“ಪ್ರತಿದಿನಕ್ಕವಾಗ ಮುಂಜಾನೆ ಬೇಗ ಏಳಬೇಕು, ವಾಕಿಂಗ್ ಗೆ ಹೋಗಬೇಕು, ಅಲ್ಲೇ ರಾಧಕ್ಕನ ಅಂಗಡಿಯಲ್ಲಿ ಬಿಸಿ ಬಿಸಿ ಟೀ ಕುಡಿಯಬೇಕೆಂಬ ಆಸೆ ಹೊತ್ತುಕೊಂಡೆ ಮಲಗಿಕೊಳ್ಳುತ್ತೇನೆ. ಕನಸ್ಸಿನಲ್ಲಿ ಅದೇ ಆಸೆ ಒತ್ತರಿಸಿ ಬಂದು ಉತ್ಸಾಹಿಯಾಗಿ ಗಡತ್ತಾಗಿ ನಿದ್ದೆ ಮಾಡುವುದು ನನ್ನ ಸ್ವಭಾವ”

“ಮುಂಜಾನೆ ಅಲಾರಂ ಎಷ್ಟೇ ಹೊಡೆದುಕೊಂಡರೂ ಅದರ ತಲೆ ಮೇಲೆ ಸರಿಯಾಗಿ ಕುಟ್ಟಿ ಕೆಲಸದ ಜಾಗ ಮುಟ್ಟಲು ಇನ್ನರ್ಧ ಘಂಟೆ ಇರುವಾಗ ಆಕಳಿಸುತ್ತ ಏಳುವುದು ಆ ಸ್ವಭಾವದ ಅಭಾವ ಇಲ್ಲ ಪರಾಭವ. ಏನೋ ಒಂದು ಅಂದುಕೊಳ್ಳಿ”

ಎಂದಿನಂತೆ ಕೊನೆಗೂ ಎದ್ದೆ, ಸೂರ್ಯ ಅದಾಗಲೇ ಕಿಟಕಿಯ ಗಾಜುಗಳ ಒಡೆದು ಒಳಗೆ ಬಂದಿದ್ದ. ಅವನಿಗೂ ನನಗೂ ಅದೆಷ್ಟೋ ವರ್ಷಗಳ ಯುದ್ಧ. ಆತ ಸಂಜೆ ಮುಳುಗುವಾಗ ಅಣಕಿಸಿಯೇ ಹೋಗುತ್ತಾನೆ. ಆದರೆ, ನಾಳೆ ಮತ್ತೆ ನನ್ನ ನೋಡಿ ನಗುತ್ತಾನೆ. ಆತ ಅಣಕಿಸುವಾಗ ನಾಳೆ ನಾ ಅವನ ಮುಖ ನೋಡುವುದಿಲ್ಲವೆಂಬ ಕುಹಕವಿರುತ್ತದೆ. ಬೆಳಗ್ಗೆ ಎದ್ದಾಗ ಇಂದು ಗೆಲುವು ನಿನ್ನದೇ ಎಂದು ಕಣ್ಣರಳಿಸುತ್ತಾನೆ. ನನ್ನನ್ನು ಪ್ರತಿದಿನ ಕಾಯುವ ಈ ಸೂರ್ಯನದು ಯಾಂತ್ರಿಕ ಜೀವನವಲ್ಲವೇ?

ನಮ್ಮ ಜೀವನ? ನಾವೇ ಯಂತ್ರ ತಯಾರಿಸಿ ಅದಕ್ಕೆ ಸಿಲುಕಿಕೊಂಡೆವಾ? ಪ್ರತಿದಿನ ಅದೇ ಎದ್ದುಬಿದ್ದು ರೆಡಿಯಾಗುವ ಆಟ.

