'ರಂಗ ಭೂಮಿಯ ಮೇಲೆ ಹೂವಿಯ ಪ್ರವೇಶವಾಗುತ್ತದೆ, ಅವಳ ತಲೆಯ ಮೇಲೆ ಒಂದು ಕೊಡ ನೀರು ಸುರುವಿದ ಕೂಡಲೇ ಹೂವಿ ಪರಿಭ್ರಮಿಸುತ್ತಾ ಹೂವಿನ ಮರವಾಗುತ್ತಾಳೆ. ರೆಂಬೆ-ಕೊಂಬೆಗಳ ತುಂಬಾ ಹೂವನ್ನು ಹೊದ್ದುಕೊಂಡು ಘಮಘಮಿಸುತ್ತಾಳೆ" ಎಂದು ವಿವರಿಸುತ್ತಲೇ ಅಲ್ಲೊಬ್ಬ ಹುಡುಗ ಮುಖ ಸಿಂಡರಿಸಿಕೊಂಡು ಬೇಸರ ವ್ಯಕ್ತ ಪಡಿಸುತ್ತಿದ್ದ. ಏನಾಗಿರಬಹುದೆಂದು ಸಾಗರಿ ಕೇಳಿದಾಗ ಆ ಹುಡುಗ 'ಈ ನಾಟಕದಲ್ಲಿ ಆಸಕ್ತಿಯಿಲ್ಲ. ಕಲ್ಪನೆಗಳು ನಿಜವಾಗಲು ಸಾಧ್ಯವಿಲ್ಲ. ಹೂವಿ ಹೂವಿನ ಮರ ಆಗಲು ಹೇಗೆ ಸಾಧ್ಯ? ನೀವು ಮಾಡುತ್ತಿರುವ ಪಾಠವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ನೇರವಾಗಿಯೇ ಹೇಳಿಬಿಟ್ಟ. ಸಾಗರಿಗೆ ಸಿಟ್ಟು ವಿಕೋಪಕ್ಕೇರಿತ್ತು ಅಷ್ಟೇ ಅಲ್ಲ ಮನಸ್ಸಿಗೆ ಬಹಳ ಘಾಸಿಯೂ ಆಯಿತು. 'ಶಿಕ್ಷಕರಿಗೆ ತಾಳ್ಮೆ ಬಹಳ ಮುಖ್ಯವಾದುದು' ಎಂದು ಹಣೆಪಟ್ಟಿ ಕಟ್ಟಿಯಾದ ಮೇಲೆ ಅದನ್ನು ಕಳೆದುಕೊಳ್ಳುವ ಹಾಗಿರಲಿಲ್ಲ. ತಕ್ಷಣವೇ ಪುಸ್ತಕವನ್ನು ಮುಚ್ಚಿ ಪಕ್ಕಕ್ಕಿಟ್ಟು, ಮಕ್ಕಳೇ ಈ ದಿನ ನಾನು ಪಾಠ ಮಾಡುವುದಿಲ್ಲ. ಎಲ್ಲರೂ ಸೇರಿ ಒಂದು ಸಿನಿಮಾ ನೋಡೋಣ ಎಂದ ಕೂಡಲೇ ವಿದ್ಯಾರ್ಥಿಗಳೆಲ್ಲ ಓ.....! ಎಂದು ಚೀರಿದರು. ಇಂಟರ್ ನ್ಯಾಷನಲ್ ಶಾಲೆಯಾದ್ದರಿಂದ ಪ್ರತಿ ತರಗತಿಯಲ್ಲಿಯೂ ಸ್ಮಾರ್ಟ್ ಬೋರ್ಡ್ ನ್ನು ಅಳವಡಿಸಿದ್ದರು. ಸಾಗರಿ ಒಂದು 'ಆಕ್ಷನ್' ಸಿನಿಮಾವನ್ನು ಹಾಕಿ ಎಲ್ಲರಿಗೂ ನಿಶ್ಯಬ್ಧವಾಗಿ ನೋಡಲು ಹೇಳಿ ತಾನೂ ಅವರ ಜೊತೆ ಕುಳಿತಳು. ಸಿನಿಮಾ ಪ್ರಾರಂಭವಾಯಿತು. ಹೀರೋ ಪರದೆ ಮೇಲೆ ಬರುತ್ತಿದ್ದ ಹಾಗೆ ವಿದ್ಯಾರ್ಥಿಗಳು ಚಪ್ಪಾಳೆ ಹೊಡೆಯಲು ಪ್ರಾರಂಭ ಮಾಡಿದರು. ಮೊದಲ ದೃಶ್ಯದಲ್ಲೇ ಅವನು ಹತ್ತು ಅಂತಸ್ತಿನ ಮಹಡಿಯಿಂದ ಹಾರಿ ಬಂದು ರೌಡಿಗಳ ಜೊತೆ ಫೈಟ್ ಮಾಡುತ್ತಾನೆ. ಮಹಡಿಯಿಂದ ಮಹಡಿಗೆ ಮಂಗನ ಹಾಗೆ ಜಿಗಿಯುತ್ತಾನೆ. ಹಾರುತ್ತಿರುವ ವಿಮಾನದಿಂದ ನೆಲಕ್ಕೆ ಧುಮುಕುತ್ತಾನೆ. ಗಾಳಿಯಲ್ಲಿಯೇ ಬೈಕ್ ಹಾರಿಸಿಕೊಂಡು ಬಂದು ಎದುರಿಗಿರುವ ಕಾರಿಗೆ ಗುದ್ದುತ್ತಾನೆ. ಕೇವಲ ಒಂದೇ ಕೈಗಲ್ಲೇ ರೌಡಿಗಳನ್ನೆಲ್ಲಾ ಚಚ್ಚಿ ಪುಡಿ ಮಾಡುತ್ತಾನೆ. ವೇಗದಲ್ಲಿ ಬರುತ್ತಿರುವ ಕಾರನ್ನು ಕಾಲಲ್ಲಿ ಒದ್ದು ಹಿಂದಕ್ಕೆ ಕಳುಹಿಸುತ್ತಾನೆ. ಹೀರೋ ಈ ಎಲ್ಲಾ ಸಾಹಸಗಳನ್ನು ಮಾಡುವಾಗ ವಿದ್ಯಾರ್ಥಿಗಳೆಲ್ಲರೂ ಓ.... ಎಂದು ಕಿರುಚಿ, ಕೇ ಕೇ ಹಾಕಿ ಚಪ್ಪಾಳೆ ತಟ್ಟುತ್ತಿದ್ದರು. ಸಾಗರಿ ಎಲ್ಲರ ಹಾವಭಾವಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಎಲ್ಲರೂ ಬಹಳ ಸಂತಸದಿಂದ ಮೂವಿಯನ್ನು ನೋಡುತ್ತಿದ್ದರು. ಇನ್ನೂ ಕುತೂಹಲ ಕೆರಳಿಸುವ ದೃಶ್ಯಗಳು ಬರುವ ಮುಂಚೆಯೇ ಸ್ಕ್ರೀನ್ ಆಫ್ ಮಾಡಿದಳು. ಎಲ್ಲರ ಮುಖಗಳಲ್ಲಿ ನಿರಾಸೆ ಎದ್ದು ಕಾಣುತ್ತಿತ್ತು. ಎಲ್ಲರೂ ಸ್ವೀನ್ ಆಫ್ ಮಾಡಿದ್ದಕ್ಕೆ ಚೀರಲು ಶುರುವಿಟ್ಟರು. ಅವರ ಚೀರಾಟಕ್ಕೆ ತಲೆಕೆಡಿಸಿಕೊಳ್ಳದೆ ಸಾಗರಿ ಸುಮ್ಮನೆ. ಕೈಕಟ್ಟಿ ಅವರನ್ನೇ ನೋಡುತ್ತಾ ನಿಂತಳು. ಕೆಲವೇ ಕ್ಷಣಗಳಲ್ಲಿ ಇಡೀ ತರಗತಿ ನಿಶ್ಯಬ್ದ.
