(ನಮ್ಮ ಕಾರಿನ ಪ್ರಯಾಣ--ಕಾರಾಯಣ.)
ಕಾಲಿದ್ದಾಗಲೇ ನಿಲ್ಲದ ಪಯಣ , ಕಾರಿದ್ದಾಗ ನಿಂತೀತೇ..
ಹೊಸದಾಗಿ ಕೊಂಡ ಕಾರಿನ ಜೊತೆಗೆ ಮಗನಿಗೆ ಸಿಕ್ಕ 15 ದಿನಗಳ ರಜವನ್ನು ಸದುಪಯೋಗ ಮಾಡಿಕೊಳ್ಳಲೆಂದೇ ನಾವು ಅಂದುಕೊಂಡಿದ್ದು ಒಂದು ಲಾಂಗ್ ಡ್ರೈವ್... ನಿತ್ಯ ಜೀವನದ ಪರಧಿಯ ಆಚೆ ಎಲ್ಲಿಗಾದರೂ ಹೋಗಬಯಸಿದ ನಮಗೆ ಹೊಳದಿದ್ದು, ಪ್ರಕೃತಿಯ ಮಡಿಲು ಹಾಗೂ ಇನ್ನೂ ನೋಡಲಾಗದೆ ಇರುವ ದೇವಸ್ಥಾನಗಳು.. ನಾವು ಎಷ್ಟೇ ಬೆಳೆದು ದೊಡ್ಡವರಾದರೂ ನಮಗೆ ಹೊಸತನ್ನು ನೀಡಿ ಮನಕ್ಕೆ ಶಾಂತಿಯನ್ನು ನೀಡುವುದು ಈ ಪ್ರಕೃತಿಯ ಮಡಿಲಲ್ಲಿರುವ ದೇವಸ್ಥಾನಗಳೇ,... ಹಾಗಾಗಿ ತುಂಬಾ ದೂರಾಲೋಚನೆ ಇಲ್ಲದೆ ಮುಖ್ಯವಾದ ಸ್ಥಳಗಳಲ್ಲಿರುವ, ದಾರಿಯಲ್ಲಿ ಸಿಕ್ಕುವ ಹಾಗು ನೋಡದೆ ಇರುವ ಸ್ಥಳಗಳನ್ನು ವೀಕ್ಷಿಸಬೇಕೆಂದು ನಾಲ್ಕರಿಂದ ಐದು ದಿನಗಳ ಸಣ್ಣ ರೋಡ್ ಮ್ಯಾಪ್ ನೊಂದಿಗೆ ನಮ್ಮ ಪಯಣವನ್ನು ಅಕ್ಟೋಬರ್ 17ರಂದು ಶುರು ಮಾಡಿಕೊಂಡೆವು.
ಅಕ್ಟೋಬರ್ -17th-6 AM. ಬ್ಯಾಂಗಲೋರ್ ಟು ಹೊರನಾಡು.
ಮುಂಜಾನೆಯ ಮಂಜಿನೊಂದಿಗೆ ಬೆಂಗಳೂರಿನ ಗಡಿ ದಾಟಿದ ನಮಗೆ ಹೈವೇ ಡ್ರೈವ್ನ ಸೂರ್ಯೋದಯದ ನೋಟಕ್ಕೆ ಸಾತ್ ಕೊಟ್ಟಿದ್ದು ಇಂಪಾದ ಹಾಡುಗಳು... ಎಂಟು ಮೂವತ್ತರ ಹೊತ್ತಿಗೆ ಹಾಸನ ತಲುಪಿದಾಗ ನಮ್ಮ ಹೊಟ್ಟೆ ಚುರುಗುಟ್ಟುತ್ತಿತ್ತು. ಹೆಚ್ ವಿ ಆರ್ ನಲ್ಲಿ ಮುಗಿಸಿದ ಬ್ರೇಕ್ ಫಾಸ್ಟ್, ನಾಲಿಗೆ ರುಚಿಯ ಜೊತೆಗೆ ನಮ್ಮ ಹಸಿವನ್ನೂ ತಣಿಸಿತ್ತು. ಅಲ್ಲಿ ಸಿಕ್ಕ ಗೆಳೆಯನೊಡನೆ ಕಾಫಿ ಕುಡಿದು ನಮ್ಮ ಪಯಣ ಮುಂದುವರಿಸಿದಾಗ ಗಂಟೆ 10:30. ದಾರಿಯಲ್ಲಿ ಗೊರೂರು ಡ್ಯಾಮ್, ಬೇಲೂರುಗಳಿದ್ದರೂ, ನೀರಿಲ್ಲದ ಕಾರಣ ಗೊರೂರು ಡ್ಯಾಮ್ ಅನ್ನು, ಈಗಾಗಲೇ ನೋಡಿದ್ದರಿಂದ ಬೇಲೂರನ್ನು ಸ್ಕಿಪ್ ಮಾಡಿ ನಮ್ಮ ಪಯಣವನ್ನು ಮುಂದುವರಿಸಿದೆವು...ಮೂಡಿಗೆರೆ ಕೊಟ್ಟಿಗೆಹಾರದ ದಾರಿಯನ್ನು ಪ್ರವೇಶಿಸಿದ ಕೂಡಲೇ ನಮ್ಮ ಕಣ್ಮನ ಸೆಳೆದಿದ್ದು ನೋಡಿದಷ್ಟು ತಣಿಯದ ಪ್ರಕೃತಿಯ ಸುಂದರ ನೋಟಗಳು... ಕೆಲವೇ ದಿನಗಳ ಹಿಂದೆ ಮಳೆ ಬಂದಿದ್ದರಿಂದ ಪ್ರಕೃತಿ ಮಾತೆಯು ಹಸಿರಿನಿಂದ ಕಂಗೊಳಿಸುತ್ತಿದ್ದಳು... ನಮ್ಮ ಪಯಣವನ್ನು ಇನ್ನಷ್ಟು ಸುಗಮಗೊಳಿಸಲು ಸ್ವಲ್ಪ ಹೊತ್ತು ಮಳೆಯೂ ನಮ್ಮೊಡನೆ ಪಯಣಿಸಿ ವಾತಾವರಣವನ್ನು ತಂಪಾಗಿಸಿತು...