ಭಗ್ಗನೆ ಸ್ಟೌ ಹೊತ್ತಿಕೊಂಡಿತು. ಅರ್ಧ ತುಂಬಿದ ನೀರಂಡೆ. ನಿತ್ಯ ಕರ್ಮ ಮುಗಿಸಿ ಗಸಗಸನೇ ಹಲ್ಲುಜ್ಜಿ, ರೂಮನ್ನು ಉಡುಗುವಷ್ಟರಲ್ಲಿ ನೀರು ಕುದಿಯುತಿತ್ತು. ಆ ಪಾತ್ರೆ ಉಳಿದರ್ಧ ಖಾಲಿಗೆ ತಣ್ಣೀರು ಸುರಿದು ಉಗುರುಬೆಚ್ಚಗಿನ ಆ ನೀರನ್ನು ಮೈಮೇಲೆ ದಳದಳನೇ ಸುರಿದುಕೊಂಡು, ಬಟ್ಟೆ ತೊಟ್ಟು, ಬಾಸ್ ಹೇಳಿದ್ದು ನೆನಪಾಗಿ ಆ ಬಟ್ಟೆ ಬಿಸಾಡಿ ಯಾವುದೋ ಲೈಟ್ ಕಲರ್ ಬಟ್ಟೆ ಧರಿಸಿ, ಮುಖಕ್ಕೆ ಸ್ನೋ ಹಾಕಿ ತಲೆ ಕೆರೆದು, ಪರ್ಸ್, ಮೊಬೈಲ್, ಕರ್ಚೀಫ್, ಬ್ಯಾಗು ತೆಗೆದುಕೊಂಡು ರೂಮಿನ ಬಾಗಿಲಿನ ಬಾಯಿಗೆ ಬೀಗ ಜಡಿದು ಅಬ್ಬಾ! ಎಂದು ನಿಟ್ಟುಸಿರು ಬಿಟ್ಟೆ. ಹತ್ತು ಹೆಜ್ಜೆ ಹಾಕಿಲ್ಲ, ಅಯ್ಯೋ! ಹೆಲ್ಮೆಟ್ ತೆಗೆದುಕೊಳ್ಳಲಿಲ್ಲ, ಮತ್ತೆ ಚಿಲಕ ಕಿಲ ಕಿಲ ನಕ್ಕಿತು. ಯಾವುದೋ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ಹೆಲ್ಮೆಟ್ ಒಳಗೆ ನನ್ನ ತಲೆ ಸಿಕ್ಕಿಸಿಕೊಂಡು ಹೊರಟೆ.

ಓಡುತ್ತ ಮೂರನೇ ಮಹಡಿಯಿಂದ ಮೆಟ್ಟಿಲಿಳುಗಿ ಕೆಳಗೆ ಬಂದು ನನ್ನ ಬೈಕಿನ ಮೇಲೆ ಕೂರುವಷ್ಟರಲ್ಲಿ ಬೆವೆತುಹೋದೆ. ಬೈಕಿನ ಅಂಗಾಗಗಳು ಕೆಲಸ ಮಾಡಲು ತಯಾರಾದವು. ಅಷ್ಟಕ್ಕೆ ನನ್ನ ಮುಂದೆ ಸ್ವಲ್ಪ ಬಲಕ್ಕೆ ನಿಂತಿದ್ದ ವ್ಯಕ್ತಿ ನನ್ನನ್ನೇ ನೋಡಿ ನಕ್ಕ. ನಾನು ನಕ್ಕೆ. ಆತ ಏನೋ ಹೇಳಿದ, ಆದರೆ ಈ ಪೇಪರ್ ಹುಡುಗ ‘ಸಾ, ನೀವು ಮೂರ್ತಿಂಗ್ಳಿಂದ ದುಡ್ಡು ಕೊಟ್ಟಿಲ್ಲ’ ಎಂದು ಖ್ಯಾತೆ ತೆಗೆದ. ಅವನೊಡನೆ ಚೌಕಾಶಿ ಮಾಡಿ ದುಡ್ಡು ಕೊಟ್ಟು ಹೋಗುವ ಅವಸರದಲ್ಲಿ ಆ ವ್ಯಕ್ತಿಯನ್ನು ಮಾತನಾಡಿಸಲಾಗಲೇ ಇಲ್ಲ. ಯಾಂತ್ರಿಕವಾಗಿ ಗಾಡಿ ಓಡಿಸುತ್ತಿದ್ದರು, ನನ್ನನ್ನು ನೋಡಿ ನಕ್ಕ ಆ ವ್ಯಕ್ತಿಯ ಎಲ್ಲೋ ನೋಡಿದ್ದೇನಲ್ಲ ಎಂದೆನಿಸಿತು. ನೆನಪಿಸಿಕೊಳ್ಳಲು ಬಹಳ ತಡಕಾಡಿದೆ, ಆ! ಅವರೇ! ಅನ್ನಿಸುತ್ತಿತ್ತು, ಇದ್ದಕ್ಕಿದ್ದಂತೆ ಅವರಲ್ಲ ಎನಿಸಿಬಿಡುತ್ತಿತ್ತು.

ಕೊನೆಗೂ ಸರಿಯಾದ ಸಮಯಕ್ಕೆ ಆಫೀಸ್ ಮುಟ್ಟಿದೆ. ಆಫೀಸ್ ನಲ್ಲಿ ಕೆಲಸ ಯಾರಿಗೆ ಕಡಿಮೆ ಇರುತ್ತದೆ ಹೇಳಿ. ಹೊಸ ಹೊಸ ಉದ್ಯೋಗಿಗಳು ಬರುತ್ತಿರುತ್ತಾರೆ. ಕೆಲಸ ಮಾತ್ರ ನದಿ ನೀರು ಸಮುದ್ರಕ್ಕೆ ಸೇರುತ್ತಿರುವಂತೆ ಬೆಳೆಯುತ್ತಿರುತ್ತದೆ. ಯಾವುದಾವುದೋ ಫೈಲ್ ಗಳನ್ನು ತೆಗೆದೆ, ಕೂಡಿದೆ, ಗುಣಿಸಿದೆ, ಯಾರ್ಯಾರಿಗೋ ಫೋನ್ ಮಾಡಿದೆ. ಕೆಲವರಿಗೆ ರೇಗಿದೆ, ಮನಸ್ಸು ಕೆಡಿಸಿಕೊಂಡೆ. ಏನೋ ತಪ್ಪು ಮಾಡಿ ಬಾಸ್ ಛೇಂಬರ್ ನಲ್ಲಿ ಒಂದೆರಡು ಬಾರಿ ಮಂಗಳಾರತಿ ಮಾಡಿಸಿಕೊಂಡೆ. ಆ ಕೋಪವನ್ನು ಅಟೆಂಡರ್ ಮೇಲೆ ಹಾಕಿ ಹಗುರಾದೆ.

ನನ್ನ ಎಡಕ್ಕೆ ಕುಳಿತುಕೊಳ್ಳುವ ವ್ಯಕ್ತಿಯ ಹೆಸರು ನರೇಂದ್ರ, ಅನುಭವಸ್ಥ. ಯಾವ ಜಾತಿ ಧರ್ಮಕ್ಕೂ ಅಂಟಿಕೊಳ್ಳದೇ ಕೇವಲ ಮಾನವೀಯತೆಯನ್ನು ಪ್ರೀತಿಸುವ ಜೀವ. ಬಲಕ್ಕೆ ಕುಳಿತವ ರಾಘವೇಂದ್ರ. ನನಗಿಂತ ಚಿಕ್ಕವನಾದರೂ ಕೆಲಸದಲ್ಲಿ ಚುರುಕು, ಮಾತಿನಲ್ಲಿ ಪಟ ಪಟ. ಆತ ಮಾತನಾಡುತ್ತಿದ್ದರೆ ನಕ್ಕು ನಕ್ಕು ಸುಸ್ತಾಗುತ್ತದೆ. ಅಷ್ಟು ಹಾಸ್ಯಪ್ರಜ್ಞೆಯುಳ್ಳವನು.

ಈ ನರೇಂದ್ರರವರು ಕೆಲಸ ಮಾಡುವುದಕ್ಕಿಂತ ದಿನಪತ್ರಿಕೆಗಳನ್ನು ಒಂದು ಕಡೆಯಿಂದ ಮೆಲ್ಲುವುದರಲ್ಲಿ ಸಮಯ ಕಳೆದುಬಿಡುತ್ತಾರೆ. ಈಗ ಮೂವರು ಬಂದಂತೆ ಆಗಾಗ ಟೀ ಕುಡಿಯಲು ಕ್ಯಾಂಟೀನ್ ಗೆ ಮೂವರು ಬರುತ್ತಿರುತ್ತೇವೆ.

ನೀಮ್ಮ ಊಹೆ ಸರಿ, ನರೇಂದ್ರರವರಿಗೆ ಶುಗರ್‍ಲೆಸ್ ಟೀ. ಈಗ ನರೇಂದ್ರರವರದು ಕ್ಯಾಂಟಿನಲ್ಲಿರುವ ಪೇಪರ್ ಓದುವ ಕೆಲಸ. ರಾಘವೇಂದ್ರ ಸುಮ್ಮನೆ ನಗಲು ಪ್ರಾರಂಭಿಸಿದ. ನರೇಂದ್ರ ಮತ್ತು ನಾನು ಆತನ ನಗು ನಿಲ್ಲುವವರೆವಿಗೂ ಕಾದು ಕೊನೆಗೂ ಕಾರಣ ಕೇಳಿದನು. ಆತ ದಿನಪತ್ರಿಕೆ ನೋಡಿಕೊಂಡು ನಗುತ್ತಿದ್ದ.

