಿ ಒಳಗೊಳಗೇ ಅಸಹಾಯಕತೆ, ಕೊರಗು, ಕೆಲವೊಮ್ಮೆ ಸಿಟ್ಟು ಕೂಡ ಬರ್ತಿತ್ತು. "ಅಪ್ಪಂಗೆ ನನಗೊಂದು ಸೈಕಲ್ ಕೊಡಿಸೋಕೆ ಆಗಲ್ವಾ?" ಅಂತ ಮನಸ್ಸಿನಲ್ಲೇ ಅಪ್ಪನ ಮೇಲೆ ಮುನಸಿಕೊಳ್ಳುತ್ತಿದ್ದೆ.
ದೇವರ ಎದುರು ಕುಳಿತು ಕೈ ಮುಗಿದು ಬೇಡಿಕೊಳ್ಳುತ್ತಿದ್ದ ಆ ಕ್ಷಣಗಳು ಇಂದಿಗೂ ಹಸಿರಾಗಿವೆ:
"ದೇವರೇ, ಹೇಗಾದರೂ ಮಾಡಿ ನನಗೊಂದು ಸೈಕಲ್ ಸಿಗೋ ಹಾಗೆ ಮಾಡು... ಪ್ಲೀಸ್ ದೇವರೆ, ನಿನ್ನನ್ನ ಕಾಲು ಮುಗಿದು ಕೇಳ್ಕೋತೀನಿ." ಅಂತ..
ಪ್ರತಿ ಸಂಜೆಯೂ ಅಪ್ಪ ಕೆಲಸ ಮುಗಿಸಿ ಮನೆಗೆ ಬರುವಾಗ, ನಾನು ಬೀದಿಯ ತುದಿಯಲ್ಲೇ ಕಾಯುತ್ತಿದ್ದೆ. 'ಇವತ್ತಾದರೂ ಅಪ್ಪ ನನಗೊಂದು ಸರ್ಪ್ರೈಸ್ ಆಗಿ ಸೈಕಲ್ ತರ್ತಾರೇನೋ' ಎನ್ನುವ ಪುಟ್ಟ ಭರವಸೆ ನನ್ನಲ್ಲಿರುತ್ತಿತ್ತು. ಹಾಗೆಯೇ ಹಲವು ದಿನಗಳು ಕಾಯುತ್ತಲೇ ನಿಂತೆ. ಆದರೆ ಸೈಕಲ್ ಮಾತ್ರ ಬರಲೇ ಇಲ್ಲ.
ದಿನಗಳು ಉರುಳಿದವು, ಬಾಲ್ಯವೂ ಕಳೆದುಹೋಯಿತು. ಆ ಪುಟ್ಟ ಆಸೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಆಳವಾಗಿ ಹೂತುಹೋಯಿತು. ಇಂದು ನನ್ನ ಬದುಕನ್ನು ತಿರುಗಿ ನೋಡಿದಾಗ ಅದೇನೋ ಅರ್ಥವೇ ಆಗದ ಭಾವನೆ. ಇಂದು ನನ್ನ ಬಳಿ ಕಾರುಗಳಿವೆ, ಪವರ್ಫುಲ್ ಬೈಕ್ ಇದೆ... ಅಷ್ಟೇ ಏಕೆ, ಬಾಲ್ಯದಲ್ಲಿ ನಾನು ಊಹಿಸಲೂ ಸಾಧ್ಯವಿಲ್ಲದಷ್ಟು ದುಬಾರಿ ಬೆಲೆಯ ಸೈಕಲ್ ಕೂಡ ಇದೆ!
ಅಂದು ಒಂದು ಸಣ್ಣ ಸೈಕಲ್ಗಾಗಿ ದೇವರ ಬಳಿ ಗಿಂಜುತ್ತಿದ್ದ ಆ ಸಣ್ಣ ಹುಡುಗನ ಬಳಿ, ಇಂದು ಅವನು ಕನಸಿನಲ್ಲೂ ಯೋಚಿಸದಷ್ಟು ಎಲ್ಲವೂ ಇದೆ. ಬಾಲ್ಯವಿಲ್ಲವಷ್ಟೇ.. ಆದರೆ ಇವೆಲ್ಲ ನೆನೆದರೆ ನನಗೆ ನೋವಾಗುವುದಿಲ್ಲ. ಮನಸ್ಸು ತುಂಬಿ ಬರುತ್ತದೆ.
ನನಗೆ ಈಗ ನನ್ನ ಅಪ್ಪ ಅರ್ಥವಾಗುತ್ತಿದ್ದಾರೆ. ಅವರಿಗೆ ನನಗೆ ಕೊಡಿಸಲು ಇಷ್ಟವಿರಲಿಲ್ಲ ಅಂತೇನಲ್ಲ, ಅವರ ಬಳಿ ಇದ್ದುದರಲ್ಲೇ ನಮಗಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದರು. ಅವರು ನನಗೆ ಸೈಕಲ್ಗಿಂತಲೂ - ಶಿಕ್ಷಣ, ಉತ್ತಮ ಸಂಸ್ಕಾರ ಮತ್ತು ಬದುಕಿನಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಹಸಿವು ಇವುಗಳನ್ನು ಕೊಟ್ಟಿರೋದಕ್ಕೆ ನನಗೆ ಹೆಮ್ಮೆಯಿದೆ..
ಆ ಹಸಿವೇ ಇವತ್ತು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದು. ಅಂದು ಆ ಪುಟ್ಟ ಹುಡುಗ ಕೂಗಿ ಹೇಳಿದ ಪ್ರಾರ್ಥನೆ ಆ ದೇವರಿಗೆ ಕೇಳಿಸಿತ್ತು. ಅವನೇನೂ ನನ್ನ ಆಸೆಯನ್ನು 'ನಿರಾಕರಿಸಲಿಲ್ಲ'. ಬಹುಶಃ ಅವನು, "ಸ್ವಲ್ಪ ತಾಳು" ಎಂದಿರಬೇಕು.
ಕೇವಲ ಒಂದು ಸೈಕಲ್ ಅಷ್ಟೇ ಅಲ್ಲ, ಅದರ ಜೊತೆಗೆ ಗೌರವಯುತವಾದ ಬದುಕನ್ನೇ ಗಳಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಲಿ ಎಂದು ಕಾಯಿಸಿದ್ದನೇನೋ. ನನ್ನ ಜೀವನದಲ್ಲಿ ನಡೆದಿರುವ ಯಾವುದೂ ಸುಮ್ಮನೆ ಆಕಸ್ಮಿಕವಲ್ಲ.
ಆ ದಿನಗಳ ಕಷ್ಟಗಳು.
ಆ ಕಾಯುವಿಕೆ.
ಆ ನಿರಾಶೆಗಳು.
ಮತ್ತು ಈ ಬೆಳವಣಿಗೆ.
ಇವೆಲ್ಲವೂ ಆ ಭಗವಂತ ಬರೆದ ಯಾವುದೋ ದೊಡ್ಡ ಕಥೆಯ ಭಾಗವೆನಿಸುತ್ತದೆ. ಬದುಕು ನನ್ನ ಆಸೆಯನ್ನು ನಿರಾಕರಿಸಲಿಲ್ಲ. ಸ್ವಲ್ಪ ತಡ ಮಾಡಿತಷ್ಟೇ. ಸರಿಯಾದ ಸಮಯ ಬಂದಾಗ, ನಾನು ಕೇಳಿದ್ದಕ್ಕಿಂತ ನೂರಷ್ಟು ಹೆಚ್ಚಾಗಿಯೇ ಮರಳಿಸಿತು.
ಇಂದು ಆ ಪುಟ್ಟ ಹುಡುಗನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನನ್ನ ಅಪ್ಪನ ಬಗ್ಗೆ ಅಪಾರ ಗೌರವ ಮೂಡುತ್ತದೆ. ಅವನ ಯೋಜನೆ ಏನೆಂದು ತಿಳಿಯದಿದ್ದಾಗಲೂ, ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಿದ್ದು ನಡೆಸಿಕೊಟ್ಟ ಆ ಭಗವಂತನಿಗೆ ಶಿರ ಬಾಗಿ ನಮಸ್ಕರಿಸುತ್ತೇನೆ. ಬದುಕು ನಿಜಕ್ಕೂ ವಿಚಿತ್ರ. ಆದರೆ, ಅಷ್ಟೇ ಸುಂದರ.
- ಕಿರಣ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!