ಬಿಸಿಲು-ಮಂಜಿನ ಸಮ್ಮಿಳನದ ಬೆಟ್ಟಗಳ ಸಾಲು , ಅಲ್ಲಲ್ಲಿ ಧುಮ್ಮಿಕ್ಕುತ್ತಿದ್ದ ಸಣ್ಣ ಸಣ್ಣ ಝರಿಗಳ ದೃಶ್ಯವಂತೂ ಅದ್ಭುತವಾಗಿತ್ತು... ಇವುಗಳನ್ನು ಕಣ್ಣಿನಲ್ಲಿ ತುಂಬಿಕೊಂಡು, ಮಗನ ಡ್ರೈವ್ ಸ್ಕಿಲನ್ನೂ ಎಂಜಾಯ್ ಮಾಡಿಕೊಂಡು, ಕೊಟ್ಟಿಗೆಹಾರದಲ್ಲಿ ಹೊರನಾಡಿನ ರಸ್ತೆಗೆ ಟರ್ನ್ ತೆಗೆದುಕೊಂಡಾಗ ಹೊಳೆದಿದ್ದು ದಕ್ಷಿಣ ಕಾಶಿ ಎಂದು ಕರೆಯುವ ಕಳಸೇಶ್ವರ ದೇವಸ್ಥಾನವನ್ನು ನೋಡಬೇಕೆಂದು. ಹೇಗೂ ಹೊರನಾಡಿನ ದಾರಿಯಲ್ಲೇ ಇದ್ದುದ್ದರಿಂದ, ಮಧ್ಯಾಹ್ನ ಒಂದು ಗಂಟೆಗೆ ಆ ದೇವಸ್ಥಾನವನ್ನು ತಲುಪಿದೆವು....
ನಿಜಕ್ಕೂ ಅದ್ಭುತವಾದ ಸ್ಥಳ...ದೇವರ ದರ್ಶನದೊಡನೆ ಪುಷ್ಕಳವಾದ ಭೋಜನದಪ್ರಸಾದವು ಪ್ರಾಪ್ತಿಯಾಯಿತು. ಸ್ವಲ್ಪ ಹೊತ್ತು ಅಲ್ಲೇ ವಿರಮಿಸಿ ಇನ್ನೇನು ಹೊರಡಬೇಕೆಂದು ಕಾರಿನ ಬಳಿ ಬಂದಾಗ ಅಲ್ಲಿನ ಒಬ್ಬ ಸ್ಥಳೀಯರು ತಿಳಿಸಿದ ಮಾಹಿತಿಯಂತೆ ಅಲ್ಲಿಂದ 2 ಕಿ.ಮೀ ದೂರದಲ್ಲಿ ಇದ್ದ ತೂಗು ಸೇತುವೆಯನ್ನೂ ನೋಡಿದೆವು .. ವಾಹ್! ಎಂತಹ ಅದ್ಭುತವಾದ ನೋಟ, 2011ರಲ್ಲಿ ಭದ್ರಾ ನದಿಗೆ ಇದನ್ನು ನಿರ್ಮಿಸಿದ್ದಾರೆ.. ಅಲ್ಲಿಂದ ಶುರುವಾದ ಮಳೆಯಲ್ಲೇ ಹೊರನಾಡಿಗೆ ಹೊರಟೆವು. ಅಲ್ಲಿಗೆ ತಲುಪುವ ಹೊತ್ತಿಗೆ ಮಳೆಯೂ ನಿಂತು ವಾತಾವರಣವನ್ನು ತಂಪಾಗಿಸಿತ್ತು. ನಮಗಾಗಿ ಕಾದಿರಿಸಿದ್ದ ರೂಮ್ನಲ್ಲಿ ಸ್ವಲ್ಪ ಹೊತ್ತು ರೆಸ್ಟ್ ಮಾಡಿ, ಏಳು ಗಂಟೆಗೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೊರಟೆವು. ಮನದಣಿಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ರೂಂಗೆ ವಾಪಸ್ ಬಂದಾಗ ರಾತ್ರಿ 10:30 ಗಂಟೆ. ರಾತ್ರಿಯ ದರ್ಶನದ ವೈಭವವೇ ಬೇರೆ ತರಹ... ಆ ದೀಪಗಳು, ಹೆಚ್ಚು ನೂಕು ನುಗ್ಗಲಿಲ್ಲದ ನೆಮ್ಮದಿಯ ದರ್ಶನ, ಇದರಿಂದ ಸಿಗುವ ಮನ ಶಾಂತಿಯನ್ನು ಹೇಗೆ ವರ್ಣಿಸುವುದು...
18th-Day-2 ಹೊರನಾಡು ಟು ಧರ್ಮಸ್ಥಳ..
ಬೆಳಗ್ಗೆ ಮತ್ತೊಮ್ಮೆ ದೇವಿಯ ದರ್ಶನ ಮಾಡಿಕೊಂಡು ಬ್ರೇಕ್ ಫಾಸ್ಟ್ ಮುಗಿಸಿ ಕಳಸ ಕೊಟ್ಟಿಗೆಹಾರದ ಮೂಲಕಧರ್ಮಸ್ಥಳದ ಕಡೆಗೆ ಪ್ರಯಾಣ ಶುರು ಮಾಡಿ ಕೊಂಡೆವು. 90 ಕಿಲೋಮೀಟರ್ ದೂರ.. ಆದರೆ ಮೂರು ಗಂಟೆಗಳ ಪ್ರಯಾಣ... ಪ್ರತಿ ತಿರುವಿನಲ್ಲಿ ಜುಳು ಜುಳು ಶಬ್ದದ ಸುಂದರವಾದ ಝರಿಗಳು ಧುಮುಕುವ ದೃಶ್ಯ..ಒಂದು ಕಡೆ ರುದ್ರ ರಮಣೀಯ ಬೆಟ್ಟಗಳ ಸಾಲು ಕಂಡರೆ ಇನ್ನೊಂದೆಡೆ ಪ್ರಪಾತ ...ವಾಹ್! ಎಂಥ ಅದ್ಭುತವಾದ ಪ್ರಕೃತಿಯ ಮಡಿಲು ನಮ್ಮ ಕರ್ನಾಟಕ... ಅಂತೂ ಮಧ್ಯಾಹ್ನ 1:30 ಗೆ ಧರ್ಮಸ್ಥಳ ತಲುಪಿ ಮೊದಲೇ ಕಾದರಿಸಿದ್ದ ರೂಮ್ನಲ್ಲಿ ಫ್ರೆಶ್ ಆಗಿ, ದೇವರ ದರ್ಶನಕ್ಕೆ ಕ್ಯೂನಲ್ಲಿ ಒಂದು ಗಂಟೆ ನಿಂತು, ದರ್ಶನ ಮುಗಿಸಿ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿದವು. ನಂತರ ಬಹು ಸುಂದರವಾಗಿ ನಿರ್ವಹಿಸುತ್ತಿರುವ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದೆವು. ನಿಜಕ್ಕೂ ಇದನ್ನು ಡಿಟೇಲಾಗಿ ನೋಡಲು ಒಂದೆರಡು ದಿನಗಳೇ ಬೇಕಾಗಬಹುದು. ಅಷ್ಟು ಭವ್ಯವಾಗಿದೆ ..