‘ಸತ್ತವನು ಎದ್ದು ಬಂದ’ ಎಂಬ ಶೀರ್ಷಿಕೆಯ ನೋಡಿ ಆತ ವ್ಯಂಗ್ಯವಾಗಿ ನಗುತ್ತಿದ್ದ. ವರ್ತಮಾನದ ಆತನ ಹೊಂದಾಣಿಕೆಯನ್ನು ನಾನು ಮೆಚ್ಚುತ್ತೇನೆ. ಆದರೆ ನರೇಂದ್ರ ಆ ರೀತಿಯಲ್ಲ. ನಾನೋ ವಿಜ್ಞಾನ ಓದಿದ ವಿದ್ಯಾರ್ಥಿಯಾದ್ದರಿಂದ ಅಲ್ಪ ಸ್ವಲ್ಪ ಬುರುಡೆ ಬಿಟ್ಟೆ.

‘ಅದರಲ್ಲಿ ನಗುವಂತದ್ದೇನಿದೆ ರಾಘು, ಕೆಲವೊಮ್ಮೆ ಮೆದುಳು ಮತ್ತು ಹೃದಯ ಅಲ್ಪ ಸ್ವಲ್ಪ ಕೆಲಸ ಮಾಡುವುದನ್ನು ಕಂಡು ಹಿಡಿಯಲು ಡಾಕ್ಟರ್ ಗಳು

ಮೆಷಿನ್ ಗಳು ಸೋಲಬಹುದು. ಆಗ ಆತ ಸತ್ತೇಹೋದ ಎಂದು ಹಠಾತ್ತನೇ ತೀರ್ಮಾನಿಸಿಬಿಡುತ್ತಾರೆ. ಆದರೆ, ಆತನೊಳಗಿನ ಜೀವ ಇನ್ನೂ ಮಿಡುಕಾಡುತ್ತಿರುತ್ತದೆ. ನೀನು ಹೃದಯವನ್ನು ನೋಡಬಹುದು, ಮೆದುಳನ್ನೂ. ಆದರೆ, ಜೀವವನ್ನಲ್ಲ’ ಎಂದೊಡನೆ ನರೇಂದ್ರರವರು ಜಾಗೃತರಾದರು.

ನರೇಂದ್ರ: ‘ಹೌದು ಈ ಪ್ರಪಂಚದಲ್ಲಿ ಎಷ್ಟೋ ವಸ್ತುಗಳು ಕಾಣದೇ ಸುಪ್ತವಾಗಿವೆ. ಶಾಂತಚಿತ್ತ ಮನಸ್ಸುಗಳಿಗೆ ಅವು ಕಾಣಸಿಗುತ್ತವಂತೆ. ನಿನ್ನ ವಿಜ್ಞಾನವೇ ಎಲೆಕ್ಟ್ರೋನ್, ಪ್ರೋಟೋನ್, ನ್ಯೂಟ್ರಾನ್ ನನ್ನು ನೋಡಿಲ್ಲ, ಆದರೆ ಅದರಿಂದ ಎಷ್ಟೋ ಕೆಲಸ ಮಾಡಿಸಿಲ್ಲವೇ? ಬಾಂಬ್ ಎಸೆದು ಅಮಾಯಕರನ್ನು ಕೊಂದಿಲ್ಲವೇ. ಈಗ ನೀನೆ ಹೇಳಲಿಲ್ಲವೇ ಜೀವ ಕಾಣುವುದಿಲ್ಲವೆಂದು, ಆ ಜೀವವೆಂದರೇನೋ’

ಇಂಥಹ ಆಧಾರವಿರದ ವಿಚಾರಗಳನ್ನು ನಂಬದ ನಾನು ಇಂಥಹ ವಿಚಾರ ಬಂದಾಗ ನರೇಂದ್ರರವರ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಯಾಕೆಂದರೆ ಇದೊಂದು ಜಿಜ್ಞಾಸೆ, ಆತ ಇದೆ ಎಂದರೆ ನಾ ಇಲ್ಲ ಎನ್ನುವೆ. ಆದರೆ ‘ಕಾಣದ ಗಾಳಿಯನ್ನು ವಿಜ್ಞಾನಿಗಳು ಭೇದಿಸಿಲ್ಲವೇ, ಇಷ್ಟಿಷ್ಟೇ ಅಣುಕಣಗಳಿವೆ ಎಂದು ಹೇಳಿಲ್ಲವೇ, ಅಲ್ಲಿರುವ ಶಕ್ತಿಗೆ ಫ್ರೇಮ್ ಹಾಕಿದ ಮನುಷ್ಯ ಇದನ್ನು ಸವಿಯುವ ಬದಲು, ದೇವರು, ಧರ್ಮ ತಂದು ದಳ್ಳುರಿಯನ್ನಿಟ್ಟುಬಿಟ್ಟ, ಥೂ’ ಎನ್ನುತ್ತಿದ್ದ ಅವರ ಮಾತು ನನಗೆ ಪಥ್ಯವಾಗುತ್ತಿತ್ತು.

