ಬಿದಿಗೆ ಚಂದ್ರ ಬಂದ ನೋಡು
ದೀಪ ಹಚ್ಚಿದಂತೆ ಜೋಡು
ಯಾರ ಮನೆಯು ಅಲ್ಲಿ ಇಹುದೊ
ಯಾರು ಬಲ್ಲರು?
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ತೆಂಗಿನ ಮರದ ಮೇಲೊಂದು ಮಂಗ
ತೆಂಗಿನ ಮರದಡಿ ಬಂದನು ರಂಗ
ನಡೆದಳು ಗೌರಿ ಮಧುರಾಪುರಕೆ
ತುಂಬಿದ ಕೊಡವು ತಲೆಯ ಮೇಲೆ
ಸೌದೆ ತಾರೋ ಮಲ್ಲ
ಕತ್ತಿ ತಾಗಿತಲ್ಲ?
ಕಿಟ್ಟು ಪುಟ್ಪು ಕೂಡಿಕೊಂಡು
ಕಟ್ಟಿದರೊಂದು ಕಟ್ಟು
ಗಿಳಿ ಗಿಳಿ*
ಯಾವ ಗಿಳಿ
ಹಸಿರು ಗಿಳಿ
ಯಾವ ಹಸಿರು
ರೆಕ್ಕೆ ಹಸಿರು
ಯಾವ ರೆಕ್ಕೆ
ಹಕ್ಕಿ ರೆಕ್ಕೆ
ಯಾವ ಹಕ್ಕಿ
ಬಣ್ಣದ ಹಕ್ಕಿ
ಯಾವ ಬಣ್ಣ
ನೀಲಿ ಬಣ್ಣ
ಯಾವ ನೀಲಿ
ಆಕಾಶ ನೀಲಿ
ಈ ಶಿಶುಗೀತೆ, ಸರಪಳಿಗಳನ್ನು ಅಭಿನಯದೊಂದಿಗೆ ನಮ್ಮ ಗುರುಗಳು ಅಥವಾ ತಾಯಿ ಚಿಕ್ಕವರಿದ್ದಾಗ ಕಲಿಸಿದ ನೆನಪಿರಬಹುದಲ್ಲವೇ? ಬಾಲವಾಡಿ, ಅಂಗನವಾಡಿ,೧, ೨ ನೆಯ ತರಗತಿಗಳಲ್ಲಿ ಸಾಮಾನ್ಯವಾಗಿ ಶಿಶುಗೀತೆಗಳನ್ನು ಹೆಚ್ಚು ಕಲಿಸಲಾಗುತ್ತದೆ. ಪುಟ್ಟ ಮಕ್ಕಳ ಮನಸ್ಸನ್ನು ಒಂದೆಡೆ ಹಿಡಿದಿಡಲು, ಸರಳ ಭಾಷಾಪದಗಳು ಇದರಲ್ಲಿರುವುದರಿಂದ ಹೇಳಲು ಸುಲಭ.ಅಭಿನಯದೊಂದಿಗೆ ಶಿಕ್ಷಕರು ಕಲಿಸಿದಾಗ ಮಕ್ಕಳು ಸಂತಸಪಡುತ್ತಾರೆ. ಬಾಯಿಪಾಠಕ್ಕೂ ಸುಲಭ.ಚಂಚಲ ಮನಸ್ಸನ್ನು ಹಿಡಿದಿಡಲು,ಮಕ್ಕಳನ್ನು ಪಠ್ಯ ಚಟುವಟಿಕೆಯತ್ತ ಆಕರ್ಷಿಸಲು ಶಿಶುಗೀತೆಗಳು ಸಹಕಾರಿ.ಕೆಲವೊಂದು ಗೀತೆಗಳು ಪ್ರಾಸದಿಂದಲೂ ರಚನೆಯಾಗಿರುತ್ತದೆ. ನೃತ್ಯಾಭಿನಯ ಮಕ್ಕಳಿಗೆ ತುಂಬಾ ಇಷ್ಟ. ಕಷ್ಟವಾದರೂ ಸಂತೋಷದಿಂದಲೇ ಕಲಿಯುತ್ತಾರೆ. ಸರಳ ಕನ್ನಡ ಅಕ್ಷರಗಳನ್ನು ಜೋಡಿಸಿ, ಪದಗಳಿಂದ (ರಂಗ, ಮಂಗ, ಸಂಗ, ನೋಡು, ಆಡು, ಆಟ, ಕೂಟ, ಚಂದ, ಅಂದ, ಮಂದ, ಪುಟ್ಟ ,ಕಿಟ್ಟ ಇತ್ಯಾದಿ) ಸಣ್ಣ ಸಣ್ಣ ಸಾಲುಗಳನ್ನು ಆದಷ್ಟೂ ಇಂತಹ ಸಣ್ಣ ಗೀತೆಗಳನ್ನು ಹೇಳಲು, ಬರೆಯಲು ಪ್ರಯತ್ನಿಸೋಣ, ಮಕ್ಕಳಿಗೂ ಕಲಿಸೋಣ. ಮಕ್ಕಳ ಕವನಗಳು ಸ್ವಲ್ಪ ಪ್ರೌಢಮಟ್ಟದಲ್ಲಿರುತ್ತದೆ.
ಶಿಶು ಮತ್ತು ಮಕ್ಕಳ ಸಾಹಿತ್ಯದ ಕೈಂಕರ್ಯದಲ್ಲಿ ನಮ್ಮ ನಾಡಿನ ಅನೇಕ ಹಿರಿಯ ಸಾಹಿತಿಗಳು ಹೆಸರುವಾಸಿಗಳಾಗಿದ್ದಾರೆ.ಪ್ರಕೃತ ವರ್ತಮಾನದಲ್ಲೂ ಇದ್ದಾರೆ. ಮಕ್ಕಳ ಕವನ, ಗೀತೆಗಳೆಂದರೆ ಸರಳ ಪದಗಳಿಂದ ಸುಲಭದಲ್ಲಿ ಅರ್ಥವಾಗುವಂತಿರಬೇಕು. ಸರಳ ಕನ್ನಡ ಪದಗಳಿಗೇನೂ ಕೊರತೆಯಿಲ್ಲ ಅಲ್ಲವೇ?
(ಸಂಗ್ರಹ) ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!