ಒಂದು ಸಿನಿಮಾ ನೋಡುವಾಗ ನೀವು ತೋರುವ ಆಸಕ್ತಿ ಓದುವ ಪಾಠಗಳ ಮೇಲಿಲ್ಲ. ಸಿನಿಮಾಗಳಲ್ಲಿ ನಡೆಯುವ ನೈಜತೆಯಿಲ್ಲದ ಎಷ್ಟೋ ಘಟನೆಗಳನ್ನು ಒಪ್ಪಿಕೊಳ್ಳುವ ನಿಮ್ಮ ಮಗಸ್ಥಿತಿ ಪಾಠದಲ್ಲಿರುವ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿಲ್ಲ. ಹೂವಿ ಎಂಬ ಪಾತ್ರ ಹೇಗೆ ಹೂವಿನ ಮರವಾಗಲು ಸಾಧ್ಯವಿಲ್ಲ ಎಂದು ಹೇಳುವ ನೀವು ಸಿನಿಮಾದಲ್ಲಿನ ಹೀರೋ 10 ಅಂತಸ್ತಿನ ಮಹಡಿಯ ಮೇಲಿಂದ ನೆಗೆದ ನಂತರ ಬದುಕುಳಿಯುತ್ತಾನೆ ಎಂಬುದನ್ನು ಹೇಗೆ ಒಪ್ಪುತ್ತೀರಿ? ಮಹಡಿಯಿಂದ ಮಹಡಿಗೆ ಅಷ್ಟು ಸುಲಭವಾಗಿ ಹಕ್ಕಿ ಹಾಗೆ ಹಾರಲು ಅವನಿಗೆ ರೆಕ್ಕೆ ಹೇಗೆ ಮೂಡಿದವು? ಎರಡು ನಿಮಿಷದ ಫೈಟ್ನಲ್ಲಿ ನೂರು ಜನರನ್ನು ಹೊಡೆದು ಸಾಯಿಸಲು ಹೇಗೆ ಸಾಧ್ಯ? ಅದು ಅವಾಸ್ತವಿಕವಲ್ಲವೇ? ಎಂದು ಕೇಳಿದ ನಂತರ ವಿದ್ಯಾರ್ಥಿಗಳೆಲ್ಲರೂ ತಲೆತಗ್ಗಿಸುತ್ತಾರೆ.
ವಿಷ್ಣುಶರ್ಮ ತನ್ನ 'ಪಂಚತಂತ್ರ' ಕೃತಿಯಲ್ಲಿ ಮನುಷ್ಯನ ನಡವಳಿಕೆಗಳನ್ನು ಪ್ರಾಣಿಗಳಿಗೆ ಹೋಲಿಸಿ, ಪ್ರಾಣಿಗಳ ಮೂಲಕ ಮನುಷ್ಯ ಕುಲಕ್ಕೆ ನೀತಿ ಪಾಠ ಮಾಡಿಸಿದ ಅದೆಷ್ಟೋ ಕಥೆಗಳನ್ನು ನೀವು ಓದಲಿಲ್ಲವೇ? ಅಲ್ಲಿ ಪ್ರಾಣಿಯ ಪಾತ್ರಗಳು ಮಾತನಾಡಿದವೇ ಹೊರತು ಪ್ರಾಣಿಗಳಲ್ಲ. ಆ ಕತೆಗಳು ನಮ್ಮ ಬದುಕಿಗೆ ಮಾರ್ಗದರ್ಶನವನ್ನು ನೀಡಲಿಲ್ಲವೇ? ಬ್ರಹ್ಮಾಂಡದೊಳಗಿನ ಸಕಲ ಚರಾಚರಗಳನ್ನು ಮಾತನಾಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಎನ್ನವುದು ನೈಜತೆ ಹಾಗೂ ಕಲ್ಪನೆಗಳ ರಸದೌತಣ. ಹೋಲಿಕೆಗಳು, ವರ್ಣನೆಗಳು, ಅರ್ಥಗಳು, ಮನರಂಜನೆ, ಮೌಲ್ಯಗಳ ಪಂಚಾಮೃತ. ಜೀವನ ಮೌಲ್ಯವನ್ನು ರೂಢಿಸಿಕೊಳ್ಳಲು, ಸರಿತಪ್ಪುಗಳ ನಿರ್ಧಾರ ಮಾಡಲು, ಭಾಷಿಕವಾಗಿ ಬೆಳೆಯಲು ಸಾಹಿತ್ಯ ಸಹಾಯಕವಾಗಿರುವುದಷ್ಟೇ ಅಲ್ಲದೇ ಇತರೆ ವಿಷಯಗಳಿಗೆ ತಳಪಾಯವಾಗಿದೆ. ಅತ್ಮವಿಶ್ವಾಸವನ್ನು ರೂಢಿಸಿಕೊಳ್ಳಲು, ಕಲ್ಪನೆಯ ಕಥೆಗಳನ್ನು ಕಟ್ಟಲು ಕೌಶಲ್ಯವನ್ನು ಬೆಳೆಸಿಕೊಳ್ಳಲು, ಇತರರೊಡನೆ ಉತ್ತಮ ಸಂವಹನ ಮಾಡಲು, ಮನಸ್ಸನ್ನು ರಂಜಿಸಿಕೊಳ್ಳಲು ಭಾಷೆ ಮತ್ತು ಅದರ ಸಾಹಿತ್ಯ ನಿಮ್ಮಲ್ಲರ ಜೀವನಕ್ಕೆ ಬಹಳ ಮುಖ್ಯವಾದುದು ಎಂದು ಸಾಗರಿ ವಿವರಿಸುತ್ತಿರುವಾಗ ಎಲ್ಲರೂ ಸ್ತಬ್ಧ. ಅವರ ದೃಷ್ಟಿ ನೆಲಕಚ್ಚಿದವು.
ಶಿಕ್ಷಕರೆಂದರೆ ಸ್ನೇಹಿತರಂತೆ ಭಾವಿಸಿ, ಎದುರು ಮಾತನಾಡುತ್ತಾ, ಅವರ ಕಿವಿಮಾತುಗಳನ್ನು ನಿರ್ಲಕ್ಷಿಸುತ್ತಿರುವ ನಿಮ್ಮಲ್ಲಿ ಮೌಲ್ಯಗಳು ಮಾಯವಾಗಿವೆ. ಗುರುವಿನ ಸ್ಥಾನಕ್ಕೆ ಯಾರು ಗೌರವವನ್ನು ಕೊಡುವುದಿಲ್ಲವೋ, ಅವರನ್ನು ಅವಮಾನಿಸುತ್ತಾರೋ, ವಿನಮ್ರತೆಯಿಂದ ನಡೆದುಕೊಳ್ಳುವುದಿಲ್ಲವೋ ಅಂತಹವರು ಸುಸಂಸ್ಕೃತರಾಗಲು ಸಾಧ್ಯವೇ ಇಲ್ಲ ಎಂದು ಹೇಳಿ ದುಃಖ ತುಂಬಿದ ಮನಸ್ಸಿನಿಂದ ಸಾಗರಿ ತರಗತಿಯಿಂದ ಹೊರನಡೆಯುತ್ತಾಳೆ.
ಸಾಗರಿಯೊಬ್ಬಳು ಜವಾಬ್ದಾರಿಯುತ ಶಿಕ್ಷಕಿ. ನನ್ನ ಕೆಲಸ ಮುಗಿಸಿ ಬಂದರಷ್ಟೇ ಸಾಕು ಎನ್ನುವ ಮನಸ್ಥಿತಿಯವಳಲ್ಲ. ದಾರಿತಪ್ಪುತ್ತಿರುವವರನ್ನು ಎಚ್ಚರಿಸುವ ಪ್ರಯತ್ನಮಾಡಿ ಸರಿದಾರಿಯಲ್ಲಿ ಕರೆದುಕೊಂಡು ಹೋಗಲೇಬೇಕೆಂಬ ಹಠ ಅವಳದ್ದು ವಿದ್ಯಾರ್ಥಿಗಳು ಪಠ್ಯಗಳನ್ನು ಪರೀಕ್ಷೆಗೆಂದು ಓದುವುದಲ್ಲ. ಜೀವನದ ಪರೀಕ್ಷೆಗಳನ್ನು ಎದುರಿಸುವಂತೆ ತಯಾರು ಮಾಡಬೇಕೆಂಬುದು ಅವಳ ಆಶಯ. ತನ್ನ ಕಣ್ಣಮುಂದೆ ಚೆನ್ನಾಗಿ ಚಿಗುರಿ, ಹೆಮ್ಮರವಾಗಿ ಬೆಳೆಯಬೇಕಿದ್ದ ಸಸಿಯೊಂದು ಸಣ್ಣದಿರುವಾಗಲೇ ಬಿಸಿಲ ಬೇಗೆಗೆ ಒಣಗುತ್ತಿರುವುದನ್ನು ನೋಡಿ ಸುಮ್ಮನಿರಲಾರಳು. ನೀರೆರೆದು ಪೋಷಿಸುವುದು ಕರ್ತವ್ಯವೆಂದು ಭಾವಿಸಿದ್ದಳು.