ಕೆಲಸ ಮುಗಿಸಿ ವಾಪಾಸ್ಸಾಗುವ ದಾರಿಯಲ್ಲಿಯೇ ಅಕ್ಕನ ಮನೆಯಿದೆ. ಅಕ್ಕನ ಮನೆಗೆ ಹೋಗಿ ಟೀ ಕುಡಿದು ಮಕ್ಕಳಿಗೆ ಏನಾದರೂ ಕೊಡಿಸುವುದು ನನ್ನ ವಾಡಿಕೆ. ಇಂದು ಅಕ್ಕನ ಮನೆ ಝಗಮಗಿಸುತ್ತಿತ್ತು. ಮೊದಲ ಮಗಳ ಹುಟ್ಟುಹಬ್ಬ. ‘ಅವಳು ಹುಟ್ಟುವ ಮೊದಲು ಎಲ್ಲಿದ್ದಳು’ ಎಂದು ನರೇಂದ್ರ ಪಕ್ಕದಲ್ಲಿಯೇ ನಿಂತು ಮಾತನಾಡಿದಂತಾಗಿ ಬೆಚ್ಚಿದೆ. ಕೇಕು ತಿಂದದ್ದಾಯಿತು. ಟೀ ಕುಡಿದದ್ದಾಯಿತು. ಹೋಗುವ ಮುಂಚೆ ಮಕ್ಕಳಿಗೆ ತಮ್ಮ ಓದಿನಲ್ಲಿ ಏನಾದರೂ ಸಂದೇಹವಿದ್ದರೆ ಪರಿಹರಿಸಿಹೋಗುವುದು ನನ್ನ ಮತ್ತೊಂದು ವಾಡಿಕೆ. ಆ ಮಕ್ಕಳಿಗೆ ಏನಾದರೂ ಸಂದೇಹಗಳಿದ್ದರೆ ಅದನ್ನು ಅವರಿಗೆ ಅರ್ಥ ಮಾಡಿಸುವುದು ನನಗೆ ಇನ್ನಿಲ್ಲದ ಕಿರಿಕಿರಿ. ಕೊನೆಗೂ ಎರಡನೇ ಮಗಳು 'A triangle is a closed diagram bounded by three lines’ ಇದರ ಅರ್ಥ ಹೇಳಿಕೊಡು ಎಂದಳು.

‘ನೋಡು ಪುಟ್ಟ, ಈ ತ್ರಿಭುಜದಲ್ಲಿ ಒಟ್ಟು ಎಷ್ಟು ಗೆರೆಗಳಿವೆ’

‘ಮೂರು’

‘ಆ ಮೂರು ಗೆರೆಗಳು ಒಟ್ಟಿಗೆ ಕೂಡಿ ಒಂದು ಆವೃತ ಇಲ್ಲ ಮುಚ್ಚಿದ ರೇಖಾಚಿತ್ರ ತಯಾರಾಗಿಲ್ಲವೇ?’

‘ಹೂಂ...’

‘ಅದನ್ನೇ ತ್ರಿಭುಜ ಇಲ್ಲ Triangle ಎನ್ನುವುದು’

ಎಷ್ಟು ಅರ್ಥವಾಯಿತೋ ಇಲ್ಲವೋ ಅರಿಯೇ ಸುಮ್ಮನೇ ತಲೆ ಆಡಿಸಿ ‘ಈ ತ್ರಿಭುಜ ಕಂಡುಹಿಡಿದವರು ಯಾರು?’ ಎಂದಳು. ನರೇಂದ್ರರವರಿಗೆ ಸಡ್ಡು ಹೊಡೆಯುವಂತೆ ‘ನಾವೇ ಪುಟ್ಟು, ಮನುಷ್ಯರು’ ಎಂದೆ.

‘ಹಾಗಾದರೆ, ಯಾವುದೇ ತ್ರಿಭುಜದೊಳಗಿರುವರ ಮೂರು ಕೋನಗಳ ಮೊತ್ತ 180 ಡಿಗ್ರಿಯಾಗಿರುತ್ತದೆ, ಅದನ್ನು ಕಂಡು ಹಿಡಿದವರು ಯಾರು’ ಎಂದು ಬಿಟ್ಟಳು.

ಮತ್ತೆ ನರೇಂದ್ರ ನನ್ನ ಮುಂದೆ ಗಹಗಹಿಸಿ ನಗುತ್ತಿರುವಂತೆ ಕಂಡರು. ‘ಅದು, ಅದು ಮೊದಲೇ ಇತ್ತಮ್ಮ’ ಎಂದೆ. ಆ ಮಗುವಿಗೆ ಅರ್ಥವಾಗಲಿಲ್ಲ.

