ಫಲವಸ್ತುಗಳಲ್ಲಿ ತೆಂಗಿನಕಾಯಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ತೆಂಗಿನ ಮರವು “ಕಲ್ಪವೃಕ್ಷ” ಎಂದು ಕರೆಯಲ್ಪಡುವುದು. ನಮ್ಮ ಜೀವನಕ್ಕೆ ಅಗತ್ಯವಾದ ಆಹಾರ, ಪಾನೀಯ, ಎಣ್ಣೆ, ನಾರು ಹಾಗೂ ವಿವಿಧ ಉಪಯೋಗದ ವಸ್ತುಗಳನ್ನು ನೀಡುವ ತೆಂಗಿನ ಮರವು ಕೃಷಿಕರ ಆರ್ಥಿಕ ಬದುಕಿನಲ್ಲಿಯೂ ಪ್ರಮುಖವಾದ ಪಾತ್ರ ವಹಿಸುತ್ತದೆ.
ತೆಂಗು ಉಷ್ಣವಲಯದ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆಂಗು ಕೃಷಿಯಿದೆ. ತೆಂಗಿನ ಪ್ರತಿಯೊಂದು ಭಾಗವೂ ಬಹಳ ಉಪಯುಕ್ತವಾಗಿದೆ. ಆದ್ದರಿಂದಲೇ ಇದನ್ನು “ಕಲ್ಪವೃಕ್ಷ” ಎಂದು ಪೂಜಿಸಲಾಗುತ್ತದೆ.
ತೆಂಗಿನಕಾಯಿ ನಮ್ಮ ಅಡುಗೆ ಮನೆಯ ಪ್ರಧಾನವಾದ ಅಂಗವಾಗಿದೆ. ಚಟ್ನಿ, ಪಲ್ಯ, ಸಿಹಿತಿಂಡಿ, ಕಾಯಿ ಹುಳಿ, ಸಂಬಾರು ಹಾಗೂ ವಿವಿಧ ಖಾದ್ಯಗಳಲ್ಲಿ ತೆಂಗಿನಕಾಯಿಯನ್ನು ಉಪಯೋಗಿಸುವರು. ಎಳೆಯ ತೆಂಗಿನ ಕಾಯಿಯ ನೀರು ದೇಹಕ್ಕೆ ತಂಪು ನೀಡುವ ನೈಸರ್ಗಿಕ ಪಾನೀಯವಾಗಿದೆ. ಎಳನೀರು ಬಾಯಾರಿಕೆಯನ್ನು ನೀಗಿಸುವುದರ ಜೊತೆಗೆ ದೇಹಕ್ಕೆ ಖನಿಜಾಂಶಗಳನ್ನು ಒದಗಿಸುತ್ತದೆ.
ತೆಂಗು ರೈತನಿಗೆ ಆದಾಯದ ಮೂಲವಾಗಿದೆ. ತೆಂಗಿನೆಣ್ಣೆ, ಕೊಬ್ಬರಿ, ತೆಂಗಿನ ಹಾಲು, ತೆಂಗಿನ ಪುಡಿ, ಹಿಂಡಿ ಮುಂತಾದ ಉತ್ಪನ್ನಗಳನ್ನು ತೆಂಗಿನ ಕಾಯಿಯಿಂದ ತಯಾರಿಸಲಾಗುತ್ತದೆ. ಇಂದು ಎಳನೀರಿನ ಐಸ್ ಕ್ರೀಂ ಬಹಳ ಬೇಡಿಕೆ ಪಡೆದಿದೆ. ತೆಂಗಿನ ನಾರಿನಿಂದ ಹಗ್ಗ, ಚಾಪೆ, ಬಾಗಿಲುಮಣೆ ಹಾಗೂ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸುವರು. ಒಂದು ಕಾಲದಲ್ಲಿ ಮನೆಗಳಲ್ಲಿ ಸಮಾರಂಭಗಳಿಗೆ ಚಪ್ಪರ ಮಾಡಲು ತೆಂಗಿನ ಮಡಲು ಬಳಕೆಯಾಗುತ್ತಿತ್ತು. ಹೀಗೆ ತೆಂಗು ಕೃಷಿ, ಸಣ್ಣ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ತೆಂಗಿನ ಮರವು ಕೇವಲ ಪರಿಸರದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಮರಗಳು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕದ ಸಮತೋಲನಕ್ಕೆ ಸಹಕರಿಸುತ್ತವೆ. ತೆಂಗಿನ ತೋಟಗಳು ಹಸಿರು ಪರಿಸರವನ್ನು ನಿರ್ಮಿಸುವುದರ ಜೊತೆಗೆ ಮಣ್ಣಿನ ಸಂರಕ್ಷಣೆಯಲ್ಲಿಯೂ ಸಹಾಯಕವಾಗುತ್ತವೆ.
ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಶುಭಕಾರ್ಯ ಆರಂಭಿಸುವಾಗ ತೆಂಗಿನಕಾಯಿ ಒಡೆಯುವುದು ಅಥವಾ ಪೂಜೆಯಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವುದು ಸಾಮಾನ್ಯವಾಗಿದೆ. ದೇವರ ಪೂಜೆ, ಗೃಹಪ್ರವೇಶ, ಮದುವೆ, ಹಬ್ಬ-ಹರಿದಿನಗಳು ಸೇರಿದಂತೆ ಅನೇಕ ಶುಭ ಸಮಾರಂಭಗಳಲ್ಲಿ ತೆಂಗಿನಕಾಯಿಗೆ ವಿಶೇಷ ಸ್ಥಾನವಿದೆ. ಇದು ಪೂರ್ಣತೆ, ಶುಭತೆಂಗು ಜೀವಿತವಿದ್ದರೂ ಸತ್ತರೂ ಉಪಯುಕ್ತವೇ ಆಗಿದೆ. ಕಟ್ಟಡದ ಛಾವಣಿ, ಮುಚ್ಚಿಗೆಗಳಿಗೆ ಉತ್ತಮ ಮೋಪು. ಹೊಗೆ ತಾಗಿದ ಪಕ್ಕಾಸು ಮತ್ತು ಅಡ್ಡಗಳು 1000 ವರ್ಷವಾದರೂ ಗಟ್ಟಿ ಮುಟ್ಟಾಗಿರುತ್ತದೆಂದು ಹೇಳುತ್ತಾರೆ. ಅದರ ಬುಡವನ್ನು ಏತದಲ್ಲಿ ನೀರೆತ್ತುವ ಬಕೆಟ್ ಆಗಿ ಬಳಸುತ್ತಾರೆ. ಕಾಂಡದೊಳಗಿನ ತಿರುಳು ರಹಿತ ಭಾಗ ಉತ್ತಮ ಉರುವಲು. ಸಿಪ್ಪೆಯೂ ಉರುವಲಾಗುತ್ತದೆ. ತೆಂಗಿನಲ್ಲಿ ಒಂದಿನಿತೂ ಬಳಸಲ್ಪಡದೇ ಎಸೆಯುವ ಬಾಗವೇ ಇಲ್ಲ. ಅದು ಬೆಳೆಸಿದವರ ಭಾಗ್ಯದ ಬಾಗಿಲೆನ್ನುವುದು ಖಂಡಿತ.
ತೆಂಗಿನಕಾಯಿ ನಮ್ಮ ಆಹಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪರಿಸರದೊಂದಿಗೆ ಬೆಸೆದುಕೊಂಡಿರುವ ಅಮೂಲ್ಯ ನೈಸರ್ಗಿಕ ಸಂಪತ್ತು. ಅದರ ಪ್ರತಿಯೊಂದು ಭಾಗವೂ ಯಾವುದಾದರೂ ರೀತಿಯಲ್ಲಿ ಮನುಷ್ಯನಿಗೆ ಉಪಯುಕ್ತ ವಾಗಿರುವುದು ಅದರ ವಿಶೇಷತೆ. ಆದ್ದರಿಂದ “ತೆಂಗು ಉಳಿಸಿ – ರೈತನ ಬದುಕು ಉಳಿಸಿ, ತೆಂಗು ಬೆಳೆಸಿ – ಹಸಿರು ಪರಿಸರ ಬೆಳೆಸಿ” ಎಂಬ ಸಂದೇಶವನ್ನು ಎಲ್ಲರೂ⁷ ಪಾಲಿಸಬೇಕು. ತೆಂಗಿನ ಮರಗಳನ್ನು ಸಂರಕ್ಷಿಸಿ, ತೆಂಗು ಬೆಳೆಗಾರರನ್ನು ಪ್ರೋತ್ಸಾಹಿಸುವ ಮೂಲಕ ತೆಂಗಿನಕಾಯಿಯನ್ನು ಪೂಜಿಸೋಣ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!