ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಬಾನಿನಗಲ
ಹೊಡೆದು ಹೊಡೆದು ಪಟಪಟ
ಗಡಿನಾಡ ಧೀಮಂತ ಕವಿ ಪ್ರಾತಃಸ್ಮರಣೀಯರಾದ ಡಾ ನಾಡೋಜ ಕಯ್ಯಾರ ಕಿಞ್ಞಣ್ಣರೈಗಳ ರಚನೆಯಿದು. ಪ್ರಾಥಮಿಕ ಶಾಲೆಯಲ್ಲಿ ಬಾವುಟ ಹಿಡಿದು ನಲಿದ ದಿನಗಳ ನೆನಪಿರಬಹುದು. ಆಗಿನ ಸಂಭ್ರಮ ಹೇಳತೀರದು, ವಯಸ್ಸು ಸಹ ಹಾಗಿತ್ತು. ಅಧ್ಯಾಪಕರ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದ ಬಾಲ್ಯದ ದಿನಗಳ ನೆನಪುಗಳದು. ಕನ್ನಡ ಭಾಷೆ, ಕನ್ನಡದ ಬಗ್ಗೆ ಅಪಾರ ಕಾಳಜಿಯಿದ್ದವರು ಶ್ರೀಯುತ ಕಯ್ಯಾರರು ಎಂದು ಅವರ ಹಲವಾರು ಬರೆಹಗಳನ್ನು ಓದಿದಾಗ ಅರಿವಿಗೆ ಬರುವುದು. ಅನ್ಯ ಪ್ರಹರವನ್ನು ತಡೆಯಿರಿ, ಎಷ್ಟು ಬೇಕೋ ಅಷ್ಟೇ ಸ್ವೀಕರಿಸಿರೆಂದು ಕರೆಯಿತ್ತವರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಅಪಾರ ಶ್ರಮಪಟ್ಟರೂ ಕೈಗೂಡಲಿಲ್ಲವೆನ್ನುವ ನೋವು, ಬೇಸರ ಪಟ್ಟವರು.
ಪ್ರಾದೇಶಿಕ ಬರಹಗಳಿಗೆ ಒತ್ತು ನೀಡಿ ಎಚ್ಚರಿಸಿದ ಸಾಹಿತ್ಯದ ಮೇರು ಪರ್ವತದ ಮಹನೀಯರಲ್ಲಿ ಓರ್ವರು. 'ಪ್ರಯತ್ನಕ್ಕೆ ತಕ್ಕ ಫಲ ದೊರಕಲೆಂದು ಆಶಿಸುವುದು ತಪ್ಪಲ್ಲ. ಆದರೆ ಪ್ರಯತ್ನವನ್ನೇ ಮಾಡದಿರುವುದು ತಪ್ಪಲ್ಲವೇ? 'ಇದು ಅವರ ನುಡಿ. ಗಿಡದಲ್ಲಿ ಹೇಗೆ ಮೊಗ್ಗೊಂದು ಅರಳಲು ಶ್ರಮ ವಹಿಸುತ್ತದೋ ಅಂಥ ಶ್ರಮವಿರಬೇಕು ನಮ್ಮಲ್ಲಿ. ಸುಖಾಸುಮ್ಮನೆ ಕುಳಿತಲ್ಲಿಗೆ ಯಾವುದೂ ಬಾರದು, ಇದನ್ನು ಅರ್ಥ ಮಾಡಿಕೊಳ್ಳಿರೆಂದರು. 'ಕನ್ನಡ, ತಾಯಿಭಾಷೆ, ನೆಲದ ಭಾಷೆ, ಕರುನಾಡಿನ ಜೀವಾಳವೆಂದರಾಗದು, ಆ ನಿಟ್ಟಿನಲ್ಲಿ ಸಾಗಿರಿ, ವ್ಯವಹರಿಸಿರಿ ಎಂದು ಕರೆಯಿತ್ತರು. ಬಂಧುಗಳೇ, ಹಿರಿಯರ ಹಾದಿಯನ್ನು ಮರೆಯದಿರೋಣ. ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸೋಣ.
(ಸಂಗ್ರಹ) -ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!