ಗಾಡಿ ಓಡಿಸಿಕೊಂಡು ಮನೆಗೆ ಬರುವಾಗ ದೊಡ್ಡದೊಂದು ಜಿಜ್ಞಾಸೆ ಎದೆಗಂಟಿಕೊಂಡಿತು. ಈ ಪ್ರಪಂಚದಲ್ಲಿ ಸುಪ್ತವಾಗಿ ಅನೇಕ ವಸ್ತುಗಳಿವೆಯೇ? ಆ ಮಗು ಕೇಳಿದ ಪ್ರಶ್ನೆ ನೆನಪಾದಾಗ ಪೈಥಾಗೊರಾಸ್ ಪ್ರಮೇಯ ಪೈಥಾಗೊರಾಸ್ ಹೇಳುವ ಮುಂಚೆಯೂ ಇತ್ತು ಅಲ್ಲವೇ ಅನ್ನಿಸಿ ನರೇಂದ್ರರವರ ಕಡೆಗೆ ವಾಲುತ್ತಿದ್ದೇನೆ ಎನಿಸಿ ನಾಳೆ ಅವರೊಡನೆ ಒಂದು ವಾಗ್ವಾದವೇ ನಡೆಯಬೇಕು ಎಂದು ತೀರ್ಮಾನಿಸಿ ಮನೆಯ ಬಳಿ ಬಂದಾಗ ಆಶ್ಚರ್ಯ. ಬೆಳಗ್ಗೆ ನನ್ನನ್ನು ನೋಡಿ ನಕ್ಕ ವ್ಯಕ್ತಿ

ಅಲ್ಲೇ ನಿಂತಿದ್ದಾನೆ. ಮತ್ತೆ ನನ್ನನ್ನು ನೋಡಿ ನಕ್ಕ.

‘ನೀವ್ಯಾರು, ನನ್ನಿಂದೇನಾಗಬೇಕು?’

ಆತ ಏನೋ ಹೇಳಬೇಕು, ಅಷ್ಟಕ್ಕೆ ಈ ಹಾಳು ಬೆಂಗಳೂರಿನಲ್ಲಿ ಎಂದಿನಂತೆ ಪಾರ್ಕಿಂಗ್ ಗೆ ಜಗಳ ಪ್ರಾರಂಭವಾಯಿತು. ‘ನಾ ಅಷ್ಟು ಹೇಳಿದರು ನನ್ನ ಮನೆಯ ಮುಂದೆ ಗಾಡಿ ನಿಲ್ಲಿಸಬೇಕೆ’ ಎಂದು ಹೆಂಗಸೊಬ್ಬಳು ಮೆಲೆಗರಿ ಬಂದಳು. ‘ನಿನ್ನ ತಕರಾರೇನಿದ್ದರೂ ಓನರ್ ಬಳಿ ಇರಲಿ, ನನ್ನ ಬಳಿ ಅಲ್ಲ’ ಎಂದವನೇ ಸುಮ್ಮನೇ ನನ್ನ ರೂಮಿಗೆ ಹೊರಟುಬಿಟ್ಟೆ.

ಯಾವುದೇ ವಿಚಾರವಾಗಲಿ, ಅದನ್ನು ನಾವು ಜಾಲಾಡಿದಷ್ಟು ಹೊಸ ಹೊಸ ಅನ್ವೇಷಣೆಯ ಹಾದಿಗಳು ಸಿಗುತ್ತವೆ. ಆ ಹಾದಿಯಲ್ಲಿ ಎಷ್ಟೋ ಕವಲುದಾರಿಗಳಿರುತ್ತವೆ ಎಂದು ಯೋಚಿಸುತ್ತ ಯೋಚಿಸುತ್ತ ನಿದ್ದೆಗೆ ಜಾರಿದ ನನಗೆ ಎಚ್ಚರವಾದದ್ದು ಕಿಟಕಿಯಿಂದ ಯಾರೋ ನೀರೆರೆಚಿದಾಗ. ಕನವರಿಸಿ, ಕಂಗೆಟ್ಟು ಎದ್ದ ನನಗೆ ಆಶ್ಚರ್ಯವಾಯಿತು. ಭಯಂಕರ ಮಳೆ, ಇಡೀ ಪ್ರಪಂಚವೇ ಚೀರುತ್ತಿರುವಂತೆ. ಕಳೆದ ಹತ್ತು ವರ್ಷದಲ್ಲಿ ನಾ ಕಂಡಿರದ ಮಳೆ. ಬಿರುಗಾಳಿ ಸಹಿತ! ಮಳೆಗಾಳಿಗೆ ಸಿಲುಕಿದ ತರಗೆಲೆ ವಿಳಾಸವಿಲ್ಲದ ಜಾಗಕ್ಕೆ ತೂರಲ್ಪಡುತ್ತಿವೆ.