ಹಾಗೂ ಹೀಗೂ ನಾವು ಸಂಜೆ ಐದರವರೆಗೆ ಅಲ್ಲಿ ನೋಡಿಕೊಂಡು, ಅಲ್ಲೇ ಬೆಟ್ಟದ ಮೇಲಿರುವ ಬಾಹುಬಲಿಯ ದರ್ಶನ ಮುಗಿಸಿ, ಅಲ್ಲಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ರಾಮ ಕ್ಷೇತ್ರವೆಂಬ ಒಂದು ಸುಂದರವಾದ ದೇವಸ್ಥಾನಕ್ಕೆ ಹೋದೆವು. ಸಂಜೆಯ ಸೂರ್ಯನ ಕಿರಣಗಳಿಂದ ಮೂಡಿದ ಬಣ್ಣ ಬಣ್ಣದ ಚಿತ್ತಾರಗಳು, ಈ ಜಾಗಕ್ಕೆ ಮತ್ತಷ್ಟು ಕಳೆ ತುಂಬಿದ್ದವು....ಸಂಜೆ ಅಲ್ಲೇ ಕೂಲ್ ಡ್ರಿಂಕ್ಸ್ ಕುಡಿಯಲು ಅಂಗಡಿಗೆ ಹೋದಾಗ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಸೌತಡ್ಕ ಎಂಬ ಗಣಪತಿ ದೇವಸ್ಥಾನದ ಬಗ್ಗೆ ತಿಳಿದು ಅದನ್ನು ನೋಡಲು ಹೊರಟೆವು.. ದಾರಿ ತುಂಬಾ ಹಾಳಾಗಿದ್ದರಿಂದ ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ ಏಳುವರೆ ಗಂಟೆಗೆ ಅಲ್ಲಿಗೆ ತಲುಪಿದವು. ಈ ದಾರಿ ನಮಗೆ ಸುಸ್ತು ಮಾಡಿದ್ದರೂ ,ಆ ಸ್ಥಳವನ್ನು ನೋಡಿದ ಮೇಲೆ ನಾವಿಲ್ಲಿಗೆ ಬಂದದ್ದು ನಿಜಕ್ಕೂ ಸಾರ್ಥಕವಾಯಿತು ಎಂದುಕೊಂಡೆವು.ಇಲ್ಲಿರುವುದು ದೊಡ್ಡ ಬಯಲು ಗಣಪತಿ ವಿಗ್ರಹ...ಮಳೆ ಚಳಿ ಬಿಸಿಲುಗಳೆನ್ನದೆ ಇಲ್ಲಿ ಅವ್ಯಾಹತವಾಗಿ ಪೂಜೆ ನಡೆದುಕೊಂಡು ಬಂದಿದೆ. ಹರಕೆ ಹೊತ್ತವರು ಇಲ್ಲಿ ಬಂದು ದಾರದಲ್ಲಿ ಗಂಟೆಗಳನ್ನು ಕಟ್ಟುತ್ತಾರೆ. ಆಗ ಕೊನೆಯ ಜಾಮದ ಪೂಜೆ ನಡೆಯುತ್ತಿದ್ದು, ಎಂಟು ಗಂಟೆಯ ಹೊತ್ತಿಗೆ ಮಂಗಳಾರತಿ ನೋಡುವ ಭಾಗ್ಯ ದೊರೆಯಿತು. ಸಿಹಿ ತೆಳು ಅವಲಕ್ಕಿಯ ಪ್ರಸಾದವನ್ನು ಬಂದವರಿಗೆಲ್ಲ ನೀಡಿದರು.. ನಮ್ಮ ಸೌತ್ ಇಂಡಿಯಾದಲ್ಲಿರುವ ದೇವಸ್ಥಾನಗಳು ಅದರಲ್ಲೂ ಸೌತ್ ಕೆನರಾದ ದೇಗುಲಗಳಲ್ಲಿರುವ ಸ್ವಚ್ಛತೆ, ಭಕ್ತಾದಿಗಳನ್ನು ಟ್ರೀಟ್ ಮಾಡುವ ರೀತಿ, ಆ ಸಂಪ್ರದಾಯಗಳು, ಅವರ ಪೂಜಾ ರೀತಿಗಳನ್ನು ಇನ್ನೆಲ್ಲೂ ಕಾಣಲಾರೆವು. ದೇವಸ್ಥಾನಗಳಲ್ಲಿ ಎಷ್ಟೇ ರಷ್ ಇದ್ದರೂ ಅತ್ಯಂತ ಸ್ವಚ್ಛವಾಗಿ ಇಟ್ಟಿರುತ್ತಾರೆ.. ಈಗ ದಸರಾ ಸಮಯವಾಗಿದ್ದರಿಂದ, ನಡೆಯುತ್ತಿರುವ ವಿಶೇಷ ಪೂಜೆಗಳು ಅಲಂಕಾರಗಳನ್ನು ನೋಡುವುದೇ ಒಂದು ಅದ್ಭುತ...ರಾತ್ರಿ 9:30 ಗಂಟೆಗೆ ವಾಪಸ್ ಧರ್ಮಸ್ಥಳ ತಲುಪಿದಾಗ ಮತ್ತೆ ದೇವಸ್ಥಾನಕ್ಕೆ ಹೋಗಿ ರಾತ್ರಿ ಪ್ರಸಾದ ಸ್ವೀಕರಿಸುವ ಶಕ್ತಿ ಇರಲಿಲ್ಲ ..ಅಲ್ಲದೆ ಕಾರ್ ಪಾರ್ಕಿಂಗ್ ಮತ್ತೆ ಸಿಗುವುದು ಕಷ್ಟ ವಾದುದ್ದರಿಂದ ನಾವುಗಳು ಹತ್ತಿರವಿದ್ದ ಹೋಟೆಲ್ ನಲ್ಲಿ ನಾರ್ತ್ ಇಂಡಿಯನ್ ಊಟ ಮಾಡಿ ಅಂದು ವಿರಮಿಸಿದೆವು. ಬೆಳಗಿನಿಂದ ಒಂದೇ ಸಮ ಸುತ್ತಿ ಸುಸ್ತಾಗಿದ್ದ ನಮಗೆ ಮಲಗಿದೊಡನೆ ನಿದ್ರಾ ದೇವಿ ಆವರಿಸಿದಳು..