ತರಗತಿಯಲ್ಲಿ ನಡೆದ ಘಟನೆಯನ್ನು ನೆನೆಯುತ್ತಾ ಸಾಗರಿಗೆ ತಡರಾತ್ರಿಯವರೆಗೂ ನಿದ್ರೆ ಹತ್ತಲಿಲ್ಲ. ಇವರೆಲ್ಲಾ ಹದಿನಾರರ ಹರೆಯದವರು. ಜೀವನೋತ್ಸಾಹ ಹೊಂದಬೇಕಾಗಿರುವ ಮಕ್ಕಳು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಹೊಸದರತ್ತ ಹೆಜ್ಜೆ ಹಾಕುತ್ತಾ, ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು ಸುಸಂಸ್ಕೃತರಾಗಬೇಕಾದವರು. ಇವರ ಆಲಸ್ಯತನ, ಅನಾವಶ್ಯಕ ಚರ್ಚೆಗಳು, ಸಮಯಪ್ರಜ್ಞೆಯಿಲ್ಲದ ಮನಸ್ಥಿತಿ, ಹೊಲಸು ಪದಗಳ ಬಳಕೆ, ಅಶಿಸ್ತಿನಿಂದ ಕೂಡಿರುವ ನಡವಳಿಕೆ, ನಿರ್ಲಕ್ಷ್ಯತೆ, ನಿರಾಕರಣೆಯ ಮನೋಭಾವ ನಾಳಿನ ಇವರ ಏಳಿಗೆಗೆ ಮಾರಕವಾದವುಗಳು. ಇವರೆಲ್ಲರನ್ನು ಸರಿಯಾದ ದಾರಿಗೆ ತರುವುದು ಹೇಗೆ ಎಂದು ಬೇಸರದ ಭಾವವನ್ನು ಹೊಂದುತ್ತಾ ಕಣ್ಮುಚ್ಚಿದಳು.
ಮಾರನೆಯ ದಿನ ಹೊಸ ಹುರುಪಿನೊಂದಿಗೆ ಸಾಗರಿ ಶಾಲೆಗೆ ನಡೆದಳು. ಎಂದಿನಂತೆ ಪ್ರಾರ್ಥನೆಯನ್ನು ಮುಗಿಸಿ ತರಗತಿಗೆ ಹೋದಳು. ಅವಳು ತರಗತಿಯೊಳಗೆ ಕಾಲಿರಿಸುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಶುಭಕೋರಿದರು. ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಎದ್ದು ನಿಂತಿದ್ದನ್ನು ನೋಡಿ ಸಾಗರಿಗೆ ಸಂತೋಷವಾಯಿತು. ಬೋರ್ಡಿನ ಮೇಲೆ ವಿಷಯ, ಪಾಠಗಳನ್ನು ಬರೆದು ಹಿಂತಿರುಗಿರುವಷ್ಟರಲ್ಲಿ ಪುಸ್ತಕವನ್ನು ತೆರೆದು ನಿಶ್ಯಬ್ಧವಾಗಿ ಕುಳಿತರು, ಸಾಗರಿ ನಾಟಕದ ಮುಂದಿನ ದೃಶ್ಯವನ್ನು ವಿವರಿಸತೊಡಗಿದಳು. "ಹೂವಿ ತನ್ನ ಗೆಳತಿಯರ ಕೋರಿಕೆಯ ಮೇರೆಗೆ ಸುರಹೊನ್ನೆಯ ಮರವಾಗುತ್ತಾಳೆ. ಮರವಾಗುವುದಕ್ಕೆ ಮುಂಚೆ ನನ್ನ ರಂಬೆಕೊಂಬೆಗಳನ್ನು