ಹೊರ ಬಂದವನೇ ಮಳೆ ಇಳೆಯ ಮಿಲನದಾಟವ ಸವಿಯುತ್ತ ನಿಂತುಕೊಂಡೆ. ಆಶ್ಚರ್ಯ! ಇದು ನಿಜಕ್ಕೂ ಆಶ್ಚರ್ಯ. ನನಗೆ ಗಾಬರಿಗೊಳ್ಳುವ ವಿಚಾರ. ನನ್ನ ವಿರುದ್ಧ ಏನಾದರೂ ಪಿತೂರಿ ನಡೆಯುತ್ತಿದೆಯೇ? ನನ್ನನ್ನು ನೋಡಿ ನಕ್ಕು ಮಾತನಾಡಿಸಿದ ಆ ವ್ಯಕ್ತಿ ಮಳೆಯಲ್ಲಿ ನೆನೆಯುತ್ತ ಅಲ್ಲೇ ನಿಂತಿದ್ದಾನೆ. ಕ್ಷಣ ದಿಗಿಲುಗೊಂಡೆ. ಮನೆಯೊಳಗೆ ಕರೆಯೋಣವೆಂದರೆ, ಇಂತಹ ಪಟ್ಟಣಗಳಲ್ಲಿ ಅಪರಿಚಿತರನ್ನು ಒಳಗೆ ಸೇರಿಸುವುದು ಶ್ರೇಯವಲ್ಲ. ಆತ ಒದ್ದೆಯಾದ ಬಟ್ಟೆಯನ್ನು ಹಿಂಡಿಕೊಳ್ಳುವುದು ನೋಡಲಾಗದೆ ಕೊಡೆಯನ್ನು ಕೊಡಲು ಮುಂದಾದೆ. ಆತ ‘ಬೇಡ’ ಎಂದು ಕೈ ಆಡಿಸಿದ. ರೂಮಿನ ಒಳಗೆ ಬರುವುದೇ ಆತನ ಗಮ್ಮತ್ತೇ ಇರಬಹುದು ಎಂದುಕೊಂಡು ಒಳಬಂದು ಭದ್ರವಾಗಿ ಬಾಗಿಲ ಚಿಲಕ ಹಾಕಿಕೊಂಡೆ. ಆ ರಾತ್ರಿ ಯಾಕೋ ಮತ್ತೆ ನಿದ್ದೆ ಹತ್ತಲಿಲ್ಲ.

ಬೆಳಕು ಕರೆದಾಗ ಹೊರಬಂದು ಬಗ್ಗಿ ನೋಡಿದಾಗ ಆತ ಒದ್ದೆಬಟ್ಟೆಯಲ್ಲಿ ಅಲ್ಲೇ ನಿಂತಿದ್ದ. ನನಗೇಕೋ ಭಯವಾಯಿತು. ಇಷ್ಟು ದೊಡ್ಡ ಕಟ್ಟಡದಲ್ಲಿರುವವರಲ್ಲಿ ನನ್ನನ್ನೇ ಆತ ಗುರಿಯಾಗಿಟ್ಟುಕೊಂಡಿದ್ದಾನೆ ಎಂದು ಹೇಗೆ ಹೇಳಲಿ?

ಯಥಾಪ್ರಕಾರವಾಗಿ ತಯಾರಾಗಿ ಹೊರಡುವಾಗ ಆತ ಮತ್ತೆ ನಕ್ಕ. ನಾನು ‘ಅಲ್ಲಾರಿ, ನೀವು...’ ಎಂದು ಏನೋ ಹೇಳುವಷ್ಟರಲ್ಲಿ ಆತ ಟೈಮಾಗಿದೆ ಹೊರಡಿ ಎಂದು ಸನ್ನೆ ಮಾಡಿದ.

ಗಾಡಿ ಓಡಿಸುವಾಗ ಯಾಕೋ ಗೊಂದಲಗಳು ಜಾಸ್ತಿಯಾಗಿ ಇಂದು ನರೇಂದ್ರರವರ ಜೊತೆ ಸರಿಯಾದ ಚರ್ಚೆ ಮಾಡಲೇಬೇಕೆಂದೆನಿಸಿ ಗಾಡಿಯ ವೇಗ ಹೆಚ್ಚಿಸಿದೆ.

