ಹಬ್ಬ, ಉತ್ಸವ, ಮೆರವಣಿಗೆ ಎಂದರೆ ನಮ್ಮ ಸಮಾಜದಲ್ಲಿ ಸಂಭ್ರಮ, ಭಕ್ತಿ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಸಂಕೇತ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಭ್ರಮದ ಸ್ವರೂಪದಲ್ಲಿ ಡಿಜೆ, ಅತಿಯಾದ ಧ್ವನಿವರ್ಧಕ ಮತ್ತು ಕರ್ಕಶ ಸಂಗೀತ ಪ್ರಮುಖ ಸ್ಥಾನ ಪಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆ.
ಹಬ್ಬದ ಹೆಸರಿನಲ್ಲಿ ರಾತ್ರಿ ತಡವರೆಗೂ ಕಿವಿಗಡಚಿಕ್ಕುವ ಶಬ್ದ, ಅಶಿಸ್ತಿನ ಮೆರವಣಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ವರ್ತನೆಗಳು ಸಾಮಾನ್ಯವಾಗುತ್ತಿವೆ.ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದರ ಉದ್ದೇಶ ಯಾರೊಬ್ಬರ ಧಾರ್ಮಿಕ ಅಥವಾ ಸಾಂಸ್ಕೃತಿಕ ಆಚರಣೆಯನ್ನು ತಡೆಯುವುದಲ್ಲ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣವೇ ಇದರ ಹಿಂದಿರುವ ಮುಖ್ಯ ಆಶಯ.
ವೃದ್ಧರು, ಮಕ್ಕಳು, ರೋಗಿಗಳು, ವಿದ್ಯಾರ್ಥಿಗಳು ಹಾಗೂ ರಾತ್ರಿ ಕೆಲಸ ಮಾಡುವವರಿಗೂ ಅತಿಯಾದ ಶಬ್ದ ತೀವ್ರ ತೊಂದರೆ ಉಂಟುಮಾಡುತ್ತದೆ. ಆದ್ದರಿಂದ ಸಂಭ್ರಮದ ಹಕ್ಕಿನ ಜೊತೆಗೆ ಇತರರ ನೆಮ್ಮದಿಯ ಹಕ್ಕನ್ನೂ ಸಮಾಜ ಗೌರವಿಸಬೇಕು.ಆದರೆ ನಿರ್ಬಂಧ ಜಾರಿಯಲ್ಲಿ ಪಾರದರ್ಶಕತೆ ಮತ್ತು ಸಮಾನತೆ ಅತ್ಯಂತ ಮುಖ್ಯ. ಒಂದು ಕಡೆ ನಿಯಮ ಜಾರಿಗೊಳಿಸಿ ಮತ್ತೊಂದು ಕಡೆ ಉಲ್ಲಂಘನೆಗೆ ಅವಕಾಶ ನೀಡಿದರೆ ಜನರಲ್ಲಿ ಅಸಮಾಧಾನ ಮೂಡುವುದು ಸಹಜ. ಹೀಗಾಗಿ ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ರಾಜಕೀಯ ಕಾರ್ಯಕ್ರಮವಾಗಿರಲಿ ನಿಯಮ ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು. ಅಧಿಕಾರಿಗಳು ಕೂಡ ಮುಂಚಿತವಾಗಿ ಸ್ಪಷ್ಟ ಮಾರ್ಗಸೂಚಿ ನೀಡಿ, ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.
ಮೆರವಣಿಗೆಗಳಲ್ಲಿ ಡಿಜೆ ಇಲ್ಲದೆ ಸಂಭ್ರಮ ಸಾಧ್ಯವಿಲ್ಲ ಎಂಬ ಮನೋಭಾವವೂ ಬದಲಾಗಬೇಕಿದೆ. ನಮ್ಮ ಸಾಂಪ್ರದಾಯಿಕ ವಾದ್ಯಗಳು, ಭಜನೆ, ನಾದಸ್ವರ, ಚಂಡೆ, ಬ್ಯಾಂಡ್ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕವೂ ಉತ್ಸವದ ಮೆರುಗು ಹೆಚ್ಚಿಸಬಹುದು. ಆಧುನಿಕತೆಯನ್ನು ಸ್ವೀಕರಿಸುವುದರ ಜೊತೆಗೆ ನಮ್ಮ ಸಂಸ್ಕೃತಿಯ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದು ಸಮಾಜದ ಜವಾಬ್ದಾರಿ.ಡಿಜೆ ನಿಷೇಧವನ್ನು ಕೇವಲ ಪೊಲೀಸ್ ಕ್ರಮವೆಂದು ನೋಡುವ ಬದಲು, ‘ನಮ್ಮ ಸಂಭ್ರಮ ಇನ್ನೊಬ್ಬರ ನೆಮ್ಮದಿಗೆ ಧಕ್ಕೆ ತರಬಾರದು’ ಎಂಬ ಸಾಮಾಜಿಕ ಹೊಣೆಗಾರಿಕೆಯ ಸಂದೇಶವಾಗಿ ಅರ್ಥೈಸಬೇಕು. ಸಂಭ್ರಮ ಇರಲಿ, ಆದರೆ ಶಿಸ್ತು ಇರಲಿ; ಸಂಗೀತ ಇರಲಿ, ಶಬ್ದ ಮಾಲಿನ್ಯವಾಗದಿರಲಿ; ಮೆರವಣಿಗೆ ಇರಲಿ, ಆದರೆ ಸಾರ್ವಜನಿಕರಿಗೆ ತೊಂದರೆಯಾಗದಿರಲಿ.
ಕಾನೂನಿನ ಭಯದಿಂದಲ್ಲ, ಸಾಮಾಜಿಕ ಜವಾಬ್ದಾರಿಯ ಅರಿವಿನಿಂದ ನಿಯಮ ಪಾಲಿಸುವ ದಿನ ಬಂದಾಗ ಮಾತ್ರ ನಮ್ಮ ಹಬ್ಬಗಳು ನಿಜವಾದ ಅರ್ಥದಲ್ಲಿ ಸಂಭ್ರಮದ ಹಬ್ಬಗಳಾಗುತ್ತವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!