19th- DAY-3 ಧರ್ಮಸ್ಥಳ-ಮೂಡುಬಿದ್ರಿ- ಕಟೀಲು-ಬಪ್ಪನಾಡು-ಮಂಗಳೂರು.
ಧರ್ಮಸ್ಥಳದಿಂದ ಹೊರಟು, ಮುಂದೆ ನಾವು ವೀಕ್ಷಿಸಿದ್ದು ಸುಮಾರು 55 km ದೂರದಲ್ಲಿರುವ 15ನೇ ಶತಮಾನದ ಸಾವಿರ ಕಂಬದ ಬಸದಿಯನ್ನು...ಜೈನರ ಪವಿತ್ರ ಸ್ಥಳವಾದ ಇದನ್ನು "ಚಂದ್ರಕಾಂತ ಬಸದಿ" ಅಂತಾನೂ ಕರೆಯುತ್ತಾರೆ. ತೀರ್ಥಂಕರ ಚಂದ್ರಕಾಂತರ 8 ಅಡಿಯ ಪಂಚಲೋಹದ ಮೂರ್ತಿಯನ್ನು ಇಲ್ಲಿ ಪೂಜಿಸುತ್ತಾರೆ. ಮೂಡುಬಿದ್ರೆಯ ಸುತ್ತಮುತ್ತ 18 ಜೈನ ದೇವಸ್ಥಾನಗಳಿದ್ದರೂ ತುಂಬಾ ಪ್ರಸಿದ್ಧಿ ಗಳಿಸಿರುವುದು ಈ ಸಾವಿರ ಕಂಬದ ಬಸದಿ. ಇದು ಅತ್ಯಂತ ರಮಣೀಯವಾಗಿ ಕೆತ್ತಲ್ಪಟ್ಟಿದೆ. ಇಲ್ಲಿರುವ ಸುಂದರವಾದ ಕಂಬಗಳು ಒಂದೇ ರೀತಿಯಲ್ಲಿರದೆ ಎಲ್ಲಾ ಕಂಬಗಳು ಭಿನ್ನವಾಗಿ ಗುರುತಿಸಲ್ಪಟ್ಟಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಮಹಾಸ್ಥಂಬದಲ್ಲಿ ಡ್ರ್ಯಾಗನ್ ಹಾಗೂ ಜಿರಾಫೆಯ ಕೆತ್ತನೆಯು, ಆ ಶತಮಾನದ ಚೀನಾದ ವ್ಯಾಪಾರಸ್ಥರ ಮನವೊಲಿಸಲು ಕೆತ್ತಲ್ಪಟ್ಟಿತೆಂದು ಹೇಳಲಾಗುತ್ತದೆ. ಅಲ್ಲಿಂದ ಹೊರಟ ನಾವು ತಲುಪಿದ್ದು ನಂದಿನಿ ನದಿ ಮಧ್ಯದಲ್ಲಿರುವ ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ. ದಸರಾ ವೈಭವದ ಅಲಂಕಾರದಲ್ಲಿ ದೇವಸ್ಥಾನವು ಕಂಗೊಳಿಸುತ್ತಿತ್ತು..ತುಂಬಿ ತುಳುಕುತ್ತಿದ್ದ ಜನ ಜಂಗುಳಿ ಇದ್ದರೂ ದೇವಿಯ ದರ್ಶನವು ಯಾವುದೇ
ಚ್ಯುತಿಯಿಲ್ಲದೆ ನೆರವೇರಿತು. ಮಧ್ಯಾಹ್ನದ ಪ್ರಸಾದ ಸ್ವೀಕರಿಸಿ ಅಲ್ಲಿ ಸ್ವಲ್ಪ ಸಮಯ ಕುಳಿತಿದ್ದು ಹೊರಟಾಗ, ನನ್ನ ಗೆಳೆಯನೊಬ್ಬ ಫೋನ್ ಮಾಡಿ ಅಲ್ಲಿಂದ ತುಂಬಾ ಹತ್ತಿರವೇ ಇರುವ ಬಪ್ಪನಾಡು ಎಂಬ ಸ್ಥಳದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನವನ್ನೂ ನೋಡಲು ತಿಳಿಸಿದನು. ಅದರಂತೆ ನಾವು ಅಲ್ಲಿ ಭೇಟಿ ನೀಡಿ ಅಲ್ಲಿಯೂ ಸಾಲಂಕೃತವಾದ ದೇವಿಯ ದರ್ಶನವನ್ನು ಪಡೆದು ಸುಮಾರು 4:30 ಗಂಟೆಯ ಹೊತ್ತಿಗೆ ಮಂಗಳೂರಿನ ಹತ್ತಿರವಿರುವ ಪಣಂಬೂರ್ ಬೀಚ್ಗೆ ಹೋದೆವು. ಸಮುದ್ರದ ಅಗಾಧ ಏರಿಳಿತಗಳ ಅಲೆಗಳನ್ನು ನೋಡುತ್ತಾ, ಆಟವಾಡುತ್ತಾ ಒಂದು ಗಂಟೆ ಕಾಲ ಕಳೆದಿದ್ದು ನಮ್ಮ ಅರಿವಿಗೇ ಬರಲಿಲ್ಲ.