ಮುರಿಯ ಬೇಡಿ, ಎಲೆಗಳನ್ನು ಹರಿಯಬೇಡಿ. ಹಾಗೇನಾದರೂ ಮಾಡಿದರೆ ನನ್ನ ಜೀವ ಹೋಗಿಬಿಡುತ್ತದೆಂದು ಎಚ್ಚರಿಕೆಯ ಮಾತುಗಳನ್ನಾಡುತ್ತಾಳೆ. ಆದಾಗ್ಯೂ ಗೆಳತಿಯರು ಮೈತುಂಬಿಕೊಂಡಿದ್ದ ಸುರಹೊನ್ನೆಯನ್ನು ಕಂಡು ಹೂ ಬಿಡಿಸಿಕೊಳ್ಳುವ ಭರದಲ್ಲಿ ಮರದ ರೆಂಬೆಕೊಂಬೆಗಳನ್ನು ಮುರಿಯುತ್ತಾರೆ. ಹೂವಿಯ ರುಂಡ ಮನುಷ್ಯಳಾಗಿ, ಮುಂಡ ಮರವಾಗಿ ಮೈಯೆಲ್ಲಾ ಗಾಯವಾಗಿರುತ್ತದೆ. ರೆಂಬೆ ಕೊಂಬೆಗಳನ್ನು ಮುರಿದಿದ್ದ ಪರಿಣಾಮವಾಗಿ ಹೂವಿ ಸಾಯುವ ಹಂತದಲ್ಲಿದ್ದಾಳೆ ಆ ಹೂವಿನ ಮರವನ್ನು ಕಂಡ ರೈತನೊಬ್ಬ ಇನ್ನು ಜೀವ ಇರೋ ಹಾಗಿದೆ. ಇದನ್ನು ನೆಟ್ಟು ನೀರೆರೆದರೆ ಬದುಕಬಹುದು ಎಂದು ಹೂವಿನ ಮರಕ್ಕೆ ಮರುಜನ್ಮ ನೀಡುತ್ತಾನೆ. ಎಷ್ಟೇ ಪ್ರಯತ್ನಿಸಿದರೂ ಮರಕ್ಕೆ ಜೀವ ಬಂತೇ ಹೊರತು. ಅರೆಮಾನವ ಅರೆಮರವಾಗಿದ್ದ ಹೂವಿ ಮಾತ್ರ ಕಣ್ತೆರೆಯಲಿಲ್ಲ. ಅವಳ ಗಂಡ ಹೊನ್ನ ಬಂದು ಆ ಮರದ ಮೇಲೆ ಮಂತ್ರಿಸಿದ ನೀರನ್ನು ಸುರಿದಾಗ ಹೂವಿನ ಮರ ಹೂವಿಯಾಗಿ ರೂಪ ಪಡೆಯುತ್ತದೆ. ಈಗ ಹೊನ್ನ ಮತ್ತು ಹೂವಿ ಅತ್ಯಂತ ಸಂತೋಷದಿಂದ ಅಪ್ಪಾಲೆ -ತಿಪ್ಪಾಲೆ ತಿರುಗುತ್ತಾರೆ" ಎಂದು ನಾಟಕದ ಕೊನೆ ದೃಶ್ಯದ ಕೊನೆಯ ಸಾಲುಗಳನ್ನು ವಿವರಿಸುತ್ತಿರುವಾಗ, ಈ ಕಥೆಯಲ್ಲಿ ನನಗೆ ಆಸಕ್ತಿಯಿಲ್ಲವೆಂದು ಹೇಳಿದ ಅದೇ ಹುಡುಗ ಎದ್ದು ನಿಂತು, ಹರಿದು ಮುರಿದು ಹೋಗಿದ್ದ ಹೂವಿನ ಮರವನ್ನು ಪುನಃ ನೆಟ್ಟು ಬದುಕಿಸಿದ ರೈತನ ಪಾತ್ರ ನನಗೆ ಬಹಳ ಇಷ್ಟವಾಯಿತು ಮ್ಯಾಮ್ ಎಂದು ಹೇಳುವಾಗ ಸಾಗರಿ ಅವನತ್ತ ಒಂದು ಮಂದಹಾಸದ ನಗೆಯನ್ನು ಬೀರುತ್ತಾಳೆ.
- ರೂಪಾ ಹೊಸದುರ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!