1.ಚೆಲುವಿನ ವನಸಿರಿ ಬನದಲ್ಲಿ 

ಹಸಿರು ಹುಲ್ಲಿನ ಹಾಸಿನಲೀ 

ನಿಸರ್ಗ ದೇವಿಯ ಮಡಿಲಲ್ಲಿ 

ಹಾಯಾಗೀ.. ನಾ.. ಒರಗಿದ್ದೆ //

2.ಪುಟಿಪುಟಿವ ಬುಗ್ಗೆಯೆಡೆಯಲ್ಲಿ 

ಗಳಗಳ ನಿನಾದ ತೊರೆಯಲ್ಲಿ 

ಹಸುರಿನ ಮರಗಿಡದೆರಕದಲೀ

ಕುಹುಕುಹು ಇಂಚರ ಸ್ವರದಲ್ಲಿ //

3.ದೃಷ್ಟಿ ಸಾರಿದೆಡೆ ನಿನ್ನದೇ ನೃತ್ಯ 

ಎತ್ತ ನೋಡಿದರು ನಿನ್ನಾತಿಥ್ಯ 

ದೇವಿ, ನಿನ್ನದೇನಿದು ಲಾಲಿತ್ಯ 

ನೋಡುತ ಮೈಮನ ಮರೆತಿದ್ದೆ //

4.ಮರಗಿಡದೆಡೆಯಲಿ ಇಣುಕಿನ ನೋಟ 

ರವಿ ಕಿರಣದ ಕಣ್ ಮುಚ್ಚಾಲೆಯಾಟ 

ಪಡುಗಡಲೆಡೆ ಸಾಗುವ ಆ ಓಟ.. 

ಮೈಮನ ತುಂಬಿ.. ಮಲಗಿದ್ದೆ //

5.ಸಾಗರದಾಚೆಯ ಕೆಂಪಿನಲೀ..

ರವಿರಶ್ಮಿಯು ತಾನಡಗಿತ್ತು..

ನಿಶೆಯ ಕಾವಳವು ಹರಡಿತ್ತು 

ನಿನ್ನಯ ಕೇಶವು ಕೆದರಿತ್ತು //

6.ಚುಕ್ಕಿ ಚಂದ್ರಮನ ಬೆಳಗಿನಲೀ..

ನೀಲಾಕಾಶದ ತಂಪಿನಲೀ..

ತಾರಾಲೋಕದ ವಿಭವದಲೀ..

ನನ್ನನೆ ನಾನೇ ಮರೆತಿದ್ದೆ //

7.ದೇವೀ! ನಿಸರ್ಗ ಸುಂದರಿಯೇ..

ನಿನ್ನಯ ಮಹಿಮೆಯ ನಾನರಿಯೆ 

ನಿನ್ನೀ ಮಾಡಿಲೊಳು ಮಲಗಿದ್ದೆ..

ನಿದ್ರಾ ಲೋಕಕೆ ಜಾರಿದ್ದೇ.. //      

     -ಅನಂತ ಭಟ್ ಪೊಳಲಿ