ಸಮೀಪದ ಮಂಗಳೂರಿನಲ್ಲಿ ಕಾಯ್ದಿರಿಸಿದ್ದ ಕವಿತಾ ರೆಸಿಡೆನ್ಸಿಗೆ 5:30 ಗಂಟೆಗೆ ತಲುಪಿದೆವು. ಅರ್ಧ ಗಂಟೆ ವಿರಮಿಸಿ, ಒಂದು ಒಳ್ಳೆಯ ಸ್ನಾನವನ್ನು ಮಾಡಿ, ತಯಾರಾಗಿ, ಮಂಗಳೂರಿನ ಸ್ನೇಹಿತನೊಡನೆ ಟಿ- ಮಂಗಳೂರು ಬಜ್ಜಿಯನ್ನು ಸೇವಿಸಿ ಆರುವರೆ ಗಂಟೆ ಹೊತ್ತಿಗೆ ಕದ್ರಿಯ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದೆವು. ಧರ್ಮಸ್ಥಳದ ಮೂಲ ಮಂಜುನಾಥ ಇಲ್ಲಿಯದು ಎಂಬ ಪ್ರತೀತಿ ಇದೆ. ಹೊರಗಿನಿಂದ ನೋಡುವಾಗ ಒಂದು ಸಣ್ಣ ಪ್ರಾಕಾರ ಇರಬಹುದಂತೆ ಕಾಣುವ ಈ ದೇವಸ್ಥಾನದ ಒಳಗೆ ಹೋದೊಡನೆ ಬೆರೆಗಾದೆವು...ತುಂಬಾ ಸುಂದರವಾದ, ಪ್ರತಿ ಬಾರಿಯೂ ತಪ್ಪದೇ ನೋಡಲೇಬೇಕೆನಿಸುವ ದೇವಸ್ಥಾನಗಳಲ್ಲಿ ಇದು ಒಂದು... ಸಾಮಾನ್ಯವಾಗಿ ಎಲ್ಲ ಕಡೆ ಕಲ್ಯಾಣಿಯು ದೇವಸ್ಥಾನದ ಮುಂಭಾಗದಲ್ಲಿರುತ್ತದೆ. ಆದರೆ ಇಲ್ಲಿ ಎರಡನೇ ಅಂತಸ್ತಿನಲ್ಲಿ ಕಲ್ಯಾಣಿ ಇದೆ. ಹಾಗೂ ಮೂರನೇ ಅಂತಸ್ತಿನ ಬಲಮೂಲೆಯಲ್ಲಿರುವ ಈಶ್ವರ ಲಿಂಗಕ್ಕೆ ಈ ಕಲ್ಯಾಣಿಯಿಂದ ನೀರನ್ನು ತಂದು ನಾವೇ ಅಭಿಷೇಕ ಮಾಡಬಹುದು. ಅದ್ಭುತವಾದ ಸ್ಥಳ... ಸಂಜೆಯ ಪಡುವಣ ದಿಕ್ಕಿನ ಸೂರ್ಯನ ಕಿರಣಗಳು ಈ ದೇವಸ್ಥಾನಕ್ಕೆ ಇನ್ನಷ್ಟು ಮೆರಗನ್ನು ತಂದಿತ್ತು. ವಿಶಾಲ ಪ್ರಾಕಾರದ ಮೆಟ್ಟಿಲುಗಳ ಮೇಲೆ ಕುಳಿತು, ತಂಪಾಗಿ ಬೀಸುತ್ತಿದ್ದ ಗಾಳಿ, ಪ್ರಶಾಂತವಾದ ವಾತಾವರಣ ಸವಿಯುತ್ತಿದ್ದ ನಮಗೆ ಅಲ್ಲಿಂದ ಹೊರಡಲು ಮನಸಾಗಲೇ ಇಲ್ಲ. ಅಲ್ಲಿ ನವರಾತ್ರಿಯ ಯಕ್ಷಗಾನವೂ ನಡೆಯುತ್ತಿದ್ದು ಅದನ್ನು ಸ್ವಲ್ಪ ಹೊತ್ತು ನೋಡಿಕೊಂಡು ಮುಂದೆ ಮಂಗಳಾದೇವಿಗೆ ಹೊರಟೆವು... ಅಬ್ಬಬ್ಬ ಇಡೀ ಊರೇ ವಿದ್ಯುತ್ ದೀಪಗಳ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು.. ಇಲ್ಲಂತೂ ಇಡೀ ರಾತ್ರಿ ಜಾತ್ರೆಯ ವಾತಾವರಣವು, ನವರಾತ್ರಿ ಮುಗಿಯೋವರೆಗೂ ಇರುತ್ತದೆ ಎಂದು ಹೇಳಿದ್ದರು.. ಆ ಸಂಭ್ರಮ ಸಡಗರಗಳು ನಮ್ಮ ಪ್ರವಾಸಕ್ಕೆ ಇಂಬು ನೀಡಿ ಬೆಳಗಿ ನಿಂದ ಆದ ಆಯಾಸಗಳನ್ನು ಮರೆಸಿದ್ದವು. ಈ ಮಂಗಳದೇವಿಗೆ ಅವಿರತವಾಗಿ ವಿಧವಿಧ ಮಂಗಳಾರತಿ ಎತ್ತುವ ಸಮಯದಲ್ಲಿ ಸುಮಾರು 45 ನಿಮಿಷ ನಾನ್ ಸ್ಟಾಪ್ ಶಂಖವನ್ನು ಊದುತ್ತಾರೆ ಎಂದು ಕೇಳಿದ್ದೇನೆ...ಇನ್ನೊಮ್ಮೆ ಯಾವಾಗಲಾದರೂ ಈ ಸೊಬಗನ್ನು ನೋಡಲೇಬೇಕು. ಅಂತೂ ರಾತ್ರಿ 10:30 ಗಂಟೆಗೆ ಸ್ವಲ್ಪ ಊಟದ ಶಾಸ್ತ್ರ ಮಾಡಿ ರೂಮಿಗೆ ಬಂದು ಮಲಗಿದ್ದಷ್ಟೇ ಗೊತ್ತು ನಿದ್ರೆಯ ಆಳಕ್ಕೆ ನಾವು ಜಾರಿದ್ದೆವು..
20 th -Day-4. ಉಡುಪಿ, ಮುರುಡೇಶ್ವರ -ಕುಮಟ.
