1.ನಗು ಮಗು, ನಗು ಮಗು ಮೊಗವನು ಅರಳಿಸಿ 

ಕಣ್ಣೆವೆ ಮಿಟುಕಿಸಿ ನಗು ಮಗುವೇ 

ಬಗೆಬಗೆ ಬಣ್ಣದ ಚೆಲುವನು ಸೂಸುತ 

ನಗುನಗುತಿರು ನೀ.. ಸಿರಿಮೊಗವೇ.. //ನಗು ಮಗು// 

2.ತುಟಿಗಳ ಎಡೆಯಲಿ ಕಿರುನಗೆ ಬೀರುತ 

ಪುಟಿಯುತ ನೆಗೆಯುತ ನಗು ಮಗುವೇ..

ಕಣ್ಣು ತಪ್ಪಿಸುತ ಕೈಸಿಗಡೊಡುವ 

ನಿನ್ನನು ಹಿಡಿಯಲು ನಾ ಬರುವೇ//ನಗು ಮಗು//

3.ತೊದಲಿನ ಮಾತುಗಳೆಡೆಯಲಿ ಆ ನಗು-

ಮುಖದಲಿ ಹೊಳೆಯುವ ಮಿರಮಿರಗೂ..

ನೋಡುತ ಸಂತಸ ತುಂಬುವುದೆಲ್ಲರ 

ಮುಖ ಮೈ ಮನದಾ.. ಒಳಹೊರಗೂ.. //ನಗು ಮಗು//

4.ಬಿದ್ದೇ..ನೆಂದು ನೀ.. ಹೆದರದಿರೂ ಮಗು..

ಓಡದಿರೂ ಮನೆಯೊಳಹೊರಗೂ..

ನಿದ್ದೆಯು ಬರುವುದೇ? ಗದ್ದಲ ಮಾಡದೆ 

ಹೊದ್ದು ಕಣ್ಣನು ಮುಚ್ಚಿ ನೀ ಮಲಗೂ.. //ನಗು ಮಗು//

5.ತಂದೆಯ ಪ್ರೀತಿಯ ಜ್ಯೋತಿಯು ನೀ.. ಮಗು 

ತಾಯಿಯ ಮಮತೆಯ ಕುಡಿ ಸೆರಗೂ..

ಅವರಾಶ್ರಯದಲಿ ಬೆಳೆಯುತಲಿರುತಿಹ 

ನೀನಾಗುವೆ ಬಾ…ಳಿಗೆ ಬೆಳಗೂ.. //ನಗು ಮಗು//

6.ನಗುವೆ ಚಂದವು ನಗುಮೊಗ ಅಂದವೂ..

ಮನೆ ಮನ ತುಂಬುವುದಾನಂದಾ.. 

ಮುಗುಳುನಗೆಯ ಆ ಮಗುವಿನ ನಗೆಮೊಗ 

ಸುಖಸಂತೋಷದ ಅನುಬಂಧಾ.. //ನಗು ಮಗು//

     -ಅನಂತ ಭಟ್ ಪೊಳಲಿ