ಗಾಡಿಯ ವೇಗ ಹೆಚ್ಚಿಸಿದವನಿಗೆ ಈ ರೀತಿಯ ಗಾಬರಿಯ ವಿಚಾರ ಮುಖ ಕೊಡುತ್ತದೆ ಎಂದು ನಂಬಿರಲಿಲ್ಲ. ಆಫೀಸ್ ನ ಮೆಟ್ಟಿಲೇರುವಾಗ ನರೇಂದ್ರರವರು ತೀವ್ರ ಹೃದಯಾಘಾತಕ್ಕೀಡಾಗಿ ಸ್ಥಳದಲ್ಲೇ ಸತ್ತುಹೋಗಿದ್ದರು. ತುಂಬಾ ಗಾಬರಿಯಾಗಿ, ಆದರೆ ಅಷ್ಟೇ ಗಂಭೀರವಾಗಿ ನರೇಂದ್ರರ ಮುಖ ನೋಡಿದೆ. ನಿಶ್ಚಲ! ಅವರ ಕೈ ಹಿಡಿದು ಅಲುಗಾಡಿಸಿದೆ. ಏನೂ ಇಲ್ಲ! ನಿನ್ನೆ ನಮ್ಮೊಂದಿಗಿದ್ದ, ನಮ್ಮ ಹೆಸರನ್ನೆಲ್ಲ ಕರೆದ, ಮಾತನಾಡಿದ ಆ ಚೈತನ್ಯ ಎಲ್ಲಿ? ಮತ್ತೆ ನನ್ನ ವಿಜ್ಞಾನ ನೆನಪಾಯಿತು. ಇದು ಸಾವು. ಸಾವೆಂದರೆ ಈ ದೇಹದ ಜೀವಕೋಶಗಳ ಕಾಲಕಾಲದ ಸಾವಕಾಶ ಅವಸಾನ. ಇಲ್ಲಿ ಹೃದಯಸ್ತಂಭನವಾಗಿದೆ ಅಷ್ಟೆ. ಸಾವಿಗಿರುವ ಸಾವಿರ ದಾರಿಯಲ್ಲಿ ಇದೂ ಒಂದು.

ನರೇಂದ್ರರವರನ್ನು ಸ್ಮಶಾಣದಲ್ಲಿ ಬೀಳ್ಕೊಟ್ಟು ಮನೆಗೆ ಬಂದಾಗ ಆ ವ್ಯಕ್ತಿ ಅಲ್ಲೇ ಇದ್ದ. ದಾರಿಯುದ್ದಕ್ಕೂ ನರೇಂದ್ರರವರೊಡಗಿನ ಹತ್ತು ವರ್ಷದ ಒಡನಾಟ ನೆನಪಿಸಿಕೊಂಡು ಸ್ವಲ್ಪ ಭಾರಗೊಂಡಿದ್ದೆ. ಸುಮ್ಮನೆ ರೂಮಿನ ಕಡೆಗೆ ಕಾಲಿಟ್ಟೆ. ಅಷ್ಟಕ್ಕೆ ಪಕ್ಕದ ಮನೆಯವರು ಎದುರಾದರು. ಕುತೂಹಲ, ತಡೆಯಲಾಗದೆ

‘ಅಲ್ಲಿ, ಆ ತೆಂಗಿನಮರದ ಪಕ್ಕ, ಆ ವ್ಯಕ್ತಿ ಸುಮಾರು ಎರಡು ದಿನಗಳಿಂದ ನಿಂತಲ್ಲೇ ನಿಂತಿರುವನು, ನಿಮಗೇನಾದರೂ ಪರಿಚಯವೇ?’

ಅವರ ಕತ್ತು ಬಗ್ಗಿಸಿ ನೋಡಿದರು ‘ಎಲ್ಲಿ? ಯಾರೂ ಇಲ್ಲವಲ್ಲ’ ಎಂದುಬಿಟ್ಟರು.

'ಅದೇ, ಆ ಮರದ ಪಕ್ಕ, ನನಗೆ ಕಾಣುತ್ತಿದ್ದಾನೆ'

'ಯಾರೂ ಇಲ್ಲವಲ್ಲ'

ಒಳಬಂದವನೇ ಧಡಾರನೇ ಬಾಗಿಲ ಹಾಕಿಕೊಂಡೆ. ಅಪ್ಪನ ಫೋಟೋ ನಗುತ್ತಿತ್ತು. ಆತ, ನಿನ್ನೆ ಕನಸ್ಸಿನಲ್ಲಿ ಬಂದು ಅಮ್ಮನಿಗೆ ದುಡ್ಡು ಕಳುಹಿಸಲು ಕೇಳಿಕೊಂಡಿದ್ದ.