ಸೂರ್ಯನ ತಾಪ ಏರುವ ಮೊದಲೇ ಉಡುಪಿ ತಲುಪಿ ದರ್ಶನ ಮುಗಿಸಿ ತಿಂಡಿಯನ್ನು ಅಲ್ಲೇ ತಿನ್ನಬೇಕೆಂದು ಕೊಂಡಿದ್ದರಿಂದ, ಬೆಳಗ್ಗೆ ಹೆಚ್ಚು ಸಮಯ ವ್ಯರ್ಥ ಮಾಡದೇ ಬೇಗನೆ ಹೊರಟು ಒಂದು ಗಂಟೆಯ ಪ್ರಯಾಣ ಮುಗಿಸಿ ಶ್ರೀ ಕೃಷ್ಣ ದೇವಸ್ಥಾನವನ್ನು ತಲುಪಿದೆವು. ಅಂದುಕೊಂಡಂತೆ ತುಂಬಾ ರಶ್ ಇತ್ತು. ಸುಮಾರು ಅರ್ಧ ಗಂಟೆ ಸಾಲಿನಲ್ಲಿ ನಿಂತು ನಿರಾಳವಾಗಿ ದರ್ಶನ ಮುಗಿಸಿ ಹೊರಬಂದು ಮಠದ ಸುತ್ತಲೂ ಇರುವ ಅನೇಕ ದೇವಸ್ಥಾನಗಳಾದ ಚಂದ್ರಮೌಳೇಶ್ವರ,ರಾಘವೇಂದ್ರ ಸ್ವಾಮಿ ಮಠ, ಮಹಾಲಸ ಗುಡಿಗಳನ್ನು ನೋಡಿದೆವು.. ಉಡುಪಿಗೆ ಹೋದಾಗಲೆಲ್ಲ ಬೆಳಗಿನ ತಿಂಡಿಯನ್ನು ತಿನ್ನುತ್ತಿದ್ದ ಕೊಂಕಣಿ ಭಟ್ಟರ ಉಪಹಾರ ಗೃಹಕ್ಕೆ ಹೋಗಿ ಹೊಟ್ಟೆ ತುಂಬಾ ತಿಂದು ಉಡುಪಿಯಿಂದ ಮುಂದಿನ ಪ್ರಯಾಣವನ್ನು ಮುಂದುವರಿಸಿ ಅಲ್ಲಿಂದ 12 ಕಿಲೋಮೀಟರ್ ದೂರದಲ್ಲಿರುವ ನೀಲಾವರ ಎಂಬ ಸ್ಥಳದ ಬಗ್ಗೆ ಗೂಗಲಮ್ಮನಿಂದ ತಿಳಿದು ಅಲ್ಲಿಗೆ ತಲುಪಿದವು. ಇಲ್ಲಿ ಕಲ್ಯಾಣಿಯ ಮಧ್ಯೆ "ಕಾಳಿಂಗ ಮರ್ಧನ" ದೇವಾಲಯವಿದೆ ಹಾಗೂ ಕರ್ನಾಟಕದ ಅತಿ ದೊಡ್ಡ ಗೋಶಾಲೆ ಇದೆ. ಇಲ್ಲಿ ಸುಮಾರು 1200 ಗೋವುಗಳನ್ನು ಸಂರಕ್ಷಿಸಿದ್ದಾರೆ. ಬಿಡಾಡಿ ದನಗಳನ್ನು, ಗೊಡ್ಡು ದನಗಳನ್ನು, ಗಾಯಗೊಂಡಿರುವ ಹಾಗೂ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಗಳನ್ನು ವಶಪಡಿಸಿಕೊಂಡು, ಆಸರೆ ನೀಡಿ ಅನೇಕ ಗೋ ಉತ್ಪನ್ನಗಳ ತಯಾರಿಕೆಗೂ ಸಹಾಯ ಮಾಡುತ್ತಿದ್ದಾರೆ... ಎಲ್ಲರೂ ಒಮ್ಮೆ ನೋಡಬೇಕಾದ ಸ್ಥಳವಿದು. ಅಲ್ಲಿಂದ ಮುಂದೆ ನಾವು ನೋಡಿದ್ದು 31 ಕಿಲೋಮೀಟರ್ ದೂರದ ಕುಂಭೇಶಿ ಎಂಬ ಸ್ಥಳದಲ್ಲಿರುವ ಆನೆಗುಡ್ಡೆ ಗಣಪತಿ ದೇವಸ್ಥಾನ... ನಾ ಮೊದಲೇ ಹೇಳಿದಂತೆ ಇಲ್ಲಿನ ದೇವಾಲಯಗಳನ್ನು ನೋಡುವುದೇ ಒಂದು ಅನುಭೂತಿ.. ಅಷ್ಟು ಸುಂದರವಾಗಿ ಇಟ್ಟಿರುತ್ತಾರೆ. ದರ್ಶನ ಮುಗಿಸಿ ತಂಪು ಪಾನೀಯವನ್ನು ಕುಡಿದು ಹೊರಟ ನಮ್ಮ ಕಾರು ನಿಂತಿದ್ದು ಮುರುಡೇಶ್ವರದಲ್ಲೆ... ನಾವು ತಲುಪುವ ವೇಳೆಗೆ ಮುಖ್ಯ ದೇವಸ್ಥಾನದ ಬಾಗಿಲು ಹಾಕಿ ನಮಗೆ ಮುರುಡೇಶ್ವರನ ದರ್ಶನದ ಭಾಗ್ಯ ಇಲ್ಲವಾಯಿತು.. ಆದರೆ ಸುತ್ತಲಿನ ಸಮುದ್ರದ ನೋಟ, ದೇವಸ್ಥಾನದ ಹಿಂದಿರುವ ಅತಿ ದೊಡ್ಡ ಈಶ್ವರನ ವಿಗ್ರಹ.. ಅದರ ಹಿಂದಿರುವ ಗುಹೆಯಲ್ಲಿ ರಾವಣ-ಗಣಪತಿ, ಗೋಕರ್ಣದ ಕಥೆಯನ್ನು ಬಹಳ ಸುಂದರವಾಗಿ ಸಿಮೆಂಟ್ ವಿಗ್ರಹಗಳೊಂದಿಗೆ ಅನಾವರಣಗೊಳಿಸಿದ್ದನ್ನು ನೋಡಿಕೊಂಡು ಅಲ್ಲಿಂದ ಹೊರಟು ಸುಮಾರು 15 ಕಿ.ಮೀ ದೂರದಲ್ಲಿರುವ ಇಡುಗುಂಜಿಗೆ ಪ್ರಯಾಣ ಮುಂದುವರಿಸಿದೆವು. ಏರಿಳಿತಗಳ ದಾರಿ ಇರುವುದರಿಂದ ಸುಮಾರು 45 ನಿಮಿಷ ಹಿಡಿಯಿತು. ಅಲ್ಲಿಗೆ ತಲುಪಿದಾಗ ಎರಡುವರೆ ಆಗಿತ್ತು ಅಲ್ಲಿನ ಆಡಳಿತ ಮಂಡಳಿಯವರು ದೇವಸ್ಥಾನವು ಮೂರುವರೆ ಗಂಟೆಗೆ ತೆರೆಯುತ್ತದೆ ನೀವುಗಳು ಪ್ರಸಾದ ಸ್ವೀಕರಿಸಿ ಬನ್ನಿ ಎಂದು ಊಟಕ್ಕೆ ಕಳುಹಿಸಿದರು.ಊಟ ಮುಗಿಸಿ ಅಲ್ಲಿಯೇ ಮರದ ನೆರಳಿನಲ್ಲಿ ವಿಶ್ರಮಿಸಿ, ಗುಡ್ಡದ ಕೆಳಭಾಗದಲ್ಲಿರುವ ದೇವಸ್ಥಾನಕ್ಕೆ ಬರುವ ವೇಳೆಗೆ ಪೂಜೆಯು ಶುರುವಾಗಿತ್ತು. ದರ್ಶನ ಮುಗಿಸಿ ಅಲ್ಲಿಂದ ತರಾತುರಿಯಲ್ಲಿ ಕುಮಟದ ಕಡೆಗೆ ಪ್ರಯಾಣ ಮುಂದುವರಿಸಿದವು.
