ಆತ ಕನಸುಗಾರ, ಅಷ್ಟಿಷ್ಟು ಸಾಹಿತ್ಯ ಓದಿಕೊಂಡಿದ್ದ. ತಾನು ಓದಿದ ಪುಸ್ತಕಗಳ ಪ್ರಭಾವವೋ, ನೋಡಿದ ಅನಂತನಾಗ್ ಸಿನಿಮಾಗಳ ಪ್ರಭಾವವೋ ಗೊತ್ತಿಲ್ಲ, ಜೀವನವವನ್ನು ಆಡಂಬರವಿಲ್ಲದೆ ಜೀವಿಸಬೇಕು ಎಂಬುದು ಆತನ ಗುರಿಯಾಗಿತ್ತು. ಪ್ರತಿಯೊಬ್ಬ ಗಂಡಸಿಗೂ, ಒಬ್ಬೊಬ್ಬ ಹೆಂಗಸನ್ನು ಆ ದೇವರು ಸೃಷ್ಟಿಸಿರುತ್ತಾನಂತೆ. 

ಒಂದು ಸಮಾರಂಭದಲ್ಲಿ ಅವನಿಗೆ ‘ಅವಳು‘ ಭೇಟಿಯಾದಳು. ಅವಳ ಸರಳ ನಡುವಳಿಕೆ, ಮಾತು-ಕತೆ, ಉಡುಗೆ–ತೊಡುಗೆ, ಅವನಿಗೆ ಇಷ್ಟವಾಯಿತು. ಬಿಟ್ಟು ಬಿಟ್ಟರೆ ಮತ್ತೆ ಕೈಗೆ ಸಿಗಲಾರಳೆಂದುಕೊಂಡ. ನೇರವಾಗಿ ಎದುರಿಗೆ ನಿಂತು ತನ್ನ ಮನದ ಬಯಕೆಯನ್ನು ಹೇಳುತ್ತ, “ನೋಡಿ, ನೀವು ನನಗಿಷ್ಟವಾದಿರಿ, ನಿಮ್ಮನ್ನು ನನ್ನ ಬಾಳ ಸಂಗಾತಿಯನ್ನಾಗಿ ಪಡೆಯಬೇಕೆಂದಿದ್ದೇನೆ. ನಾನು ಶ್ರೀಮಂತನಲ್ಲ, ಹಾಗೆಂದು ಬಡವನೂ ಅಲ್ಲ! ಒಬ್ಬ ಸಾಮಾನ್ಯ ಕನಸುಗಾರ. ಜಾತಿ – ಗೀತಿ ನನಗೆ ಮುಖ್ಯ ಅಲ್ಲವೇ ಅಲ್ಲ. ನನ್ನದೇನಿದ್ದರೂ ಪ್ರೀತಿ ಮಾತ್ರ ಮುಖ್ಯ. ಬನ್ನಿ ಒಂದಾಗಿ ಬಾಳೋಣ” ಎಂದ.

ಗುರುತು ಪರಿಚಯವಿಲ್ಲದ ಆತನನ್ನು ಅವಳು ದಿಟ್ಟಿಸಿ ನೋಡಿದಳು. ಅವನ ಕಣ್ಣಲ್ಲಿ ಅವಳಿಗೆ ಕನಸುಗಳು ಕಂಡವು ತಂದೆಯನ್ನು ಕಳೆದುಕೊಂಡು ತೀರಾ ಬಡತನದ ಬದುಕನ್ನು ಬದುಕಿದ ಅವಳಿಗೆ, ಆತ ನಂಬಿಗಸ್ಥ ಎನ್ನಿಸಿತು, ಒಪ್ಪಿಗೆಯ ಮುಗುಳು ನಗೆ ಬೀರಿದಳು. 

ಮುಂದೊಂದು ದಿನ ಅವರಿಬ್ಬರೂ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾದರು. ಅವಳ ಕಾಲ್ಗುಣವೋ ಏನೋ ಮದುವೆಯಾದ ಒಂದು ವಾರದಲ್ಲಿ ಆತನಿಗೆ ಸರ್ಕಾರಿ ಕೆಲಸ ಸಿಕ್ಕಿತು. ಮುದ್ದಾದ ಎರಡು ಮಕ್ಕಳಾದವು. ಅವಳು ಮತ್ತೆ ಓದಿದಳು. ಅವಳಿಗೂ ಸರ್ಕಾರಿ ಕೆಲಸ ಸಿಕ್ಕಿತು. ಈಗ ಅವರ ಬಾಳು ಬಂಗಾರ. ಗುರುತು ಪರಿಚಯ, ಜಾತಿ – ಗೀತಿಯನ್ನು ಮೀರಿ ಅವರು ಬದುಕಿದರು…ಮಾದರಿಯಾದರು.

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