---ದಾರಿಯಲ್ಲಿ ಸಿಕ್ಕಿದ ಹೊನ್ನಾವರವನ್ನು ನೋಡುವ ಅವಕಾಶವನ್ನು ದಾಟಿ ಮುಂದುವರೆದಿದಕ್ಕೆ ಎರಡು ಕಾರಣಗಳು... ಕುಮಟಾದಲ್ಲಿ ನೆಲೆಸಿರುವ ನನ್ನೊಬ್ಬ ಗೆಳೆಯನನ್ನು ಸುಮಾರು 30 ವರ್ಷಗಳ ನಂತರ ಭೇಟಿ ಮಾಡುವ ಕಾತರ ಒಂದಾದರೆ, ಸಂಜೆಯ ಸೂರ್ಯಾಸ್ತದ ನೋಟವನ್ನು ಕುಮುಟಾ ಸಮುದ್ರದಲ್ಲಿ ನೋಡುವ ಆಸೆ ಇನ್ನೊಂದು ಆಗಿತ್ತು.. ಹಿಂದೆ ಕೆಲಸಕ್ಕೆ ಬರುತ್ತಿದ್ದ ಸಮಯದಲ್ಲಿ ಈ ಸಮುದ್ರದ ಸೊಬಗನ್ನು ನಾನು ಅನೇಕ ಬಾರಿ ನೋಡಿದ್ದರಿಂದ ಇದನ್ನು ಮಿಸ್ ಮಾಡದೆ ಅಮಿತ್ ನಿಗೆ ತೋರಿಸಲೇಬೇಕೆಂದುಕ್ಕೊಂಡಿದ್ದೆ.. ಸರಿ ಸಮಯಕ್ಕೆ ಕುಮಟಾ ತಲುಪಿ ಗೆಳೆಯನು ನಮಗಾಗಿ ಕಾದಿರಿಸಿದ್ದ ರೂಂಗೆ check-in ಆಗಿ, 15 ನಿಮಿಷ ವಿಶ್ರಮಿಸಿ ಐದು ಕಾಲು ಗಂಟೆಗೆ ಅವನ ಮನೆಗೆ ಹೋದೆವು.. ಸ್ವಲ್ಪ ಸಮಯ ಅವನನ್ನು ಮಾತನಾಡಿಸಿ ನಾನು ಅಮಿತ್ ಇಬ್ಬರು ಬೀಚ್ಗೆ ಹೋದೆವು.. ಅಲ್ಲಿಯ ಸುಂದರ ದೃಶ್ಯಗಳು ನಮ್ಮ ಮೊಬೈಲ್ ಫೋನಿನ ಗ್ಯಾಲರಿಗೆ ಸೇರಿ ದವು...ಅತಿ ಅದ್ಭುತವಾದ ಸಮುದ್ರ ತೀರಗಳಲ್ಲಿ ಇದೂ ಒಂದು... ಬಾರಿ-ಬಾರಿ ನೋಡುವ ಆಸೆಯಾಗುತ್ತದೆ..ಅಲೆಗಳ ಅಬ್ಬರ ಕಡಿಮೆ ಇದ್ದಿದ್ದರಿಂದ ನೀರಿನಲ್ಲಿ ಸ್ವಲ್ಪ ಹೊತ್ತು ಶಾಂತವಾಗಿ ನಿಂತು, ಬಂಡೆಗಳ ಮಧ್ಯದ ಸೂರ್ಯಾಸ್ತವನ್ನು ಕಣ್ಗಳಲ್ಲಿ ತುಂಬಿಕೊಂಡು ಕತ್ತಲಾಗುವವರೆಗೂ ಅಲ್ಲಿ ಇದ್ದೆವು... ಸುಮಾರು ಒಂದುವರೆ ಗಂಟೆ ಸಮಯ ಕಳೆದಿದ್ದು ನಮಗೆ ಗೊತ್ತಾಗಲಿಲ್ಲ.. ವಾಪಸ್ ಗೆಳೆಯನ ಮನೆಗೆ ತಲುಪುವ ಹೊತ್ತಿಗೆ ಕೆಲಸ ಮುಗಿಸಿ ಆತನು ಬಿಡುವು ಮಾಡಿಕೊಂಡಿದ್ದನು. ಆತನ ಫ್ಯಾಮಿಲಿಯೊಡನೆ ಊಟ ಮುಗಿಸಿ ರಾತ್ರಿ ಸುಮಾರು ಒಂದುವರೆ ಗಂಟೆಯವರೆಗೆ ಅವರ ಜೊತೆಗಿದ್ದು, ಹಳೆಯ ನೆನಪುಗಳನ್ನೆಲ್ಲ ಮೆಲುಕು ಹಾಕಿ ಲಾಡ್ಜ್ ಗೆ ವಾಪಸ್ಸಾದೆವು..ಈ ಸುಂದರ ನೆನಪುಗಳಲ್ಲಿ ಮಿಂದ ನಮಗೆ ದಿನದ ಪ್ರಯಾಣದ ಆಯಾಸವೂ ಸೇರಿದ್ದರಿಂದ, ಬೆಳಗ್ಗೆ ಒಂಬತ್ತು ಗಂಟೆವರೆಗೆ ನೆಮ್ಮದಿಯ ಸುಖ ನಿದ್ರೆಯನ್ನು ಮಾಡಿದೆವು....
21st-Day5 ಕುಮಟ=ಬೆಂಗಳೂರು
ಈ ದಿನ ನಾವು ವಾಪಸ್ ಬೆಂಗಳೂರಿಗೆ ಹೊರಡಬೇಕೆಂದುಕೊಂಡಿದ್ದರಿಂದ ಬೆಳಗ್ಗೆ ಸ್ವಲ್ಪ ನಿಧಾನವಾಗಿ ಎದ್ದೆವು.. ರೂಮ್ ಚೆಕ್ ಔಟ್ ಮಾಡಿ "ಪಾಂಡುರಂಗ ರೆಸ್ಟೋರೆಂಟ್" ನಲ್ಲಿ ತಿಂಡಿ ಮುಗಿಸಿ ಬೆಂಗಳೂರಿಗೆ ಹೊರಟೆವು..ಅಲ್ಲಿಂದ ಗೋಕರ್ಣ 35km ದೂರದಲ್ಲಿದ್ದರೂ ಅದನ್ನು ಹಾಗೂ ಇನ್ನು ಕೆಲವು ಸ್ಥಳಗಳನ್ನು ಇನ್ನೊಮ್ಮೆ ನೋಡಲು ತೀರ್ಮಾನಿಸಿದೆವು... ಏಕೆಂದರೆ ಕುಮಟಾದಿಂದ ಬೆಂಗಳೂರಿಗೆ 480 ಕಿಲೋಮೀಟರ್ ನಾನ್ ಸ್ಟಾಪ್ ಪ್ರಯಾಣ ಇದ್ದುದರಿಂದ... ಆದರೆ ಸಿರ್ಸಿ ಮೂಲಕ ಹಾವೇರಿ ತಲುಪುವ ವೇಳೆಗೆ ನಮಗೆ ಮೂರುವರೆ ಗಂಟೆ ಹಿಡಿಯಿತು...ರಸ್ತೆ ರಿಪೇರಿಯ ಸಲುವಾಗಿ ಪೂರ್ತಿ ಕೆತ್ತಿ ಕೆಲಸವೂ ನಡೆಯದೆ, ಹಾಗೇ ಹಾಳು ಬಿದ್ದಿತ್ತು... 4 ದಿನಗಳ ಪ್ರಯಾಣದಲ್ಲಿ ಇದೊಂದೇ ಕಪ್ಪು ಚುಕ್ಕೆಯಾಯಿತು.. ಹಾವೇರಿಯ ನಂತರ ಹೈವೇ ಆದುದರಿಂದ ಸ್ವಲ್ಪ ನಿರಮ್ಮಳವಾದವು... ದಾವಣಗೆರೆ ತಲುಪುವ ವೇಳೆಗೆ ಪುಣಾಗೆ ಹೋಗಿದ್ದ ತಂಗಿ ಭಾವ ವಾಪಸ್ ಬರುತ್ತಿದ್ದ ಟ್ರೈನು ಕೂಡ ಅದೇ ಸಮಯದಲ್ಲಿರುವುದು ಗೊತ್ತಾಗಿ, ಅವರನ್ನು ದಾವಣಗೆರೆಯಲ್ಲಿ ಇಳಿಸಿ ನಮ್ಮ ಕಾರಿಗೆ ಹತ್ತಿಸಿಕೊಂಡು ಬೆಂಗಳೂರಿಗೆ ಹೊರಟಿವು...ಮಧ್ಯ "ಉಪಾಧ್ಯ ವೆಜ್" ನಲ್ಲೊಂದು ಕಾಫಿ ಬ್ರೇಕ್ ಕೊಟ್ಟು ಬೆಂಗಳೂರು ತಲುಪಿ, ತಂಗಿಯನ್ನು ಅವರ ಮನೆಗೆ ಬಿಟ್ಟು ಅಲ್ಲೇ ಡಿನ್ನರ್ ಮುಗಿಸಿ ರಾತ್ರಿ 11:00 ಗಂಟೆಗೆ ನಮ್ಮ ಮನೆಗೆ ವಾಪಸ್ ಆದೆವು.. ನಾವು ಪ್ಲಾನ್ ಮಾಡಿಕೊಂಡಿದ್ದರಲ್ಲಿ ಒಂದೆರಡು ಜಾಗಗಳು ಮಿಸ್ಸಾಗಿದ್ದರೂ, ನೋಡಿದ ಎಲ್ಲಾ ಜಾಗಗಳನ್ನು ಯಾವುದೇ ಅರ್ಜೆಂಟ್ ಇಲ್ಲದೆ ಮನ ತೃಪ್ತಿ ನೋಡಿದ ಸಮಾಧಾನ ನಮ್ಮಲ್ಲಿ ಉಳಿಯಿತು.. ಮಗನಿಗೆ ಡ್ರೈವಿಂಗ್ ಆಯಾಸ ಹೆಚ್ಚಾಗಿದ್ದರೂ, ಅವನು ಡ್ರೈವನ್ನು ಎಂಜಾಯ್ ಮಾಡುವುದರಿಂದ ಅದನ್ನು ತೋರಿಸಿಕೊಳ್ಳಲಿಲ್ಲ... ಅಂತೂ ನಮ್ಮಿಬ್ಬರಿಗೂ ಬೇಕಿದ್ದ ಒಂದು ಬದಲಾವಣೆ ಈ ಪ್ರಯಾಣದಿಂದ ದೊರೆಯಿತು.. ನಾವು ಒಟ್ಟು ಸುಮಾರು 1500 ಕಿಲೋಮೀಟರ್ ಪ್ರಯಾಣಿಸಿದರೂ ಹಾಕಿಕೊಂಡ ಬಜೆಟ್ ನಲ್ಲಿ ಇದನ್ನು ಮುಗಿಸಿದ್ದೆವು... ಅಂತೂ ಐದು ದಿನಗಳ ಈ ಅದ್ಭುತ ಅನುಭವ ನಮ್ಮ ಮನದಲ್ಲಿ ಅಚ್ಚೊತ್ತಿದ್ದರೂ, ಎಂದಾದರೂ ಮತ್ತೊಮ್ಮೆ ಮೆಲಕು ಹಾಕುವ ಸಲುವಾಗಿ ಇದನ್ನು ಅಕ್ಷರ ರೂಪದಲ್ಲಿ ಇಳಿಸಿರುವೆ ಅಷ್ಟೇ ಮತ್ಯಾವ ಉದ್ದೇಶದಿಂದಲೂ ಅಲ್ಲ.....ಶುಭಂ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!